ಹೆಣ್ಮಕ್ಳೇ ಸ್ಟ್ರಾಂಗು ಅಂತ ಶತಮಾನದ ಹಿಂದೆಯೇ ತೋರಿಸಿದ್ದ ರಾಜಮಾತೆ ಕೆಂಪನಂಜಮ್ಮಣ್ಣಿ..!

KannadaprabhaNewsNetwork |  
Published : Dec 21, 2024, 01:15 AM ISTUpdated : Dec 21, 2024, 12:51 PM IST
ಡಾ.ಗಜಾನನ ಶರ್ಮ ಮಾತನಾಡುತ್ತಿರುವುದು., | Kannada Prabha

ಸಾರಾಂಶ

ಇಂದು ನಾವು ‘ಹೆಣ್ಮಕ್ಳೇ ಸ್ಟ್ರಾಂಗು ಗುರು’ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ, ಇದನ್ನು ಒಂದೂಕಾಲು ಶತಮಾನದ ಹಿಂದೆಯೇ ಸಾಧಿಸಿ ತೋರಿಸಿದವರು ರಾಜಮಾತೆ ಕೆಂಪನಂಜಮ್ಮಣ್ಣಿ

 ಮಂಡ್ಯ : ಇಂದು ನಾವು ‘ಹೆಣ್ಮಕ್ಳೇ ಸ್ಟ್ರಾಂಗು ಗುರು’ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ, ಇದನ್ನು ಒಂದೂಕಾಲು ಶತಮಾನದ ಹಿಂದೆಯೇ ಸಾಧಿಸಿ ತೋರಿಸಿದವರು ರಾಜಮಾತೆ ಕೆಂಪನಂಜಮ್ಮಣ್ಣಿ. ಅಂದಿನ ಕಾಲದಲ್ಲಿ ನಾಡಿನ ಮುಂದಿನ ನೂರು ವರ್ಷಗಳ ಅಭಿವೃದ್ಧಿಗೆ ಬೇಕಾದ ಬೀಜಾಂಕುರ ಮಾಡಿದ ದಿಟ್ಟ ಮಹಿಳೆ ಅವರು ಎಂದು ವಿದ್ವಾಂಸ, ಬರಹಗಾರ ಡಾ.ಗಜಾನನ ಶರ್ಮ ಬಣ್ಣಿಸಿದ್ದಾರೆ.

ಸಮ್ಮೇಳನದ ಪ್ರಧಾನ ಸಭಾಂಗಣದ ರಾಜಮಾತೆ ಕೆಂಪಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಶುಕ್ರವಾರ ಅಪರಾಹ್ನ ನಡೆದ ‘ಮಂಡ್ಯ ಜಿಲ್ಲೆಗೆ ಕೊಡುಗೆ ನೀಡಿದ ಮಹನೀಯರು’ ಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು.

