ಕನ್ನಡಪ್ರಭ ವಾರ್ತೆ ಆಳಂದ
ಸಂತ ರಾಘವ ಚೈತನ್ಯರ ಸಮಾಧಿ ಮಹಾರಾಷ್ಟ್ರದ ನೆರೆಯ ಉಮರ್ಗಾ ತಾಲೂಕಿನ ಗಂಜೋಟಿ ಗ್ರಾಮದಲ್ಲಿನ ದೇಶಪಾಂಡೆ ಅವರ ಮನೆಯಲ್ಲಿದೆ ಎಂದು ಮುಖ್ಯಮಂತ್ರಿ ಸಲಹೆಗಾರರೂ ಆಗಿರುವ ಶಾಸಕ ಬಿ.ಆರ್. ಪಾಟೀಲ್ ಅವರು ಹೇಳಿದ್ದಾರೆ.ಗುಂಜೋಟಿಯಲ್ಲಿ ಇತ್ತೀಚೆಗೆ ರಾಘವ ಚೈತನ್ಯ ದೇವಸ್ಥಾನ್ಕಕೆ ಭೇಟಿ ನೀಡಿ ಮಾತನಾಡಿದ ಅವರು, ರಾಘವ ಚೈತನ್ಯ ಅವರ ಕುರಿತು ದೇಶಪಾಂಡೆ ಅವರ 8 ತಲೆಮಾರಿನ ಕುಟುಂಬದವರನ್ನು ಮಾತನಾಡಿಸಿದ್ದೇನೆ. ಕುಟುಂಬಸ್ಥರು ಹೇಳುವಂತೆ ರಾಘವ ಚೈತನ್ಯನರು ನಮ್ಮ ಊರಿಗೆ ಬಂದು ನಮ್ಮ ಮನೆಗೆ ಬಂದಿದ್ದರು. ನಮ್ಮ ಮನೆಗೆ ಬಂದು ಕುಳಿತುಕೊಳ್ಳಲು ಒಂದಿಷ್ಟು ಜಾಗವನ್ನು ಕೇಳಿದರು. ಆಗ ನಮ್ಮ ಮನೆತನದವರು ಕಾಶಿಯಾತ್ರೆಗೆ ಹೊಗಿದ್ದರಿಂದ ಮನೆಯಲ್ಲಿ ಕೆಲಸ ಮಾಡುವವರು ಅವರಿಗೆ ಜಾಗವನ್ನು ನೀಡಿದರು.
ಹೀಗಾಗಿ ರಾಘವ ಚೈತನ್ಯರು ಆರು ತಿಂಗಳು ನೆಲೆನಂತು ತಪಸ್ಸು ಮಾಡಿ ಸಮಾಧಿಯಾಗಿದ್ದಾರೆ ಎಂದು ಕುಟುಂಬದವರೇ ತಿಳಿಸಿದ್ದಾರೆ. ಇಂದಿಗೂ ನಾಡಿನ ಜನರೆಲ್ಲರೂ ಪ್ರತಿದಿನ ಅವರ ಸಮಾಧಿಯ ಗದ್ದುಗೆಗೆ ಭೇಟಿ ನೀಡಿ ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಶಾಸಕ ಪಾಟೀಲ್ ಮಾಹಿತಿ ಹಂಚಿಕೊಂಡರು.ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರಿಗೆ ಚುನಾವಣೆ ಸೋತಾಗ ಮತ್ತು ಗೆದ್ದಾಗ ಮಾತ್ರ ಆಳಂದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿ ರಾಘವ ಚೈತನ್ಯ ಲಿಂಗ ನೆನಪಾಗುತ್ತದೆ. ನಿಜವಾದ ರಾಘವ ಚೈತನ್ಯ ಅವರ ಸಮಾಧಿ ಗಂಜೋಟಿಯಲ್ಲಿದೆ. ದರ್ಗಾದ ಲಿಂಗದ ವಿಚಾರ ಕೋರ್ಟ್‌ನಲ್ಲಿದ್ದು ಈ ಬಗ್ಗೆ ಹೆಚ್ಚು ಮತನಾಡಲ್ಲ ಎಂದಿದ್ದಾರೆ.
ಸುಭಾಷ ಗುತ್ತೇದಾರ ಅವರು ಲಾಡ್ಲೆ ಮಶಾಕ್ ದರ್ಗಾದಲ್ಲಿ 8 ಕುರಿಗಳನ್ನು ಕೊಯ್ದು ಕಂದೂರಿ ಮಾಡಿ ಮಟನ್ ತಿನ್ನುತ್ತಾರೆ. ಮತ್ತೊಂದೆಡೆ ಅದೇ ದರ್ಗಾದ ವಿರುದ್ಧವೇ ಹೋರಾಟಕ್ಕೆ ನಿಲ್ಲುತ್ತಾರೆ. ಅವರದ್ದು ದ್ವಂದ್ವ ರಾಜಕೀಯ ನಡೆಯಾಗಿದೆ ಎಂದು ಬಿಆರ್ ಪಾಟೀಲ್ ಟೀಕಿಸಿದ್ದಾರೆ.ಬ್ರಾಹ್ಮಣ ಸಮುದಾಯದಲ್ಲಿ ಸತ್ತ ಮೇಲೆ ಲಿಂಗ ಪ್ರತಿಷ್ಠಾಪನೆ ಮಾಡಲ್ಲ, ಸಮಾಧಿಯಿರುತ್ತದೆ. ಲಿಂಗ ಕೂಡಿಸುವುದಿಲ್ಲ. ಸಮಾಧಿ ಮೇಲೆ ಲಿಂಗ ಕೂಡಿಸುವ ಪರಂಪರೆ ಲಿಂಗಾಯತರಲ್ಲಿದೆ, ಸಮಾಧಿ ಲಿಂಗಕ್ಕೆ ಶಿವರಾತ್ರಿ ದಿವಸ ಪೂಜೆ ಮಾಡಲ್ಲ. ಮನೆಯಲ್ಲಿ, ದೇವಸ್ಥಾನದಲ್ಲಿನ ಇಷ್ಟಲಿಂಗಕ್ಕೆ ಪೂಜೆ ಮಾಡುತ್ತಾರೆ ಎಂದು ಅವರು ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ.
ದರ್ಶನ ವೇಳೆ ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ, ಉಸ್ಮಾನಾಬಾದ ಸಿಪಿಐ ಮುಖಂಡ ಅರುಣ ರೇಣುಕೆ, ಗುತ್ತಿಗೆದಾರ ಸುನೀಲ ಮಾನೆ ಇದ್ದರು.