ಕನ್ನಡಪ್ರಭ ವಾರ್ತೆ ಪುತ್ತೂರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಜಾತಿ ವಿಚಾರದಲ್ಲಿ ಅವಮಾನಿಸಿರುವುದು ಖಂಡನೀಯ. ಜಾತಿ ರಾಜಕಾರಣವನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಬಿಜೆಪಿಯವರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ದೇಶದ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಆರ್.ಸಿ. ನಾರಾಯಣ ಆಗ್ರಹಿಸಿದ್ದಾರೆ.
ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ದೇಶದ ಇತರ ಹಿಂದುಳಿದ ವರ್ಗಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅವಮಾನಿಸಿದ್ದಾರೆಂದು ಆರೋಪಿಸಿ ಮತ್ತು ದೇಶದ ಜನತೆಯ ಮುಂದೆ ಕ್ಷಮೆಯಾಚನೆ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಬಿಜೆಪಿ ಪುತ್ತೂರು ನಗರ ಹಾಗೂ ಗ್ರಾಮಾಂತರ ಮಂಡಲದ ಒಬಿಸಿ ಮೋರ್ಚಾದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಅರಗಿಸಿಕೊಳ್ಳಲಾರದೆ ಕಾಂಗ್ರೆಸ್ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ. ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರ ಬಗ್ಗೆ ಕೀಳಾಗಿ ಮಾತನಾಡುವ ಕೆಲಸ ಮಾಡುತ್ತಿರುವುದಲ್ಲದೆ, ಜಾತಿ ಹೆಸರು ಮುಂದಿಟ್ಟುಕೊಂಡು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದು, ಅವರು ದೇಶದ ಜನತೆಯ ಮುಂದೆ ಕ್ಷಮೆಯಾಚಿಸಬೇಕು ಎಂದರು. ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗಲೇ ಪ್ರಧಾನಿಯವರ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಲಾಗಿತ್ತು. ಆದರೆ ಕಾಂಗ್ರೆಸಿಗರು ಈಗ ಪ್ರಧಾನಿ ನರೇಂದ್ರ ಮೋದಿಯವರನ್ನು ಫೇಕ್ ಒಬಿಸಿ ಎಂದು ಅವಮಾನ ಮಾಡಿಕೊಂಡು ಬರುತ್ತಿದ್ದಾರೆ ಎಂದರು. ಪ್ರತಿಭಟನೆಯ ಬಳಿಕ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಪುತ್ತೂರು ಸಹಾಯಕ ಕಮಿಷನರ್ ಮೂಲಕ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್. ಗೌರಿ, ಜಿಲ್ಲಾ ಎಸ್ಟಿ ಮೋರ್ಚಾದ ಅಧ್ಯಕ್ಷ ಹರೀಶ್ ಬಿಜತ್ರೆ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ ಮತ್ತಿತರರು ಉಪಸ್ಥಿತರಿದ್ದರು.ರಾಹುಲ್ ಗಾಂಧಿ ಕ್ಷಮೆಯಾಚನೆಗೆ ಬೆಳ್ತಂಗಡಿ ಬಿಜೆಪಿ ಮಂಡಲ ಆಗ್ರಹಬೆಳ್ತಂಗಡಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜಾತಿ ವಿಚಾರವನ್ನು ಕೆದಕಿ ಅಪಮಾನಿಸಿರುವುದನ್ನು ಖಂಡಿಸಿ, ರಾಹುಲ್ ಗಾಂಧಿ ಕ್ಷಮೆ ಯಾಚಿಸುವಂತೆ ಆಗ್ರಹಿಸಿ, ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಮಂಗಳವಾರ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ನಗರ ಪಂಚಾಯತ್ ಸದಸ್ಯರಾದ ಜಯಾನಂದ ಗೌಡ, ಶರತ್ ಕುಮಾರ್, ಬೆಳ್ತಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಅಜಿತ್ ಆರಿಗಾ, ಕೊಕ್ಕಡ ಸಿಎ ಬ್ಯಾಂಕ್ ಅಧ್ಯಕ್ಷ ಕುಶಾಲಪ್ಪ ಗೌಡ, ಕಳಿಯ ಸಿಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ನಾರಾವಿ ಸಿಎ ಬ್ಯಾಂಕ್ ಅಧ್ಯಕ್ಷ ಸುಧಾಕರ ಭಂಡಾರಿ, ಬಾರ್ಯ ಸಿಎ ಬ್ಯಾಂಕ್ ಅಧ್ಯಕ್ಷ ಪ್ರವೀಣ್ ರೈ, ನಿಡ್ಲೆ ಸಿಎ ಬ್ಯಾಂಕ್ ಅಧ್ಯಕ್ಷ ರಮೇಶ್ ರಾವ್, ಗುರುವಾಯನಕೆರೆ ಸಿಎ ಬ್ಯಾಂಕ್ ಉಪಾಧ್ಯಕ್ಷ ವಡಿವೇಲು, ಕೆ.ಎಂ.ಎಫ್ ನಿರ್ದೇಶಕ ಪದ್ಮನಾಭ ಅರ್ಕಜೆ, ಪ್ರಮುಖರಾದ ಪ್ರಭಾಕರ ಆಚಾರ್ಯ ಸವಣಾಲು, ರಾಜೇಶ್ ಪೆಂರ್ಬುಡ, ರಾಜೇಶ್ ಪ್ರಭು, ವೆಂಕಪಯ್ಯ, ಅರವಿಂದ ಲಾಯಿಲಾ, ವೀಣಾ ಬೆಳ್ತಂಗಡಿ, ಉಪಸ್ಥಿತರಿದ್ದರು.