ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದಿಂದ ಬೆಂಗಳೂರು ಮುಖ್ಯರಸ್ತೆಗೆ ಖಾಸ್‌ಬಾಗ್ ಮೂಲಕ ಸಂಪರ್ಕಿಸುವ ರಸ್ತೆಯಲ್ಲಿ ಜನರ ಬಹುವರ್ಷಗಳ ಒತ್ತಾಯಕ್ಕೆ ಮಣಿದು ಆರಂಭವಾಗಿದ್ದ ರೈಲ್ವೇ ಅಂಡರ್‌ಪಾಸ್ ಡಬ್ಲಿಂಗ್ ಕಾಮಗಾರಿ ಸ್ಥಗಿತಗೊಂಡು ತಿಂಗಳುಗಳೇ ಕಳೆದಿವೆ.
ದೊಡ್ಡಬಳ್ಳಾಪುರ ಬಸ್‌ನಿಲ್ದಾಣ, ರಂಗಪ್ಪವೃತ್ತದ ಕಡೆಯಿಂದ ನಿತ್ಯ ಸಂಚರಿಸುವ ನೂರಾರು ಬಸ್‌ಗಳು, ಸಾವಿರಾರು ಖಾಸಗಿ ವಾಹನಗಳಿಗೆ ಈ ಅಂಡರ್‌ಪಾಸ್ ಬಹುಮುಖ್ಯ ಸಂಪರ್ಕ ಸೇತುವಾಗಿದೆ. 80ರ ದಶಕದಲ್ಲಿ ಅಂದಿನ ಸಚಿವರಾಗಿದ್ದ ದಿವಂಗತ ಆರ್.ಎಲ್.ಜಾಲಪ್ಪ ಅವರ ಒತ್ತಾಸೆಯಿಂದ ಈ ಅಂಡರ್‌ಪಾಸ್ ನಿರ್ಮಾಣವಾಗಿತ್ತು. ಅಭಿವೃದ್ದಿಯ ನಾಗಾಲೋಟ, ವಾಹನಗಳ ಸಂಖ್ಯೆ ಹೆಚ್ಚಳದ ಪರಿಣಾಮ ಹಾಲಿ ಇರುವ ಅಂಡರ್ ಪಾಸ್ ವಿಸ್ತರಣೆಗೆ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಸೇರಿದಂತೆ ಹಲವರ ಪ್ರಯತ್ನ, ರೈಲ್ವೇ ಇಲಾಖೆಗೆ ಸಾರ್ವಜನಿಕರ ನಿರಂತರ ಆಗ್ರಹದ ಪರಿಣಾಮ 3 ವರ್ಷದ ಹಿಂದೆ ಅಂಡರ್‌ಪಾಸ್ ಡಬ್ಲಿಂಗ್ ಕಾಮಗಾರಿ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿತ್ತು. ಬಳಿಕ ಹಲವು ಸವಾಲುಗಳನ್ನು ಮೀರಿ ಭೂಸ್ವಾದೀನವೂ ನಡೆದು ಕಾಮಗಾರಿಗೆ ಅಧಿಕೃತ ಚಾಲನೆಯೂ ದೊರೆತು, ಶೇ.70ರಷ್ಟು ಕಾಮಗಾರಿ ಮುಗಿದಿದೆ.ಕಾಮಗಾರಿಯ ರೂಪರೇಷೆ:
ಹಾಲಿ ಇರುವ ಅಂಡರ್‌ಪಾಸ್ ಜೊತೆಗೆ ಮತ್ತೊಂದು ಅಂಡರ್‌ಪಾಸ್ ನಿರ್ಮಿಸುವುದು, ಅದರೊಟ್ಟಿಗೆ ಉಭಯ ಅಂಡರ್‌ಪಾಸ್‌ಗಳಲ್ಲೂ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡುವುದು. ಹಾಲಿ ಇರುವ ಮಾರ್ಗವನ್ನು ವಿ.ಕೃ.ಗೋಕಾಕ್ ವೃತ್ತದಿಂದ ದೊಡ್ಡಬಳ್ಳಾಪುರ ನಗರ ಪ್ರವೇಶಿಸುವ ವಾಹನಗಳಿಗೆ ಮೀಸಲಿಡುವುದು ಮತ್ತು ಹೊಸ ಅಂಡರ್‌ಪಾಸ್ ಅನ್ನು ದೊಡ್ಡಬಳ್ಳಾಪುರ ನಗರದಿಂದ ಬೆಂಗಳೂರು ರಸ್ತೆಗೆ ತೆರಳುವ ವಾಹನಗಳಿಗೆ ಮೀಸಲಿಡುವುದು ಪ್ರಸ್ತಾವನೆಯಾಗಿತ್ತು. ಅಲ್ಲದೆ ಈ ವಾಹನಗಳಿಗೆ ಮುತ್ತೂರು ಗ್ರಾಮದವರೆಗೆ ಸಂಪರ್ಕ ರಸ್ತೆ ಕಲ್ಪಿಸಿ, ಅಲ್ಲಿಂದ ಯು-ಟರ್ನ್ ಅವಕಾಶ ಕಲ್ಪಿಸುವ ಯೋಜನೆ ಇದಾಗಿತ್ತು.ಸ್ಥಗಿತಗೊಂಡ ಕಾಮಗಾರಿ:
ಆದರೆ, ಈಗ ಕಾಮಗಾರಿ ಸ್ಥಗಿತಗೊಂಡಿದೆ. ಶೇ.70ಕ್ಕೂ ಹೆಚ್ಚು ಕೆಲಸ ಮುಕ್ತಾಯವಾಗಿದೆ. ಅಂಡರ್‌ಪಾಸ್ ನಿರ್ಮಾಣವೂ ಬಹುತೇಕ ಪೂರ್ಣಗೊಂಡಿದೆ. ಸಂಪರ್ಕ ರಸ್ತೆ ಕಾಂಕ್ರೀಟ್ ಮಾರ್ಗವೂ ಬಹುತೇಕ ಕೊನೆಯ ಹಂತದಲ್ಲಿದೆ. ಮುಖ್ಯರಸ್ತೆಯಿಂದ ಅಂಡರ್‌ಪಾಸ್‌ಗೆ ಸಂಪರ್ಕ, ಮುತ್ತೂರು ಬಳಿ ಯು-ಟರ್ನ್ ಮಾರ್ಗ ನಿರ್ಮಾಣ, ರಸ್ತೆ ಸಮತೋಲನ ಪ್ರಕ್ರಿಯೆ ಹಾಗೂ ಡಾಂಬರೀಕರಣ ಬಾಕಿ ಉಳಿದಿದ್ದು, ಈ ವೇಳೆ ಗುತ್ತಿಗೆದಾರ ಹಾಗೂ ರೈಲ್ವೆ ಇಲಾಖೆ ನಡುವಿನ ಭಿನ್ನಾಭಿಪ್ರಾಯ ಕಾಮಗಾರಿ ಸ್ಥಗಿತಕ್ಕೆ ಕಾರಣವಾಗಿದೆ. ಅನುಮೋದಿತ ಕಾಮಗಾರಿ ವಿಳಂಬವಾದ ಹಿನ್ನಲೆ ಬಿಲ್ ಪಾವತಿ ವೇಳೆ ದಂಡ ವಿಧಿಸಲಾಗಿದೆ ಎಂದು ಆರೋಪಿಸಿ ಗುತ್ತಿಗೆದಾರ ಕಾಮಗಾರಿ ಸ್ಥಗಿತಗೊಳಿಸಿ ತೆರಳಿರುವುದಾಗಿ ರೈಲ್ವೇ ಇಲಾಖೆಯ ಹೆಸರು ಹೇಳಲಿಚ್ಚಿಸದ ಸಿಬ್ಬಂದಿಯೊಬ್ಬರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.ಸೂಕ್ತ ಕ್ರಮ ಅಗತ್ಯ:
ಈ ವಿಚಾರದಲ್ಲಿ ಸ್ಥಳೀಯ ಆಡಳಿತ, ಶಾಸಕರು ಹಾಗೂ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ರೈಲ್ವೇ ಇಲಾಖೆಗೆ ವಿವಿಧ ಮಾದರಿಗಳಲ್ಲಿ ಮನವಿ ಮಾಡಲಾಗಿದೆ. ಆದರೆ ಯಾವುದಕ್ಕೂ ಸ್ಪಂದನೆ ಸಿಕ್ಕಿಲ್ಲ. ಅಪೂರ್ಣಗೊಂಡಿರುವ ಕಾಮಗಾರಿ ಹಲವು ರೀತಿಯಲ್ಲಿ ಸ್ಥಳೀಯ ಜನರಿಗೆ ಸವಾಲಾಗಿದೆ. ಮಳೆ ಬಂದರೆ ವಸ್ತುಸ್ಥಿತಿ ಸಂಪೂರ್ಣ ಬದಲಾಗುವ ಆತಂಕವಿದ್ದು, ಕೂಡಲೇ ತುರ್ತು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.ಕೋಟ್............
ರೈಲ್ವೇ ಅಂಡರ್‌ಪಾಸ್ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದು, ಸ್ಥಳೀಯರಿಗೆ ಸಮಸ್ಯೆಯಾಗಿದೆ. ಕೋಟ್ಯಂತರ ರುಪಾಯಿ ವೆಚ್ಚವಾಗಿರುವ ಕಾಮಗಾರಿ ಕೊನೆಯ ಹಂತದಲ್ಲಿ ನಿಂತಿರುವುದು ವಿಷಾಯನೀಯ. ರೈಲ್ವೇ ಅಧಿಕಾರಿಗಳೂ ಸೇರಿದಂತೆ ಸಂಬಂಧಪಟ್ಟವರಿಗೆಲ್ಲಾ ಮನವಿ ಮಾಡಿದ್ದು, ಕೂಡಲೇ ಸೂಕ್ತ ಹಾಗೂ ವೈಜ್ಞಾನಿಕ ಕ್ರಮ ಅಗತ್ಯ.- ಕೆ.ಎಲ್.ಶಿವರಾಮ್, ಸ್ಥಳೀಯ ಮುಖಂಡರು
ಕೋಟ್............ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಉಂಟಾಗಿರುವ ಸಮಸ್ಯೆಗಳು ಹಾಗೂ ಕೂಡಲೇ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ರೈಲ್ವೇ ಇಲಾಖೆ ಡೆಪ್ಯೂಟಿ ಚೀಫ್ ಇಂಜಿನಿಯರ್‌ರಿಗೆ ಮನವಿ ಪತ್ರ ನೀಡಲಾಗಿದೆ. ನಗರಸಭೆ ಅಧ್ಯಕ್ಷರು, ಶಾಸಕರ ಗಮನಕ್ಕೂ ತರಲಾಗಿದೆ.
- ಇಂದ್ರಾಣಿ.ವಿ, ನಗರಸಭೆ ಸದಸ್ಯರು, ಸಿದ್ದೇನಾಯಕನಹಳ್ಳಿ ಬಡಾವಣೆಕೋಟ್............
ದೊಡ್ಡಬಳ್ಳಾಪುರ ನಗರದಿಂದ ಬೆಂಗಳೂರು ರಸ್ತೆಗೆ ಸಂಪರ್ಕ ಸೇತುವಾಗಿರುವ ರೈಲ್ವೇ ಕೆಳಸೇತುವೆ ಮೇಲ್ದರ್ಜೆಗೇರಿಸುವ ಕಾಮಗಾರಿ ಕೊನೆಯ ಹಂತದಲ್ಲಿ ಸ್ಥಗಿತಗೊಂಡಿರುವುದು ವಿಷಾದನೀಯ. ಸಂಬಂಧಪಟ್ಟವರು ಶೀಘ್ರ ಗಮನ ಹರಿಸಿ ಸಾವಿರಾರು ಜನರ ಹಕ್ಕೊತ್ತಾಯಕ್ಕೆ ಮನ್ನಣೆ ನೀಡಬೇಕು.- ರೈಲ್ವೇಸ್ಟೇಷನ್ ಮಲ್ಲೇಶ್, ನಗರಸಭೆ ಸದಸ್ಯರು
13ಕೆಡಿಬಿಪಿ3-ದೊಡ್ಡಬಳ್ಳಾಪುರದ ರೈಲು ನಿಲ್ದಾಣ ಬಳಿ ಅಂಡರ್‌ಪಾಸ್ ಕಾಮಗಾರಿ ಅಪೂರ್ಣಗೊಂಡಿರುವುದು.