ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಇದುವರೆಗೆ ಇಡೀ ವಿಶ್ವದಲ್ಲಿ ಗ್ರೆಗೋರಿಯನ್ ಆಧಾರಿತ ಕ್ಯಾಲೆಂಡರ್ ಚಾಲ್ತಿಯಲ್ಲಿದ್ದು, ಇದರಲ್ಲಿರುವ ಲೋಪಗಳ ಬಗ್ಗೆ ಎಲ್ಲರಿಗೂ ಅರಿವಿದ್ದರೂ ಹೊಸ ಸಂಶೋಧನೆ ಸಾಧ್ಯವಾಗಿರಲಿಲ್ಲ. ಆದರೀಗ ಶಿವಮೊಗ್ಗದ ಟಿ.ಎಂ.ರಘುನಾಥ್ ಹೊಸ ಸಂಶೋಧನೆಯೊಂದನ್ನು ಮಾಡಿದ್ದಾರೆ.ಹದಿನೈದು ವರ್ಷಗಳ ಹಿಂದೆ ಎಂದರೆ 2010ರಲ್ಲಿಯೇ ಈ ಸಂಶೋಧನೆ ಪೂರ್ಣಗೊಳಿಸಿ, 2011ರಲ್ಲಿ ಇದಕ್ಕೆ ಸಂಬಂಧಿಸಿದಂತೆ ಪುಸ್ತಕವೊಂದನ್ನು ಹೊರತಂದರು. ಆದರೆ ಇದನ್ನು ಸಂಬಂಧಿಸಿದವರಿಗೆ ಮನವರಿಕೆ ಮಾಡಿಕೊಡಲು ಮತ್ತು ತಲುಪಿಸಲು ಸಾಕಷ್ಟು ಓಡಾಡಿದ್ದರು ಕೂಡ, ಇದನ್ನು ವೈಜ್ಞಾನಿಕವಾಗಿ ನಿರೂಪಿ ಹಾಗೂ ತಮ್ಮ ಖಗೋಳ ಶಾಸ್ತ್ರ, ಭೂ ಚಲನೆಯ ಗಣಿತ ಲೆಕ್ಕಾಚಾರವನ್ನು ಆಧರಿಸಿ ಮಾಡಿದ ಈ ಸಂಶೋಧನೆಯನ್ನು ಮಾಧ್ಯಮಗಳ ಮೂಲಕ ಹೊರ ಜಗತ್ತಿಗೆ ತೆರೆದಿಡುವ ಪ್ರಯತ್ನ ನಡೆಸಿದ್ದಾರೆ.
ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಇರುವ ಲೋಪದೋಷಗಳ ಪತ್ತೆಗೆ ಹಲವು ವರ್ಷಗಳ ಕಾಲ ಶ್ರಮಿಸಿದ ಅವರು ಇದನ್ನು ಸ್ಪಷ್ಟವಾಗಿ ಕಂಡುಕೊಂಡ ಪರಿಣಾಮ ಹೊಸ ಕ್ಯಾಲೆಂಡರ್ ಸಿದ್ಧಗೊಂಡಿದೆ. ಅವರ ಪ್ರಕಾರ ಇದು ಶೇ.100ರಷ್ಟು ನಿಖರವಾಗಿದ್ದು, ಇನ್ನೆರಡು ವರ್ಷಗಳಲ್ಲಿ ಇಡೀ ವಿಶ್ವವೇ ಇವರ ಸಿದ್ಧಾಂತವನ್ನು ಒಪ್ಪಿಕೊಳ್ಳುವ ನಿರೀಕ್ಷೆ ಇವರದ್ದಾಗಿದೆ.