ರಾಜಮಾತೆ ಕೊಟ್ಟ ವಿದ್ಯುತ್, ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಟ್ಟ ನೀರಿನಿಂದ ನಾಡು ಉಳಿಯಿತು, ಬೆಳೆಯಿತು. 12ರ ಹರೆಯದಲ್ಲಿ ಮದುವೆ, 28ರಲ್ಲಿ ವಿಧವೆ ಪಟ್ಟ ಪಡೆದ ರಾಜಮಾತೆ, ಐವರು ಮಕ್ಕ‍ಳಿಗೆ ಸಂಸ್ಕಾರ ನೀಡಿದ ಪರಿ ಶ್ರೇಷ್ಠ. ಶಿವನಸಮುದ್ರ ವಿದ್ಯುತ್ ಸ್ಥಾವರ ಯೋಜನೆಗಾಗಿ ತನ್ನ 32ನೇ ವಯಸ್ಸಿನಲ್ಲಿ ತಂತ್ರಜ್ಞಾನ ಬ‍‍ಳಸಿ ಯಂತ್ರಗಳನ್ನು ಸಾಗಿಸಿದ್ದು, ಸುದೀರ್ಘ ವಿದ್ಯುತ್ ಮಾರ್ಗ ನಿರ್ಮಿಸಿದ್ದು, ನಿಗದಿತ ಹದಿನೆಂಟೇ ತಿಂಗಳುಗಳಲ್ಲಿ ಯೋಜನೆ ಪೂರ್ತಿಗೊಳಿಸಿದ್ದು ಅಭೂತಪೂರ್ವ. ಬೆೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ನಿರ್ಮಾಣಕ್ಕೆ ನೆಲ, ಹಣ ನೀಡಿದ್ದು ಇವರೇ. ಪುತ್ರಿಯ ಮದುವೆ ಸಂದರ್ಭ ಬೆಂಕಿ ಆಕಸ್ಮಿಕಕ್ಕೆ ಸಿಲುಕಿ ಸುಟ್ಟ ಅರಮನೆ ಬೂದಿ ಮೇಲೆ ಈಗ ನಾವು ಕಾಣುವ ಸುಂದರ ಅರಮನೆ ನಿರ್ಮಿಸಿದ್ದು ರಾಜಮಾತೆ ಎಂದು ಡಾ.ಶರ್ಮ ನೆನಪಿಸಿದರು.

40 ವರ್ಷಗಳ ಕಾಲ ಮೈಸೂರು ಸಂಸ್ಥಾನ ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಮೈಸೂರು ಸಂಸ್ಥಾನ ಐವತ್ತು ವರ್ಷಗಳ ಹಿರಿತನ ಕಂಡಿತು ಎಂದು ಅಭಿಪ್ರಾಯಪಟ್ಟವರು ಡಾ.ಚಿನ್ನಸ್ವಾಮಿ ಸೋಸಲೆ. ‘ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್-ಮೈಸೂರು ಪ್ರಾಂತ್ಯಕ್ಕೆ ನೀಡಿದ ಕೊಡುಗೆ’ ಕುರಿತು ಮಾತನಾಡಿದ ಅವರು ಹೇಳಿದ್ದು:

-ಅಣೆಕಟ್ಟುಗಳು, ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿದ ನಾಲ್ವಡಿ ಒಡೆಯರ್ ನಾಡಿಗೆ ಬೌದ್ಧಿಕ ದೇವಾಲಯ ನಿರ್ಮಿಸಿದರು. ‘ಕರ್ನಾಟಕ ಮಾತನಾಡುವಂತೆ’ ಮಾಡಿದರು.

-1916ರಲ್ಲಿ ಅವರು ಮೈಸೂರು ವಿ.ವಿ.ನಿರ್ಮಿಸಿದರು. 1925ರಲ್ಲಿ ಅದೇ ವಿ.ವಿ.ಯಿಂದ ದಲಿತ ಸಮುದಾಯ ಬಿ.ರಾಚಪ್ಪ ಪ್ರಥಮ ಬಾರಿಗೆ ಪದವಿ ಪಡೆದಿದ್ದು ಇತಿಹಾಸ, ಈ ಕ್ರಾಂತಿಗೆ ಈಗ ಶತಮಾನದ ಸಂಭ್ರಮ.

-ಪ್ರಥಮ ಬಾರಿಗೆ ವಿಮಾನ ತಯಾರಿಗೆ ಎಚ್ಎಎಲ್ ಕಾರ್ಖಾನೆ ಸ್ಥಾಪಿಸಿದ್ದು, ಜಲವಿದ್ಯುತ್ ಯೋಜನೆ ರೂಪಿಸಿದ್ದು, ದಲಿತರಿಗೆ ಅರಮನೆ ಪ್ರವೇಶ ಮಾಡಿಸಿದ್ದು, ಇತ್ಯಾದಿ ದೂರದೃಷ್ಟಿಯ, ಕ್ರಾಂತಿಕಾರದ ಯೋಜನೆಗಳಿಂದ ಅವರು ‘ನಾಲ್ವಡಿ ಭೂಪ, ಮನೆ ಮನೆ ದೀಪ’ ಎಂಬ ಕೀರ್ತಿಗೆ ಪಾತ್ರರಾಗಿದ್ದರು.

