ಕೊನೆಗೂ ರಾಯಚೂರು ಜಿಲ್ಲೆಗೆ ಮಳೆ ಬಂತು

KannadaprabhaNewsNetwork | Published : May 14, 2024 1:04 AM

ಸಾರಾಂಶ

ಭಾನುವಾರ ಮಧ್ಯರಾತ್ರಿ 1:30ಕ್ಕೆ ಆರಂಭಗೊಂಡ ಮಳೆಯು ಬೆಳಗಿನ ಜಾವ 6 ಗಂಟೆಯವರೆಗೂ ಸುರಿಯಿತು. ನಗರ ಸೇರಿ ಜಿಲ್ಲೆಯ ವಿವಿಧೆಡೆ ಭಾರಿ ಗುಡುಗು-ಮಿಂಚಿನ ಮಳೆ. ತಗ್ಗು ಪ್ರದೇಶ, ಭತ್ತದ ಬೆಳೆಗೆ ನುಗ್ಗಿದ ನೀರು. ರಸ್ತೆ, ವೃತ್ತಗಳು ಜಲಾವೃತವಾಗಿದೆ.

ಕನ್ನಡಪ್ರಭ ವಾರ್ತೆ ರಾಯಚೂರು

ತೀವ್ರ ಬರ, ಬೇಸಿಗೆಯ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಜನರಿಗೆ ಭಾನುವಾರ ಇಡೀ ರಾತ್ರಿ ಗುಡುಗು-ಮಿಂಚಿನ ಆರ್ಭಟದಡಿ ಸುರಿದ ಮಳೆಯು ತಂಪಿನ ಅನುಭವ ಕೊಟ್ಟಿದೆ. ರಾಜ್ಯದಾದ್ಯಂತ ಪೂರ್ವ ಮುಂಗಾರು ಮಳೆ ಆಗುತ್ತಿರುವ ಸಮಯದಲ್ಲಿ ರಾಯಚೂರು ನಗರ ಸೇರಿ ಜಿಲ್ಲೆಯಾದ್ಯಂತ ಇಂದು ನಾಳೆ ಮಳೆ ಬರುತ್ತದೆ ಎನ್ನುವ ಆತ್ಮವಿಶ್ವಾಸದಲ್ಲಿದ್ದ ಮಂದಿ ಮೇಲೆ ಕೊನೆಗೂ ವರುಣ ದೇವ ಕೃಪೆ ತೋರಿದ್ದು, ಅಂತು-ಇಂತು ಮಳೆ ಬಂತು ಎಂದು ಜನ ಉದ್ಗರಿಸುವಂತೆ ಮಾಡಿದೆ.

ಪ್ರಸಕ್ತ ಸಾಲಿನಲ್ಲಿ ಬೇಸಿಗೆಯ ತಾಪ, ಶಕೆಯ ತೀವ್ರತೆ ಗರಿಷ್ಠ ಪ್ರಮಾಣಕ್ಕೆ ತಲುಪಿತ್ತು. ಜಿಲ್ಲೆಯಲ್ಲಿ ಸುಮಾರು 45 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶವು ಸಹ ದಾಖಲಾಗಿತ್ತು. ದಿನೇ ದಿನ ಸೂರ್ಯನ ತಾಪಕ್ಕೆ ತುತ್ತಾಗುತ್ತಿದ್ದ ಜನರು ಮಳೆಯ ನಿರೀಕ್ಷೆಯ ತುತ್ತ ತುದಿಯಲ್ಲಿದ್ದ ಸಮಯದಲ್ಲಿ ಭಾನುವಾರ ಮಧ್ಯರಾತ್ರಿ 1:30ಕ್ಕೆ ಆರಂಭಗೊಂಡ ಮಳೆಯು ಬೆಳಗಿನ ಜಾವ 6 ಗಂಟೆಯವರೆಗೂ ಸುರಿಯಿತು. ಮಳೆಯ ಜೊತೆಗೆ ಗುಡುಗು-ಮಿಂಚಿನ ತಾಂಡವ ಜೋರಾಗಿತ್ತು. ರಾಯಚೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಾಗೂ ಮಾನ್ವಿ, ಸಿಂಧನೂರು ಸೇರಿ ಇತರೆ ಪ್ರಾಂತದಲ್ಲಿ ಮಳೆಯಾಗಿರುವುದು ಬರದಿಂದ ಕಂಗೆಟ್ಟಿದ್ದ ರೈತರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ಇಡೀ ರಾತ್ರಿ ಸುರಿದ ಮಳೆಯಿಂದಾಗಿ ರಾಯಚೂರು ನಗರದ ಪ್ರಮುಖ ರಸ್ತೆ, ವೃತ್ತ ಹಾಗೂ ಬಡಾವಣೆಗಳು ಜಲಾವೃತಗೊಂಡಿದ್ದು, ಗುಡುಗು-ಮಿಂಚಿರುವ ಕಾರಣಕ್ಕೆ ಕರೆಂಟ್‌ ಕಟ್‌ ಮಾಡಿದ್ದರಿಂದ ಜನರು ರಾತ್ರಿ ಜಾಗರಣೆ ಮಾಡುವಂತಾಯಿತು.ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದರೆ, ಸ್ಥಳೀಯ ರಾಜೇಂದ್ರ ಗಂಜ್‌ ಎಪಿಎಂಸಿ ಆವರಣದಲ್ಲಿ ಸಂಗ್ರಹಿಸಿಟ್ಟ ಭತ್ತದ ಬೆಳೆಗೆ ನೀರು ನುಗ್ಗಿದ್ದು, ಭತ್ತ ತುಂಬಿದ ಚೀಲಗಳು ಹೊದ್ದೆಯಾಗಿವೆ. ಜಿಲ್ಲೆ ಸೇರಿದಂತೆ ಪಕ್ಕದ ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ರೈತರು ತಾವು ಬೆಳೆದ ಭತ್ತವನ್ನು ಮಾರಾಟ ಮಾಡಲು ಎಪಿಎಂಸಿಗೆ ತಂದಿದ್ದರು ಇದರಲ್ಲಿ ನೂರಾರು ಭತ್ತದ ಚೀಲಗಳನ್ನು ವರ್ತಕರು ರೈತರಿಂದ ಖರೀದಿಸಿ ಪ್ರಾಂಗಣದಲ್ಲಿ ಸಂಗ್ರಹಿಸಿಟ್ಟಿದ್ದರು. ರಾತ್ರಿಯಿಡಿ ಸುರಿದ ಮಳೆಯು ಭತ್ತ ನೀರುಪಾಲಾಗಿದ್ದು ಲಕ್ಷಾಂತರ ರೈತರ ಜೊತೆಗೆ ವರ್ತಕರಿಗೆ ನಷ್ಟವನ್ನುಂಟು ಮಾಡಿದೆ.