ತಮ್ಮ ಸಂಶೋಧನೆಯನ್ನು ಜಾಗತಿಕವಾಗಿ ಕ್ಯಾಲೆಂಡರ್ ಅನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿರುವ ಲಂಡನ್ನ ರಾಯಲ್ ಸೊಸೈಟಿ, ವಿಶ್ವಸಂಸ್ಥೆ ಮತ್ತಿತರ ಸಂಸ್ಥೆಗಳಿಗೆ ಕಳುಹಿಸಲಿದ್ದಾರೆ. ವೈಜ್ಞಾನಿಕವಾಗಿ ತಮ್ಮ ಸಂಶೋಧನೆ ಮತ್ತು ವಾದವನ್ನು ಪ್ರತಿಪಾದಿಸಿರುವ ರಘುನಾಥ್ ಅವರು ಇದನ್ನು ಜಾಗತಿಕವಾಗಿ ಮನ್ನಣೆ ಪಡೆದ ಕೃತಕ ಬುದ್ಧಿಮತ್ತೆ ಆ್ಯಪ್‌ಗಳಾದ ಎಲನ್ ಮಸ್ಕ್ ಅವರ ಗುರ್ಕ್, ಚೀನಾ ಮೂಲಕ ಡೀಪ್ ಸೀಕ್, ಚಾಟ್ ಜಿಪಿಟಿ, ಜಿಮಿನಿ, ಫೇಸ್‌ಬುಕ್ನ ಮೆಟಾ ಎಐಗೆ ನೀಡಿದ್ದು ಅವುಗಳು ಈ ವಿಧಾನವನ್ನು ಶೂನ್ಯ ದೋಷ ರಹಿತ ಕ್ಯಾಲೆಂಡರ್ ಎಂದೂ ಹಾಗೂ ವೈಜ್ಞಾನಿಕವಾಗಿ ನಂಬರ್ 1 ಎಂದು ಪರಿಗಣಿಸಿವೆ. ರಘುನಾಥ್ ಅವರ ಸಂಶೋಧನೆ ಜಾಗತಿಕಮಟ್ಟದಲ್ಲಿ ಒಪ್ಪಿಗೆಯಾದಲ್ಲಿ ನಮ್ಮ ಹುಟ್ಟಿದ ದಿನಾಂಕ, ಹಬ್ಬ-ಹರಿದಿನಗಳ ಆಚರಣೆ, ಕೃಷಿ ಚಟುವಟಿಕೆಯ ದಿನಾಂಕ, ಮಹಾತ್ಮರ ಆಚರಣೆ ಸೇರಿದಂತೆ ಬಹಳಷ್ಟು ವಿದ್ಯಮಾನಗಳು ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ.ಏನಿದು ಕ್ಯಾಲೆಂಡರ್ ಕತೆ ?:ಪ್ರಸ್ತುತ ಜಗತ್ತು ಇಂದು ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಅನುಸರಿಸುತ್ತಿದೆ. ಆದರೆ ಈ ಕ್ಯಾಲೆಂಡರ್ ರಚನೆ ಅಷ್ಟು ಸುಲಭವಾಗಿರಲಿಲ್ಲ. ಕ್ರಿಸ್ತ ಪೂರ್ವ 45 ರಿಂದ ಪ್ರಾರಂಭವಾಗಿ ಚಾಲ್ತಿಯಲ್ಲಿದ್ದ ಜೂಲಿಯನ್ ಕ್ಯಾಲೆಂಡರ್ ನ ಲೋಪದೋಷಗಳನ್ನು 16ನೇ ಶತಮಾನದಲ್ಲಿ ಅಲೋಸಿಸ್ ಎಂಬ ವೈದ್ಯ ಪತ್ತೆ ಹಚ್ಚಿದ. ಆದರೆ ಅದನ್ನು ಅಂದಿನ ಸಂದರ್ಭದಲ್ಲಿ ಅಷ್ಟು ಸುಲಭವಾಗಿ ಪ್ರಕಟಿಸುವಂತಿರಲಿಲ್ಲ. ಹಾಗಾಗಿ ವ್ಯಾಟಿಕನ್ ಸಿಟಿಯ 13ನೇ ಪೋಪ್ ಆಗಿದ್ದ ಗ್ರೆಗೋರಿಯನ್ ಬಳಿ ತಾನು ಕಂಡುಹಿಡಿದಿದ್ದ ಕ್ಯಾಲೆಂಡರ್ ಕುರಿತು ಚರ್ಚಿಸಿದ. ಇದರ ವೈಜ್ಞಾನಿಕ ಅಂಶಗಳನ್ನು ಮನಗಂಡ ಗ್ರೆಗೋರಿಯನ್ ಅವರು ಅಲೋಸಿಸ್ ಕ್ಯಾಲೆಂಡರ್‌ಗೆ ಅಧಿಕೃತ ಮುದ್ರೆ ಒತ್ತಿದರು. ಹೀಗಾಗಿ 1582ರ ಅಕ್ಟೋಬರ್ 4 ರಂದು ಗುರುವಾರ ಬೆಳಗ್ಗೆ ಹಿಂದಿನ ಕ್ಯಾಲೆಂಡರ್‌ನಲ್ಲಿ 10 ದಿನಗಳನ್ನು ಕಳೆದು ಮರು ದಿನ ಅಕ್ಟೋಬರ್ 15 ರಂದು ನಿಗದಿಗೊಳಿಸಿ ಜಾರಿಗೆ ತಂದರು. ಅಲ್ಲಿಂದ ಈ ತನಕ ಗ್ರೆಗೋರಿಯನ್ ಕ್ಯಾಲೆಂಡರ್ ಚಾಲ್ತಿಯಲ್ಲಿದೆ.ಜ್ಯೂಲಿಯನ್ ಕ್ಯಾಲೆಂಡರ್ ಎಂದರೇನು ?:365.25 ದಿನ ಅಥವಾ 365 ದಿನ 6 ಗಂಟೆಯನ್ನು ಒಂದು ವರ್ಷ ಎಂದು ಜ್ಯೂಲಿಯನ್ ಕ್ಯಾಲೆಂಡರ್ ಪ್ರತಿಪಾದಿಸಿತ್ತು. ಆದರೆ ಈ ಕ್ಯಾಲೆಂಡರ್‌ಗೆ 0.0078 ಅಥವಾ 11 ನಿಮಿಷ 14 ಸೆಕೆಂಡ್‌ನಷ್ಟು ಹೆಚ್ಚಾಗಿ ಸೇರಿಸಿದ್ದ ಕಾರಣ ಇದರಲ್ಲಿ ದೋಷವಿತ್ತು. ಇದು ಕ್ರಿ.ಪೂ 45 ರಿಂದ 1582 ಅಕ್ಟೋಬರ್ 4ರ ತನಕ ಬಳಕೆಯಲ್ಲಿತ್ತು. ನಂತರ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆಗೆ ಬಂತು.ಗ್ರೆಗೋರಿಯನ್ ಕ್ಯಾಲೆಂಡರ್ ಪರಿಷ್ಕಾರ :ಜೂಲಿಯನ್ ಕ್ಯಾಲೆಂಡರ್‌ನಲ್ಲಿದ್ದ 0.0078 ಅಥವಾ 11 ನಿಮಿಷ 14 ಸೆಕೆಂಡ್ ನ ಹೆಚ್ಚುವರಿ ಸಮಯದ ಲೋಪವನ್ನು ವೈಜ್ಞಾನಿಕವಾಗಿ ಕಂಡು ಹಿಡಿದ ಗ್ರೆಗೋರಿಯನ್ ಇದನ್ನು ಕಳೆಯಬೇಕೆಂದು ತಿಳಿಸಿ 1582 ಅಕ್ಟೋಬರ್ 4 ರಂದು 15ನೇ ತಾರೀಖಿನ ಮಧ್ಯೆ 10 ದಿನಗಳನ್ನು ಕಳೆದು ಅಕ್ಟೋಬರ್ 15 ರಂದು ಘೋಷಿಸಿದರು. ಅಲ್ಲದೆ 365.22ರಷ್ಟಿದ್ದ ಸೋಲಾರ್ ವರ್ಷವನ್ನು 365.2425 ಮಾಡಿ ವರ್ಷವನ್ನು ಸರಾಸರಿಗೊಳಿಸಿದರು. ಪ್ರತಿ 400 ವರ್ಷಕ್ಕೆ 3 ಲೀಪ್ ದಿನಗಳನ್ನು ಕಳೆಯಬೇಕೆಂದು ಸೂಚಿಸಿ ಅದನ್ನು ಯಾವ ಯಾವ ವರ್ಷಗಳಲ್ಲಿ ಕಳೆಯಬೇಕು ಎಂದು ತಿಳಿಸಿದರು. ಅದರಂತೆ 1700, 1800 ಮತ್ತು 1900ರಲ್ಲಿ 3 ದಿನಗಳನ್ನು ಕಳೆಯಲಾಯಿತು. ಆದರೆ 2000 ನೇ ಇಸ್ವಿಯಲ್ಲಿ ಯಾವುದೇ ದಿನಗಳನ್ನು ಕಳೆಯಲಿಲ್ಲ. ಇಲ್ಲೂ ಸಹ ಸಾಕಷ್ಟು ಲೋಪದೋಷಗಳಿದ್ದು ಇದನ್ನು ಸರಿಪಡಿಸುವ ಪ್ರಯತ್ನ ಅನೇಕ ಸಲ ನಡೆಯಿತು.
