ಮಳೆ ವಿರಾಮ: ಭತ್ತ ನಾಟಿ ಕಾರ್ಯ ಚುರುಕು

KannadaprabhaNewsNetwork | Published : Aug 11, 2024 1:33 AM

ಸಾರಾಂಶ

ಈ ವರೆಗೂ ಉತ್ತಮ ಮಳೆಯಾಗಿದ್ದರಿಂದ ಬಹುತೇಕ ರೈತರು ಭತ್ತದ ಸಸಿ ಮಡಿಗಳನ್ನು ತಯಾರಿ ಮಾಡಿಕೊಂಡಿದ್ದು, ಗದ್ದೆಗಳಲ್ಲಿ ಭತ್ತದ ಸಸಿ ನೆಡುವ ಮೂಲಕ ನಾಟಿ ಕಾರ್ಯದಲ್ಲಿ ನಿರತರಾಗಿದ್ದಾರೆ

ಸಂತೋಷ ದೈವಜ್ಞ

ಮುಂಡಗೋಡ: ಮಳೆ ಕೊಂಚ ವಿರಾಮ ನೀಡಿದ್ದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಎಲ್ಲೆಂದರಲ್ಲಿ ಪ್ರಧಾನ ಬೆಳೆ ಭತ್ತದ ಗದ್ದೆಗಳಲ್ಲಿ ನೀರು ನಿಂತು ಗದ್ದೆಗಳೆಲ್ಲ ಹಸಿರಿನಿಂದ ಕೂಡಿದ್ದು ಭತ್ತ ನಾಟಿ ಕಾರ್ಯ ಭರದಿಂದ ಸಾಗಿದೆ.

ಭತ್ತ ಪ್ರಧಾನ ಪ್ರದೇಶವಾಗಿರುವ ಮುಂಡಗೋಡ ತಾಲೂಕಿನಲ್ಲಿ ಶೇ. ೬೦ರಷ್ಟು ಭೂಮಿಯಲ್ಲಿ ಭತ್ತವನ್ನೇ ಬೆಳೆಯಲಾಗುತ್ತದೆ. ತಾಲೂಕಿನಲ್ಲಿ ಯಾವುದೇ ನೀರಾವರಿ ಯೋಜನೆ ಇಲ್ಲದಿರುವುದರಿಂದ ಇಲ್ಲಿಯ ಬಹುತೇಕ ರೈತರು ಮಳೆ ಆಶ್ರಯಿಸಿಯೇ ವ್ಯವಸಾಯ ಮಾಡುತ್ತಾರೆ. ತಾಲೂಕಿನಲ್ಲಿ ಸುಮಾರು ೧೫೦೦೦ ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಅದರಲ್ಲಿ ೬೦೦೦ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಕೂರ್ಗೆ ಭತ್ತದ ಗದ್ದೆಗಳಲ್ಲಿ ನೀರು ಆವರಿಸಿದ್ದು, ಹರಗೊಡತ ಹೊಡೆಯಲಾಗಿದೆ. ಈಗ ನಾಟಿ ಭತ್ತ ಬಿತ್ತನೆ ಕೂಡ ನಡೆಯುತ್ತಿದೆ. ಸುಮಾರು ೪೫೦೦ ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ, ಸುಮಾರು ೧೫೦೦ ಹೆಕ್ಟೇರನಲ್ಲಿ ಕಬ್ಬು ನಾಟಿ ಹಾಗೂ ಹತ್ತಿ, ಸೋಯಾಬಿನ್ ಮುಂತಾದ ಬೆಳೆಗಳನ್ನು ಕೂಡ ಸ್ಪಲ್ಪ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದ್ದು, ಭತ್ತ ನಾಟಿ ಪೂರ್ಣಗೊಂಡರೆ ಶೇ. ೧೦೦ರಷ್ಟು ಬಿತ್ತನೆಯಾದಂತಾಗಲಿದೆ.

