ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್‌ನ್ನು ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ಅವರು ಗುರುವಾರ ಮಂಡಿಸಿದ್ದು, ಪ್ರಸಕ್ತ ಸಾಲಿನಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 6ನೇ ಬಜೆಟ್ ಜಿಲ್ಲೆಯ ಮಟ್ಟಿಗೆ ತೀವ್ರ ನಿರಾಸೆಯನ್ನು ಮೂಡಿಸುವಂತೆ ಮಾಡಿದೆ.
ಸಹಜವಾಗಿ ಕೇಂದ್ರ ಬಜೆಟ್ ಎಂದರೆ ನಿರ್ದಿಷ್ಟವಾಗಿ ಜಿಲ್ಲೆಗೆ ಏನೂ ಲಭಿಸುವುದಿಲ್ಲ. ಆದರೆ ಸಂವಿಧಾನದ 371 (ಜೆ) ಕಲಂ, ಕೇಂದ್ರದ ಮಹತ್ವದ ಯೋಜನೆಗಳ ಲ್ಲೊಂದಾದ ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಲ್ಲಿ ದೇಶದ 117 ಜಿಲ್ಲೆಗಳ ಪೈಕಿ ರಾಯಚೂರನ್ನು ಆಯ್ಕೆ ಮಾಡಿರುವುದು ಹಾಗೂ ಏಮ್ಸ್ ಸತತ 630 ದಿನಗಳಿಂದ ನಿರಂತರ ಹೋರಾಟ ನಡೆಸಿರುವುದು, ಎರಡ್ಮೂರು ದಶಕಗಳು ಕಳೆಯುತ್ತಿದ್ದರೂ ನನೆಗುದಿಗೆ ಬಿದ್ದಿರುವ ರೈಲ್ವೆ, ನೀರಾವರಿ ಯೋಜನೆಗಳಿಗೆ ಕಾಯಕಲ್ಪ ಮಾಡಲು ಬಜೆಟ್‌ನಲ್ಲಿ ಅವಕಾಶವಿದೆ. ಅಷ್ಟೇ ಅಲ್ಲದೇ ಈ ಭಾಗವನ್ನು ಸಿರಿಧಾನ್ಯಗಳ ಹಬ್ ಮಾಡಬೇಕು ಎನ್ನುವ ಸದುದ್ದೇಶವನ್ನು ಕೇಂದ್ರ ಸರ್ಕಾರವೇ ಹೊಂದಿರುವುದರಿಂದ ಕೇಂದ್ರ ಬಜೆಟ್ ಜಿಲ್ಲೆಗೆ ಒಂದಲ್ಲಾ ಒಂದು ವಿಭಾಗದಲ್ಲಿ ವಿಶೇಷತೆ ದೊರೆಯಲಿದೆ ಎನ್ನುವ ಕಾತರವನ್ನು ಬೆಳೆಸಿಕೊಂಡಿದ್ದ ಜನರು ಬಜೆಟ್ ಪ್ರತಿ ನೋಡಿ ಬೇಸರಗೊಂಡಿದ್ದಾರೆ.ಏಮ್ಸ್ ಘೋಷಣೆ ಗೌಣ: ಹಿಂದುಳಿದ ಪ್ರದೇಶವಾಗಿರುವ ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೀಯ ಸಂಸ್ಥೆಯೊಂದರ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕು ಎನ್ನುವುದು ಜಿಲ್ಲೆ ಜನರ ಬಹುದಿನಗಳ ಬೇಡಿಕೆಯಾಗಿದ್ದು, ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಹೋರಾಟ 630ನೇ ದಿನ ಪೂರೈಸಿದ್ದರೂ ಬಜೆಟ್‌ನಲ್ಲಿ ಘೋಷಣೆಯ ನಿರೀಕ್ಷೆ ಹುಸಿಗೊಂಡಿದೆ. ರಾಯಚೂರಿಗೆ ಏಮ್ಸ್ ನೀಡು ವಂತೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಎರಡು ಸಲ ಪತ್ರ ಬರೆದು ಮನವಿ ಮಾಡಿದರೂ ಸಹ ಅದಕ್ಕೆ ಯಾವುದೇ ರೀತಿಯ ಮನ್ನಣೆ ಸಿಗದೇ ಇರುವುದು ಬೇಸರಕ್ಕೆ ಕಾರಣವಾಗಿದೆ. ಕೇಂದ್ರದ ಕೊನೆ ಬಜೆಟ್ ನಲ್ಲಾದರೂ ಜಿಲ್ಲೆಗೆ ಏಮ್ಸ್ ಘೋಷಣೆಯ ಭರವಸೆ ಗೌಣಗೊಂಡಂತಾಗಿದೆ.
ರೈಲ್ವೆ ಯೋಜನೆಗಿಲ್ಲ ಆದ್ಯತೆ: ಜಿಲ್ಲೆಯ ರೈಲ್ವೆ ಯೋಜನೆಗಳಾದ ಮುನಿರಾಬಾದ-ಮೆಹಬೂಬ್‌ನಗರ ಹಾಗೂ ಗದಗ ಮತ್ತು ವಾಡಿಯ ರೈಲ್ವೆ ಯೋಜನೆಗಳು ಅನುದಾನ ಕೊರತೆಯಿಂದಾಗಿ ತೆವಳುತ್ತಾ ಸಾಗಿವೆ. ಮುನಿರಾಬಾದ್- ಮೆಹಬೂಬ್ ನಗರದ ರೈಲ್ವೆ ಯೋಜನೆ ಜಾರಿಗೊಂಡು 25 ವರ್ಷವಾಗಿದೆ. ಸುಮಾರು 246 ಕಿ.ಮೀ. ಉದ್ದದ ರೈಲ್ವೆ ಮಾರ್ಗದ ಕಾಮಗಾರಿ ಪೂರ್ಣಗೊಂಡು ರೈಲು ಗಾಡಿ ಓಡಾಡಬೇಕಾಗಿತ್ತು. ಭೂಸ್ವಾಧೀನ, ರೈಲ್ವೆ ಮಾರ್ಗ ನಿರ್ಮಾಣ ವಿಳಂಬ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ತೀವ್ರ ಹಿನ್ನಡೆ ಅನುಭವಿಸುವಂತಾಗಿದೆ. ಈ ಬಜೆಟ್‌ನಲ್ಲಾದರೂ ಕಾಮಗಾರಿಗೆ ಅಗತ್ಯ ಅನುದಾನ ಲಭಿಸಲಿದೆ ಎನ್ನುವ ಆಸೆಗೆ ತಣ್ಣಿರು ಎರಚಿದಂತಾಗಿದೆ. ಇದೇ ರೀತಿ ಹೈದರಾಬಾದ್ ನಿಜಾಮ ಆಳ್ವಿಕೆ ವೇಳೆ 1909ರಲ್ಲಿ ಗದಗ-ವಾಡಿ ರೈಲ್ವೆ ಮಾರ್ಗದ ಯೋಜನೆ ಮೊಳಕೆ ಒಡೆಯಿತು. 1910ರಲ್ಲಿ ಸರ್ವೆ ಕಾರ್ಯ ನಡೆಸಿ ಅಂದಿನ ಬ್ರಿಟೀಷ್ ಸರಕಾರಕ್ಕೆ1911ರಲ್ಲಿ ವರದಿ ಸಲ್ಲಿಸಲಾಗಿತ್ತು. 1997-98ನೇ ಸಾಲಿನಲ್ಲಿ ನಡೆದ ಬಜೆಟ್ ಮಂಡನೆಯಲ್ಲಿ 900 ಕೋಟಿ ರು. ವೆಚ್ಚದಲ್ಲಿ 253 ಕಿಮೀ ಉದ್ದದ ರೈಲು ಮಾರ್ಗ ನಿರ್ಮಿಸಲು ಮಾಡಲು ಪ್ರಸ್ತಾವನೆ ಸಿದ್ಧಗೊಂಡಿತು, ಸರ್ಕಾರ ಯೋಜನೆ ಜಾರಿಗೊಳಿಸಿದ್ದು, ಅನುದಾನ ಇಲ್ಲದೆ ಇರುವುದರಿಂದ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಈ ಬಜೆಟ್‌ನಲ್ಲಾದರೂ ಯೋಜನೆ ಚಾಲನೆ ಸಿಗಲಿದೆ ಎನ್ನುವ ನಿರೀಕ್ಷೆಗೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ.