ರೈನಿ ರಿಸರ್ಚ್ ಆ್ಯಂಡ್ ಮ್ಯಾನುಫ್ಯಾಕ್ಚರ್ ಸಂಸ್ಥೆ । ವಿವಿಧ ರಾಜ್ಯಗಳ ಎನ್‌ಜಿಒ ಮುಖ್ಯಸ್ಥರ ಕಾರ್ಯಾಗಾರ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಳೆ ನೀರು ಕೊಯ್ಲು ತಂತ್ರಜ್ಞಾನ ಬಳಸಿಕೊಂಡು ಮುಂದಿನ ಪೀಳಿಗೆಗೆ ಒಂದು ಉತ್ತಮ ಭವಿಷ್ಯ ಕೊಡಬಹುದು. ನೀರಿನ ಸಮಸ್ಯೆಗೆ ನಮ್ಮ ಕೈಯಲ್ಲೇ ಪರಿಹಾರ ಇದೆ. ಈ ತಂತ್ರಜ್ಞಾನ ತುಂಬಾ ಸರಳ ಇದೆ ಎಂದು ರೈನಿ ರಿಸರ್ಚ್ ಆ್ಯಂಡ್ ಮ್ಯಾನುಫ್ಯಾಕ್ಚರ್ ಸಂಸ್ಥೆ ನಿರ್ದೇಶಕ ವಿಜಯರಾಜ್ ಹೇಳಿದರು.ನಗರ ಸಮೀಪದ ಹಾದಿಹಳ್ಳಿಯಲ್ಲಿ ಗುರುವಾರ ನಡೆದ ದೇಶದ ವಿವಿಧ ರಾಜ್ಯಗಳ ಎನ್‌ಜಿಒಗಳು ಮತ್ತು ಮಳೆ ನೀರು ಕೊಯ್ಲು ವಿಷಯದಲ್ಲಿ ಆಸಕ್ತಿ ಹೊಂದಿರುವವರ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಲ್ಲೆಡೆ ನೀರಿಗೆ ಹಾಹಾಕಾರ ಇದೆ. ಇದೇ ವೇಳೆ ಸಾಕಷ್ಟು ಮಳೆ ಆಗುತ್ತಿದೆ. ಬೆಂಗಳೂರಿನಲ್ಲಿ ಒಂದು ಚಿಕ್ಕ ಮನೆಯಲ್ಲಿ ವರ್ಷಕ್ಕೆ 1.20 ಲಕ್ಷ ಲೀಟರ್ ಶುದ್ಧ ನೀರು ಪೋಲಾಗುತ್ತಿದೆ. ಅದನ್ನು ಹೊರಕ್ಕೆ ಬಿಟ್ಟು ನೀರಿಗಾಗಿ ಹುಡುಕಾಡುವ ಸ್ಥಿತಿ ನಾವೇ ತಂದುಕೊಂಡಿದ್ದೇವೆ. ಮಳೆ ನೀರನ್ನು ಸಂಪನ್ಮೂಲ ಎಂದು ಎಂದಿಗೂ ನಾವು ಅಂದುಕೊಂಡಿಲ್ಲ ಅದೇ ಸಮಸ್ಯೆ ಆಗಿರುವುದು ಎಂದರು.ಒಂದು ಎಕರೆಗೆ ಒಂದಿಂಚು ಮಳೆ ನೀರು ಬಿದ್ದರೆ ವರ್ಷಕ್ಕೆ ಒಂದು ಲಕ್ಷ ಲೀಟರ್ ನೀರು ಸುಮ್ಮನೆ ಹರಿದು ಹೋಗುತ್ತಿದೆ. ಅದನ್ನು ನಾವೇ ಹಿಡಿದಿಟ್ಟು ಭೂಮಿಯಲ್ಲಿ ಇಂಗಿಸಿದ್ದರೆ ಇಂದು ನಮಗೇ ಸಿಗುತ್ತಿತ್ತು. ಬೋರ್‌ವೆಲ್ ಸ್ಥಿತಿ ಚಿಂತಾ ಜನಕವಾಗಿದೆ. 1700 ಅಡಿ ಕೊರೆಸಿದರೂ ನೀರು ಸಿಗುತ್ತಿಲ್ಲ. 4 ಲಕ್ಷ ರು. ರೈತರು ಖರ್ಚು ಮಾಡಬೇಕಿದೆ. ಇದೇ ಕಾರಣಕ್ಕೆ ಸಾಲ ಹೆಚ್ಚಾಗಿ ರೈತ ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ ಎಂದು ಹೇಳಿದರು. ರೇನಿ ರಿಸರ್ಚ್ ಆ್ಯಂಡ್ ಮ್ಯಾನುಫ್ಯಾಕ್ಚರ್ ಸಂಸ್ಥೆ ನಿರ್ದೇಶಕ ಮೈಕಲ್ ಸದಾನಂದ ಬ್ಯಾಪ್ಟಿಸ್ ಮಾತನಾಡಿ, ಪ್ರತಿ ಯೊಬ್ಬರು ಅಂತರ್ಜಲ ಹೆಚ್ಚಿಸಲು ಪ್ರಯತ್ನ ಪಡಬೇಕು. ನೀರನ್ನು ಸಂರಕ್ಷಣೆ ಮಾಡಿ ಮಿತವಾಗಿ ಬಳಸಬೇಕು. ಈ ಎಲ್ಲಾ ಕಾರಣದಿಂದ ಎನ್‌ಜಿಒಗಳು, ಮತ್ತು ಮಳೆನೀರಿನ ಬಗ್ಗೆ ಕಾಳಜಿ ಇರುವವರಿಗಾಗಿ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಇಡೀ ಭಾರತದಲ್ಲಿ ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿಟ್ಟು ಕೊಳ್ಳುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ದೇಶದ ಜಮ್ಮು ಮತ್ತು ಕಾಶ್ಮೀರ, ರಾಂಚಿ, ರಾಜಸ್ಥಾನ, ಮುಂಬೈ, ದೆಹಲಿ, ಚೆನ್ನೈ, ಆಂಧ್ರಪ್ರದೇಶದಿಂದ ಆಸಕ್ತರು ಇಲ್ಲಿಗೆ ಬಂದಿದ್ದಾರೆ ಎಂದರು. ಗುರ್ಗಾಂವ್‌ನ ಸುನೀಲ್ ಪಚಾರ್ ಮಾತನಾಡಿ, ಇಲ್ಲಿನ ಮಳೆ ನೀರು ಕೊಯ್ಲು ತಂತ್ರಜ್ಞಾನ ಕಂಡು ಥ್ರಿಲ್‌ಆಗಿದೆ. ನೀರಿನ ಸಮಸ್ಯೆಗೆ ಸಾಕಷ್ಟು ಸರಳ ಪರಿಹಾರಗಳು ಇಲ್ಲಿವೆ. ಆದರೆ ಅದನ್ನು ನಾವು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿ ಕೊಳ್ಳುತ್ತಿಲ್ಲ. ಮುಂಗಾರಿನಲ್ಲಿ ಸಾಕಷ್ಟು ನೀರನ್ನು ವ್ಯರ್ಥವಾಗಿ ಹರಿಯಲು ಬಿಟ್ಟು ಬೇಸಿಗೆಯಲ್ಲಿ ನೀರಿಗೆ ತೊಂದರೆ ಅನುಭವಿಸುತ್ತಿದ್ದೇವೆ. ಈ ಸಮಸ್ಯೆ ಪರಿಹರಿಸಲು ಮಳೆ ನೀರು ಕೊಯ್ಲು ತಂತ್ರಜ್ಞಾನದಲ್ಲಿ ಸುಲಭದ ಪರಿಹಾರಗಳಿವೆ ಅದನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು. ಮಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಜಯಂತ್ ಮಾತನಾಡಿ, ಇಲ್ಲಿನ ರೈನ್ ವಾಟರ್ ಹಾರ್‍ವೆಸ್ಟಿಂಗ್‌ನ ಗುಣಮಟ್ಟ ಮತ್ತು ನೀರಿನ ಫಿಲ್ಟರ್‌ಗೆ ಬೇರೆ ಪರ್ಯಾಯವಿಲ್ಲ ಎಂದು ಹೇಳಿದರು. ಮುಂಬೈನ ಸಂದೀಪ್ ಅಧ್ಯಾಪಕ್ ಮಾತನಾಡಿ, ನಾವು ದೇಶದ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಸಂರಕ್ಷಣೆ ವಿಷಯದಲ್ಲಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿನ ತಂತ್ರಜ್ಞಾ ನಗರ ಹಾಗೂ ಗ್ರಾಮೀಣ ಭಾಗದಲ್ಲಿನ ನೀರಿನ ಸಮಸ್ಯೆಗಳಿಗೆ ಉತ್ತಮ ಪರಿಹಾರ ಕಲ್ಪಿಸಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹೈದರಾಬಾದ್ ವಾಸುದೇವ್, ನಿರ್ದೇಶಕರಾದ ಮನೋಜ್ ಸಾಂವೆಲ್ ಬ್ಯಾಪ್ಟಿಸ್ಟ್, ವರುಣ್ ಬ್ಯಾಪ್ಟಿಸ್ಟ್ ಉಪಸ್ಥಿತರಿದ್ದರು. 14 ಕೆಸಿಕೆಎಂ 3ಚಿಕ್ಕಮಗಳೂರು ಸಮೀಪದ ಹಾದಿಹಳ್ಳಿಯಲ್ಲಿರುವ ರೈನಿ ರಿಸರ್ಚ್ ಆ್ಯಂಡ್ ಮ್ಯಾನುಫ್ಯಾಕ್ಚರ್ ಸಂಸ್ಥೆಯಲ್ಲಿ ಗುರುವಾರ ವಿವಿಧ ರಾಜ್ಯಗಳ ಎನ್‌ಜಿಒಗಳು ಮತ್ತು ಮಳೆ ನೀರು ಕೊಯ್ಲು ವಿಷಯದಲ್ಲಿ ಆಸಕ್ತಿ ಹೊಂದಿರುವವರ ಕಾರ್ಯಾಗಾರ ನಡೆಯಿತು.