ಭರದಿಂದ ಸಾಗಿದ ಭತ್ತದ ನಾಟಿ ಕಾರ್ಯ

ಈ ವರೆಗೂ ಉತ್ತಮ ಮಳೆಯಾಗಿದ್ದರಿಂದ ಬಹುತೇಕ ರೈತರು ಭತ್ತದ ಸಸಿ ಮಡಿಗಳನ್ನು ತಯಾರಿ ಮಾಡಿಕೊಂಡಿದ್ದು, ಗದ್ದೆಗಳಲ್ಲಿ ಭತ್ತದ ಸಸಿ ನೆಡುವ ಮೂಲಕ ನಾಟಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುಮಾರು ೧೦೦೦ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗುತ್ತಿದ್ದು, ಈಗಾಗಲೇ ಶೇ. ೮೦ರಷ್ಟು ನಾಟಿ ಕಾರ್ಯ ಪೂರ್ಣಗೊಂಡಿದ್ದು, ಇನ್ನುಳಿದ ಕಾರ್ಯ ಭರದಿಂದ ಸಾಗಿದೆ. ಕೆರೆ, ಜಲಾಶಯದ ಕೆಳ ಭಾಗದಲ್ಲಿರುವ ಗದ್ದೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ನಾಟಿ ಕಾರ್ಯ ನಡೆಸಲಾಗುತ್ತಿದೆ. ಭತ್ತದ ಗದ್ದೆಗಳೀಗ ಹಸಿರಿನಿಂದ ಕಂಗೊಳಿಸುತ್ತಿದ್ದು, ಭತ್ತದ ಬೆಳೆಗಳಿಗೆ ಪೂರಕ ವಾತಾವರಣವಿದೆ. ಗದ್ದೆಗಳಲ್ಲಿ ಕಳೆ (ಕಸ)ದ ಪ್ರಮಾಣ ಕಡಿಮೆ ಇದೆ. ಮುಂದಿನ ದಿನಗಳಲ್ಲಿಯೂ ಪ್ರಕೃತಿ ರೈತನ ಕೈಹಿಡಿದರೆ ಉತ್ತಮ ಭತ್ತದ ಬೆಳೆ ನಿರೀಕ್ಷಿಸುವುದರಲ್ಲಿ ಯಾವುದೇ ಅತಿಶಯೋಕ್ತಿಯಾಗಲಿಕ್ಕಿಲ್ಲ.

ಗೋವಿನ ಜೋಳ ಬೆಳೆ ಹಾನಿ

ನಿರಂತರ ಮಳೆಯಿಂದಾಗಿ ಗದ್ದೆಯಲ್ಲಿ ನೀರು ಸಂಗ್ರಹವಾಗಿ ತೇವಾಂಶ ಹೆಚ್ಚಿದ ಪರಿಣಾಮ ತಡವಾಗಿ ಬಿತ್ತನೆ ಮಾಡಲಾದ ಗೋವಿನ ಜೋಳ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡು ಬೆಳೆಯಲ್ಲಿ ಕುಂಟಿತವಾಗಿದ್ದು, ಗೋವಿನ ಜೋಳ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಕಳೆದ ವರ್ಷ ಮಳೆ ಕಡಿಮೆಯಾಗಿದ್ದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಗೋವಿನ ಜೋಳ ಬೆಳೆದ ರೈತರು ಕೈಸುಟ್ಟುಕೊಂಡಿದ್ದಾರೆ.

ಮಳೆ ಪ್ರಮಾಣ ಹೆಚ್ಚು

ಪ್ರಸಕ್ತ ಸಾಲಿನಲ್ಲಿ ಜನವರಿ ೧ರಿಂದ ಈ ವರೆಗೆ ತಾಲೂಕಿನಲ್ಲಿ ೧೨೦೦ ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಸುಮಾರು ೩೦೦ ಮಿ.ಮೀ ಮಳೆ ಜಾಸ್ತಿಯಾಗಿದೆ. ಕಳೆದ ವರ್ಷ ಈ ವೇಳೆಗೆ ಕೇವಲ ೭೫೦ ಮಿ.ಮೀ ಮಳೆಯಾಗಿತ್ತು.

ಶೇ. 80ರಷ್ಟು ಬಿತ್ತನೆಗುರಿಯಂತೆ ತಾಲೂಕಿನಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, ಶೇ. ೮೦ರಷ್ಡು ಭತ್ತ ನಾಟಿ ಕಾರ್ಯ ಪೂರ್ಣಗೊಂಡಿದ್ದು, ಇನ್ನುಳಿದ ಪ್ರದೇಶ ನಾಟಿಯಾದರೆ ಶೇ. ೧೦೦ರಷ್ಟು ಬಿತ್ತನೆ ಪೂರ್ಣಗೊಂಡಂತಾಗುತ್ತದೆ. ತಡವಾಗಿ ಬಿತ್ತನೆ ಮಾಡಲಾದ ಗೋವಿನ ಜೋಳ ಬೆಳೆಗೆ ತೇವಾಂಶ ಹೆಚಿದ ಪರಿಣಾಮ ಕೊಳೆ ರೋಗ ಕಾಣಿಸಿಕೊಂಡಿದ್ದು, ಈ ಬಗ್ಗೆ ಔಷದೋಪಚಾರಕ್ಕಾಗಿ ರೈತರಿಗೆ ಸಲಹೆ ನೀಡಲಾಗಿದೆ.

ಎಮ್.ಎಸ್. ಕುಲಕರ್ಣಿ

ಸಹಾಯಕ ಕೃಷಿ ನಿರ್ದೇಶಕ ಮುಂಡಗೋಡ

Share this article