ಮಳೆಯಿಂದಾಗಿ ರಾಯಚೂರು ನಗರದ ಚರಂಡಿಗಳು ತುಂಬಿ ಹರಿದ ಪರಿಣಾಮ ಅದರಲ್ಲಿದ್ದ ಪ್ಲಾಸ್ಟಿಕ್‌, ತ್ಯಾಜ್ಯವು ರಸ್ತೆಗಳ ಮೇಲೆ ಬಂದಿ ಬಿದ್ದಿದೆ. ನಗರಸಭೆಯಿಂದ ಸ್ವಚ್ಛತೆ ಕಾರ್ಯ ಸಮರ್ಪಕವಾಗಿ ಮಾಡದ ಕಾರಣಕ್ಕೆ ಚರಂಡಿಗಳು ಮಳೆ ನೀರಿನಿಂದ ತುಂಬಿದ್ದು, ತಗ್ಗು ಪ್ರದೇಶದ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳ ಸಮಸ್ಯೆ ಅನುಭವಿಸಿದರು. ಇನ್ನು ಗ್ರಾಮೀಣ ಭಾಗದಲ್ಲಿ ಮಳೆಯು ಸಾಕಷ್ಟು ಅನಾವುತ ಮಾಡಿದೆ. ತೋಟಗಾರಿಕೆ ಬೆಳೆಗಳೊಂದಿಗೆ ಕಾಯಿಪಲ್ಲೆ ಬೆಳೆಗಳು ಮಳೆಯಿಂದ ಹಾನಿಗೀಡಾಗಿವೆ.ರಾಯಚೂರು ತಾಲೂಕಿನಲ್ಲಿ ಸುರಿದ ಮಳೆ ಮಾಹಿತಿ

ರಾಯಚೂರು ತಾಲೂಕಿನ ಯರಗೇರಾ ಹೋಬಳಿಯಲ್ಲಿ ಅತೀ ಹೆಚ್ಚು 136 ಮಿ.ಮೀ ಮಳೆಯಾಗಿದ್ದರೆ, ಸಿಂಗನೋಡಿಯಲ್ಲಿ 52.5 ಮಿ.ಮೀ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಉಳಿದಂತೆ ಮಿಟ್ಟಿಮಲ್ಕಾಪುರದಲ್ಲಿ 132,ಕಲ್ಮಲಾದಲ್ಲಿ 115, ಬೀಜನಗೇರಾದಲ್ಲಿ 111, ಶಾಖವಾದಿಯಲ್ಲಿ 106, ಮರ್ಚೇಟ್ಹಾಳದಲ್ಲಿ 103, ಪೂರ್ತಿಪ್ಲಿಯಲ್ಲಿ 89 ಮಿ.ಮೀ ಮಳೆಯಾಗಿದೆ. ಅದೇ ರೀತಿ ಕಾಡ್ಲೂರು, ಯಾಪಲದಿನ್ನಿ ವ್ಯಾಪ್ತಿಯಲ್ಲಿ ತಲಾ 87 ಮಿ.ಮೀ, ಎಲ್‌.ಕೆ.ದೊಡ್ಡಿಯಲ್ಲಿ 84, ಚಂದ್ರಬಂಡಾ ಮತ್ತು ಚಿಕ್ಕಸುಗೂರು ಹೋಬಳಿ ವ್ಯಾಪ್ತಿಯಲ್ಲಿ ತಲಾ 64, ಗಾಣಧಾಳ ಮತ್ತು ಇಡಪನೂರು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ 59 ಮಿ.ಮೀ.ನಷ್ಟು ಮಳೆ ಸುರಿದಿದೆ.

Share this article