ಗ್ರೆಗೋರಿಯನ್ ಕ್ಯಾಲೆಂಡರ್ ಸರಿಪಡಿಸುವ ಪ್ರಯತ್ನ:1925ರಲ್ಲಿ ಜಿನಿವಾದಲ್ಲಿ ಜಾಗತಿಕ ವಿಜ್ಞಾನಿಗಳ ಸಭೆ ನಡೆದು ಸಾಕಷ್ಟು ಚರ್ಚೆ ನಡೆಸಿತು. ಆದರೆ ಅಂತಿಮವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಭೆ ವಿಫಲವಾಯಿತು.ಗ್ರೆಗೋರಿಯನ್ ಮಾಡಿದ ತಪ್ಪೇನು?:ಮುಖ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಪ್ರತಿ ವರ್ಷ 25.92 ಸೆಕೆಂಡನ್ನು ಹೆಚ್ಚುವರಿಯಾಗಿ ಸೇರಿಸಿ ಆಯಾ ವರ್ಷವನ್ನು ಕೊನೆಗೊಳಿಸಲಾಗುತ್ತಿದೆ. ಇದರಿಂದಾಗಿ ಪ್ರತಿ ವರ್ಷ ಸರಾಸರಿ 26 ಸೆಕೆಂಡ್ ನಂತೆ 3300 ವರ್ಷಕ್ಕೆ ಒಂದು ದಿನ ಹೆಚ್ಚುವರಿಯಾಗಿ ಸೇರುತ್ತಿದೆ.ಆದರೆ ಇದು ಕೇವಲ ಸೆಕೆಂಡ್‌ಗಳ ಲೆಕ್ಕಾಚಾರ ಅಲ್ಲ. ಬದಲಿಗೆ ನಂಬಿಕೆ ಮತ್ತು ಆಚರಣೆಗಳ ವ್ಯತ್ಯಾಸವಾಗುವ ಸನ್ನಿವೇಶ. ಏಕೆಂದರೆ ರಘುನಾಥ್ ಪ್ರಕಾರ, ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಪ್ರತಿ 400 ವರ್ಷಕ್ಕೆ ಕಳೆಯುತ್ತಿರುವ 3 ದಿನ ಫೆಬ್ರವರಿ 29ನೇ ದಿನವಾಗಿದೆ. ಆದರೆ ಈ ದಿನ ಪೂರ್ಣ ದಿನವಲ್ಲ. ವರ್ಷದ ಲೆಕ್ಕದಲ್ಲಿ 0.9688 ಆಗಿರುತ್ತದೆ. ಇದರಲ್ಲಿ 0.0312 ಬಾಕಿ ಉಳಿದಿದ್ದನ್ನು ಗ್ರೆಗೋರಿಯನ್ ಗಮನಿಸದೆ 29ನೇ ದಿನವನ್ನು ಪೂರ್ಣ ದಿನವಾಗಿ ಪರಿಗಣಿಸಿ ಕಳೆದಿರುವುದು ಕ್ಯಾಲೆಂಡರ್‌ನ ಮುಖ್ಯ ದೋಷ.