ರಾಹುಲ್‌ ದೇಶದ ಕ್ಷಮೆ ಕೇಳಲಿ: ಕೆ.ಜಿ. ಬೋಪಯ್ಯ ಆಗ್ರಹ

KannadaprabhaNewsNetwork | Published : Jul 4, 2024 1:00 AM

ಸಾರಾಂಶ

ಲೋಕಸಭೆಯಲ್ಲಿ ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂಥ ಹೇಳಿಕೆ ನೀಡಿದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದೇಶದ ಜನತೆಯ ಕ್ಷಮೆ ಕೇಳಲಿ ಎಂದು ವಿಧಾನಸಭಾ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆಯ ಮಹತ್ವದ ವಿರೋಧ ಪಕ್ಷದ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಇಂಥ ಹೇಳಿಕೆಗಳ ಮೂಲಕ ಹಿಂದೂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಲೋಕಸಭೆಯಲ್ಲಿ ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂಥ ಹೇಳಿಕೆ ನೀಡಿದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದೇಶದ ಜನತೆಯ ಕ್ಷಮೆ ಕೇಳಲಿ ಎಂದು ವಿಧಾನಸಭಾ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆಯ ಮಹತ್ವದ ವಿರೋಧ ಪಕ್ಷದ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಇಂಥ ಹೇಳಿಕೆಗಳ ಮೂಲಕ ಹಿಂದೂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಹಿಂದೂ ಸಮಾಜಕ್ಕೆ ಧಕ್ಕೆ ತರುವಂಥ ಹೇಳಿಕೆ ನೀಡಿದ್ದಾರೆ ಎಂದು ಬೋಪಯ್ಯ ಆರೋಪಿಸಿದರು.

ರಾಹುಲ್ ಗಾಂಧಿ ಅವರು ಲೋಕಸಭೆಯ ಅಧಿವೇಶನದ ತಮ್ಮ ಭಾಷಣದ ಸಂದರ್ಭ ಬಾಲಿಶವಾಗಿ ವರ್ತಿಸಿದ್ದಾರೆಂದು ಟೀಕಿಸಿದ ಬೋಪಯ್ಯ, ಇನ್ನಾದರು ಅವರು ಜವಾಬ್ದಾರಿಯುತವಾಗಿ ವರ್ತಿಸುವ ಮೂಲಕ ಜವಾಬ್ದಾರಿಯುತ ವಿರೋಧ ಪಕ್ಷವಾಗಬೇಕೆಂದು ಆಗ್ರಹಿಸಿದರು.

ಮೂಡಾ ಹಗರಣ:

ಮೈಸೂರು ನಗರಾಭಿವ್ರದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಸೈಟ್ ಹಂಚಿಕೆಯಲ್ಲಿನ ಭ್ರಷ್ಟಾಚಾರ ಮೇಲ್ನೋಟಕ್ಕೆ ಸಾಬೀತಾಗಿದ್ದು, ಇದರ ಸತ್ಯಾಸತ್ಯತೆ ಬಯಲಿಗೆಳೆಯಲು ಒಟ್ಟು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಮೂಲಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಾವೊಬ್ಬ ನಿಷ್ಕಳಂಕ ಎನ್ನುವುದನ್ನು ತೋರಿಸಲಿ ಎಂದು ಬೋಪಯ್ಯ ಆಗ್ರಹಿಸಿದರು.

ಸೈಟ್ ಹಗರಣದ ಬೆನ್ನಲ್ಲೆ ಅದಕ್ಕೆ ಸಂಬಂಧಿಸಿದ ಅಧಿಕಾರಗಳನ್ನು ವರ್ಗಾವಣೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕೆ.ಜಿ.ಬೋಪಯ್ಯ ಅವರು, ಒಟ್ಟು ಪ್ರಕರಣದ ಸಮಗ್ರ ತನಿಖೆ ಅಗತ್ಯವಾಗಿ ನಡೆಯಬೇಕಿದೆಯೆಂದು ಹೇಳಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಲೋಕ ಚುನಾವಣೆಯವರೆಗೆ ಮಾತ್ರ ಎಂದು ಬಿಜೆಪಿ ಹೇಳುತ್ತಲೆ ಬಂದಿತ್ತು. ಇದೀಗ ಗ್ಯಾರಂಟಿ ಯೋಜನೆಗಳ ಹಣ ಸಮರ್ಪಕವಾಗಿ ಜನರಿಗೆ ದೊರಕುತ್ತಿಲ್ಲ ಎಂದಾದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಹೋಗಿ ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ತೀಕ್ಷ್ಣವಾಗಿ ನುಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹಿಂದೆಯೆ ಬಿಜೆಪಿ, ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ನಂಬಬೇಡಿ ಎಂದು ಜನತೆಗೆ ತಿಳಿಸಿತ್ತು. ಪ್ರಸ್ತುತ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಸರ್ಕಾರಿ ಸಿಬ್ಬಂದಿಗೆ ವೇತನ ಪಾವತಿಯೂ ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ‘ಹಿಂದೂ’ ಅಂದರೆ ಹಿಂಸೆ ಎಂದು ಪ್ರತಿಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಹಿಂದೂ ಧರ್ಮವನ್ನು ಟೀಕಿಸುವುದನ್ನು ನಾವು ಒಪ್ಪುವುದಿಲ್ಲ. ಹಿಂದೂ ಧರ್ಮದ ಬಗ್ಗೆ ಅಭಿಮಾನವಿಲ್ಲದಿದ್ದರೆ ಅವರು ಈ ದೇಶದಲ್ಲ್ಲಿ ಇರುವುದೇ ಬೇಡವೆಂದು ಹೇಳಿದರು.

ಹಿಂದೂ ಧರ್ಮವನ್ನು ಅವಹೇಳನ ಮಾಡುವ ಮೂಲಕ ಹಿಂದೂ ಧರ್ಮೀಯರಿಗೆ ನೋವನ್ನುಂಟು ಮಾಡಿರುವ ರಾಹುಲ್ ಗಾಂಧಿ, ಅವರ ಸ್ಥಾನದಲ್ಲಿ ಮುಂದುವರಿಯಲು ಅನರ್ಹರಾಗಿದ್ದು, ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಾಧ್ಯಮ ಜಿಲ್ಲಾ ಪ್ರಮುಖ್ ಸಜಿಲ್ ಕೃಷ್ಣ, ಉಪಾಧ್ಯಕ್ಷ ಮನು ಮಂಜುನಾಥ್, ಮಾಧ್ಯಮ ವಕ್ತಾರ ಬಿ.ಕೆ. ಅರುಣ್ ಕುಮಾರ್ ಇದ್ದರು.

Share this article