ನಿವೇಶನ ರಹಿತ ಕುಟುಂಬಗಳಿಗೆ ಶೀಘ್ರ ಹಕ್ಕುಪತ್ರ ವಿತರಣೆ

KannadaprabhaNewsNetwork | Published : Jan 12, 2025 1:19 AM

ಸಾರಾಂಶ

ಕಳೆದ ಇಪ್ಪತ್ತು ವರ್ಷಗಳಿಂದ ಬುಕ್ಕಾಪಟ್ಟಣ ಗ್ರಾಮದಲ್ಲಿ ನಿವೇಶನ ರಹಿತ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯ ಸ್ಥಗಿತಗೊಂಡಿದೆ. ಆಶ್ರಯ ಯೋಜನೆಯಡಿ ಹಕ್ಕು ಪತ್ರ ವಿತರಿಸಲು ಈಗಾಗಲೇ ಬುಕ್ಕಾಪಟ್ಟಣ ಸ. ನಂ. 93/2ಎನಲ್ಲಿ 2 ಎಕರೆ ಹಾಗೂ ಬಾಳಾಪುರ ಸ. ನಂ. 104ರಲ್ಲಿ 6.20 ಎಕರೆ ಜಮೀನು ಗುರುತಿಸಲಾಗಿದೆ. ಸದರಿ ಜಮೀನಿನಲ್ಲಿ ಸೂಕ್ತ ನಿವೇಶನ ವಿಂಗಡಣೆ ಮಾಡಿ ಅರ್ಹರಿಗೆ ವಿತರಿಸಲಾಗುವುದು ಎಂದು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಹರೀಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿರಾ

ತಾಲೂಕಿನ ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಅವರು, ಬುಕ್ಕಾಪಟ್ಟಣ ಹೋಬಳಿ ಕೇಂದ್ರವಾಗಿದ್ದು, ಮುಂಬರುವ ವರ್ಷಗಳಲ್ಲಿ ಉತ್ತಮ ಬೆಳವಣಿಗೆಯಾಗಿ ಅಭಿವೃದ್ಧಿ ಪಥದಲ್ಲಿ ಸಾಗಲಿದೆ. ಭವಿಷ್ಯದ ದೃಷ್ಟಿಯಿಂದ ಬಾಳಾಪುರ ಗ್ರಾಮ ಸ. ನಂ. 104ರಲ್ಲಿನ 7.34 ಎಕರೆ ಜಮೀನಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಎರಡು ಎಕರೆ, ಕೃಷಿ ಉತ್ಪನ್ನ ಮಾರುಕಟ್ಟೆಗೆ ಒಂದು ಎಕರೆ, ನಾಡಕಚೇರಿಗೆ ಒಂದು ಎಕರೆ, ಕಾಲೇಜು ಶಿಕ್ಷಣ ಇಲಾಖೆಗೆ ಒಂದು ಎಕರೆ ಜಮೀನು ಕಾಯ್ದಿರಿಸುವಂತೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ. ಬುಕ್ಕಾಪಟ್ಟಣದಲ್ಲಿ ಈ ಹಿಂದೆ ಸಂತೆ ನಡೆಯುತ್ತಿದ್ದ ಸ್ಥಳದಲ್ಲಿ ಸರಿ ಸುಮಾರು ಐವತ್ತು ಲಕ್ಷ ರು. ವೆಚ್ಚದಲ್ಲಿ ವಾಣಿಜ್ಯ ಸಮುಚ್ಛಯ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ತೀರ್ಮಾನ ಕೈಗೊಂಡಿರುವುದು ಶ್ಲಾಘನೀಯ. ವಾಣಿಜ್ಯ ಮಳಿಗೆಗಳ ನಿರ್ಮಾಣದಿಂದ ಪಂಚಾಯಿತಿ ಆದಾಯ ದುಪ್ಪಟ್ಟಾಗಲಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲ ಕ್ರೋಢಿಕರಿಸಿದಂತಾಗುತ್ತದೆ ಎಂದ ಅವರು, ತೆರಿಗೆ ವಸೂಲಿಯಲ್ಲಿ ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿ ನಿರೀಕ್ಷಿತ ಗುರಿ ಸಾಧಿಸುವಲ್ಲಿ ವಿಫಲವಾಗಿದೆ. ತೆರಿಗೆ ವಸೂಲಿ ಕಾರ್ಯ ಚುರುಕು ಗೊಳಿಸುವಂತೆ ಸೂಚನೆ ನೀಡಿದರು ಹಾಗೂ ಬಾಳಾಪುರ ಸ. ನಂ. 104 ರಲ್ಲಿನ ಜಮೀನಿನ ಸ್ಥಳ ಪರಿಶೀಲನೆ ಮಾಡಿ ಭದ್ರಾ ಮೇಲ್ದಂಡೆ ಯೋಜನೆಯ ನಾಲೆ ಹಾದು ಹೋಗಿರುವ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸುವಂತೆ ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷ ಮುಜಾಹಿದ್, ಸದಸ್ಯರಾದ ಕಾಂತರಾಜ್, ಬಸವರಾಜ್, ಗುರುರಾಜ್, ಶಿರಾ ತಾಪಂ ಮಾಜಿ ಅಧ್ಯಕ್ಷ ಬಿ.ಆರ್.ಮಂಜುನಾಥ್, ಪಿಡಿಒ ಶಿವಶಂಕರ್, ಗ್ರಾಪಂ ಮಾಜಿ ಸದಸ್ಯರಾದ ಬಿ.ಡಿ.ದ್ಯಾಮಣ್ಣ, ಬಿಲ್ ಕಲೆಕ್ಟರ್ ನಾಗರಾಜ್ ಸೇರಿದಂತೆ ಹಲವರು ಹಾಜರಿದ್ದರು.

Share this article