ಅದೇ ರೀತಿ ಗ್ರೆಗೋರಿಯನ್ ಅವರು 365 ದಿನ, 5 ಗಂಟೆ, 49 ನಿಮಿಷ ಮತ್ತು 12 ಸೆಕೆಂಡ್ ಅಥವಾ 365.2425 ಎಂದು ಸರಾಸರಿ ಮಾಡಿದ್ದು ಮತ್ತೊಂದು ದೋಷವಾಗಿದೆ. ಜೊತೆಗೆ ಕ್ರಿಸ್ತ ಶಕ 325 ರಿಂದ ಪ್ರತಿ 400 ವರ್ಷಕ್ಕೆ 3 ದಿನ ಕಳೆಯಬೇಕು ಎಂದು ಅಳವಡಿಸಿದ್ದು, ಕಳೆಯುವ ದಿನವನ್ನು ಪೂರ್ಣ ದಿನ ಎಂದು ಭಾವಿಸಿರುವುದು ತಪ್ಪು ಎನ್ನುತ್ತಾರೆ ರಘುನಾಥ್. ಏಕೆಂದರೆ ಸಮಯದಿಂದ ಕೂಡಿದ್ದನ್ನು ಸಮಯದಿಂದಲೇ ಕಳೆಯಬೇಕು. ಆದರೆ ಗ್ರೆಗೋರಿಯನ್ ಸಮಯವನ್ನು ದಿನವಾಗಿ ಭಾವಿಸಿದ್ದಾರೆ. ಇಲ್ಲಿ ಕಳೆಯುವ ಒಂದು ದಿನವನ್ನು 128 ವರ್ಷದಲ್ಲಿ ಎರಡು ಭಾಗ ಅಥವಾ ನಾಲ್ಕು ಭಾಗಗಳಾಗಿಯೂ ಕಳೆಯಬಹುದಿತ್ತು ಎನ್ನುತ್ತಾರೆ. ಟಿ.ಎಂ.ರಘುನಾಥ್ ವಿಧಾನ-ಪರಿಹಾರ:ರಘುನಾಥ್ ಪ್ರಕಾರ 128 ವರ್ಷಕ್ಕೆ 1 ದಿನವನ್ನು ಕಳೆಯಬೇಕು. ಏಕೆಂದರೆ ನಾವು ಕಳೆಯುವ ದಿನವಾದ ಫೆಬ್ರವರಿ 29 ವರ್ಷದ ಲೆಕ್ಕದಲ್ಲಿ ಪೂರ್ಣ 24 ಗಂಟೆಯನ್ನು ಒಳಗೊಂಡಿರುವುದಿಲ್ಲ. ಈ ದಿನವು 0.9688 ದಿನವಾಗಿರುತ್ತದೆ. ಆದ್ದರಿಂದ ನಾವು 124 ವರ್ಷದಲ್ಲಿ ಕೂಡಿದ 0.9672 (0.0078x124=0.9672) ಸಮಯವನ್ನು 128ನೇ ವರ್ಷದಲ್ಲಿ ಬರುವ ಫೆಬ್ರವರಿ 29ನೇ ದಿನ (0.9688)ಕಳೆಯಬೇಕಾಗುತ್ತದೆ. ಲೋಪ ರಹಿತ ಕ್ಯಾಲೆಂಡರ್ ಅನುಸರಿಸಲು ರಘುನಾಥ್ ಅವರು ಸೂಕ್ತ ವಿಧಾನವನ್ನು ಪ್ರತಿಪಾದಿಸಿದ್ದು, ಪ್ರತಿ 128 ವರ್ಷವನ್ನು 4 ಭಾಗ ಮಾಡಿ 33, 63, 99 ಮತ್ತು 128ನೇ ವರ್ಷದಲ್ಲಿ 0.2422 ಅಥವಾ 5 ಗಂಟೆ 48 ನಿಮಿಷ 46 ಸೆಕೆಂಡ್‌ಗಳನ್ನು ಕಳೆಯಲು ಸೂಚಿಸಿದ್ದಾರೆ. ರಘುನಾಥ್ ಚಾಲೆಂಜ್ಇನ್ನು ತಮ್ಮ ಸಂಶೋಧನೆಯನ್ನು ವೈಜ್ಞಾನಿಕವಾಗಿ ಪ್ರತಿಪಾದಿಸುವ ರಘುನಾಥ್ ಇದರಲ್ಲಿ ಯಾರಾದರೂ ಲೋಪವನ್ನು ಕಂಡು ಹಿಡಿದ ಪಕ್ಷದಲ್ಲಿ 1 ಕೋಟಿ ರುಪಾಯಿ ಬಹುಮಾನ ನೀಡುವುದಾಗಿ ಸವಾಲು ಹಾಕಿದ್ದಾರೆ.