‘ಸರ್. ಎಂ. ವಿಶ್ವೇಶ್ವರಯ್ಯ-ಮಂಡ್ಯ ಜಿಲ್ಲೆಯ ಅನ್ನದಾತ’ ಕುರಿತು ಪ್ರೊ.ಚಂದ್ರೆಶೇಖರ ಎಸ್.ಉಷಾಲ, ‘ಸರ್ ಮಿರ್ಜಾ ಇಸ್ಮಾಯಿಲ್-ಮೈಸೂರು ಪ್ರಾಂತ್ಯದ ಅಭಿವೃದ್ಧಿ’ ಕುರಿತು ಡಾ.ನಯಿಂಉರ್ ರಹಮಾನ್ ಮಾತನಾಡಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಇತಿಹಾಸ ತಜ್ಞ ಪ್ರೊ.ಎಂ.ವಿ.ಶ್ರೀನಿವಾಸ್ ಅವರು, ನಾಲ್ವರೂ ಸಾಧಕರ ಸುಧಾರಣೆ ಇಂದಿನ ಪೀಳಿಗೆಗೆ ಸ್ಫೂರ್ತಿದಾಯಕ. ಈ ಸಾಧನೆ ಮಂಡ್ಯಕ್ಕೆ ಸೀಮಿತವಲ್ಲ, ರಾಜ್ಯದುದ್ದಕ್ಕೂ ಪ್ರಯೋಜನವಾಗಿದೆ ಎಂದರು.

ಡಾ.ಕೃಷ್ಣೇಗೌಡ ಹುಸ್ಕೂರು ನಿರೂಪಿಸಿದರು. ಹರ್ಷ ಪಣ್ಣೆದೊಡ್ಡಿ ಸ್ವಾಗತಿಸಿದರು. ಅಪ್ಪಾಜಪ್ಪ ಬಿ.ಎಂ. ವಂದಿಸಿದರು. ಸುಜಾತ ಕೃಷ್ಣ ನಿರ್ವಹಿಸಿದರು.

ರಾಜಕೀಯ ಮೀರಿ ಕರ್ನಾಟಕದ ಬಗ್ಗೆ ಕನಸು ಕಂಡ ಸರ್ ಎಂ.ವಿಶ್ವೇಶ್ವರಯ್ಯ ಗಾಂಧೀಜಿಯಷ್ಟೇ ಸರಳರು. ಆ ಕಾಲದಲ್ಲಿ ನಾಲ್ವಡಿ ಒಡೆಯರ್ ಗರ್ಭಗುಡಿ ದೇವರಾಗಿದ್ದರೆ, ಸರ್ ವಿಶ್ವೇಶ್ವರಯ್ಯ ಉತ್ಸವ ಮೂರ್ತಿ ಎಂದೇ ಪ್ರಸಿದ್ಧರಾಗಿ ಜೊತೆ ಜೊತೆಗೇ ದುಡಿದರು.

-ಪ್ರೊ.ಚಂದ್ರಶೇಖರ ಎಸ್.ಉಷಾಲ

ನಾಲ್ವಡಿ ಒಡೆಯರ್ ಹಾಗೂ ಸರ್ ಮಿರ್ಜಾ ಇಸ್ಮಾಯಿಲ್ ಅವರನ್ನು ಜನುಮದ ಜೋಡಿ ಎನ್ನಬಹುದು. ಮಿರ್ಜಾ ಅವರು ನಾಲ್ವಡಿ ಒಡೆಯರ ಅಂತಃಸಾಕ್ಷಿಯಾಗಿ ಕೆಲಸ ಮಾಡಿದರು ಎಂದು ವಿದ್ವಾಂಸರೇ ಬಣ್ಣಿಸಿದ್ದಾರೆ.

-ಡಾ.ನಯಿಂಉರ್ ರಹಮಾನ್

PREV

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