ಚಿಕ್ಕಮಗಳೂರು : ಚಿಕ್ಕಮಗಳೂರುಜಿಲ್ಲೆಯ ಮಲೆನಾಡಿನಲ್ಲಿ ವರುಣ ಆರ್ಭಟ ಮುಂದುವರೆದಿದೆ. ಭಾನುವಾರ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಸಹೋದರಿಯರಿಗೆ ಗಾಯಗಳಾಗಿವೆ.ಎನ್.ಆರ್.ಪುರ ತಾಲೂಕಿನಾದ್ಯಂತ ಮಧ್ಯಾಹ್ನ ಒಂದು ಗಂಟೆಗೆ ಆರಂಭವಾದ ಮಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಗಾಳಿ, ಗುಡುಗಿನೊಂದಿಗೆ ಬಂದಿತು.
ಇಲ್ಲಿನ ಕುದುರೆಗುಂಡಿ - ಕೈಮರ ರಸ್ತೆಯ ಉದ್ದಕ್ಕೂ ಹಲವೆಡೆ ಮರಗಳು ರಸ್ತೆಗೆ ಉರುಳಿ ಬಿದ್ದವು.ಕಟ್ಟಿನಮನೆ ಗ್ರಾಮದ ಸಂತೋಷ್‌ಕುಮಾರ್ ಹಾಗೂ ಅವರ ಸಹೋದರಿಯರಾದ ಸುನೀತಾ, ಗೀತಾ, ಆಶಾ ಹಾಗೂ ಸುಮಲತಾ ಅವರು ಕೋಣನಗುಡಿಯ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ತೆರಳಿದ್ದರು.
ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಭಾರೀ ಗಾಳಿ, ಮಳೆ ಆರಂಭವಾಗುತ್ತಿದ್ದಂತೆ ಎಲ್ಲರೂ ಕಾರಿನಲ್ಲಿ ಕುಳಿತುಕೊಳ್ಳಲು ಹೋಗಿದ್ದಾರೆ. ಆಗ ಸಂತೋಷ್‌ಕುಮಾರ್ ಅವರು ಕಾರಿನಿಂದ ಇಳಿದು ಸಮೀಪದಲ್ಲಿರುವ ಮನೆಗೆ ಬಂದಿದ್ದಾರೆ. ಸುನೀತಾ ಅವರು ಸಹ ಕಾರಿನಿಂದ ಇಳಿದು ಮನೆ ಕಡೆಗೆ ಹೋಗಿ ಮತ್ತೆ ವಾಪಸ್ ಕಾರಿನ ಬಳಿ ಸಹೋದರಿಯತ್ತ ಬರುವಾಗ ಬೃಹತ್ ಮರವೊಂದು ಇವರ ಮೇಲೆ ಬಿದ್ದಿದೆ.
ಸುನೀತಾ (48) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನೊಳಗೆ ಇದ್ದ ಅವರ ಸಹೋದರಿಯರಿಗೆ ಚಿಕ್ಕಪುಟ್ಟ ಗಾಯಾಗಳಾಗಿದ್ದು ಅವರನ್ನು ಬಾಳೆಹೊನ್ನೂರು ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಧ್ಯಾಹ್ನ 1 ಗಂಟೆಗೆ ಆರಂಭವಾದ ಮಳೆ ಸಂಜೆಯವರೆಗೆ ನಿರಂತರವಾಗಿ ಬರುತ್ತಲೇ ಇತ್ತು.
ಗುಡುಗು ಸಹಿತ ಸಾಧಾರಣವಾಗಿ ಮಳೆ ಬಂದಿತು.ಕೊಪ್ಪದಲ್ಲಿ ಮಧ್ಯಾಹ್ನ 1 ಗಂಟೆಗೆ ಆರಂಭವಾದ ಮಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿಯಿತು. ಶೃಂಗೇರಿಯಲ್ಲೂ ಇದೇ ವೇಳೆಯಲ್ಲಿ ಮಳೆಯಾಗಿದೆ. ಮೂಡಿಗೆರೆ, ಕಳಸ ತಾಲೂಕಿನ ಕೆಲವೆಡೆ ಸಾಧಾರಣ ಮಳೆ ಬಂದಿದೆ.ಕಡೂರು ಹಾಗೂ ತರೀಕೆರೆ ತಾಲೂಕುಗಳಲ್ಲಿ ಮೋಡ ಹಾಗೂ ಬಿಸಿಲಿನ ವಾತಾವರಣ ಇತ್ತು. ಸಂಜೆಯ ವರೆಗೆ ಇದೇ ಪರಿಸ್ಥಿತಿ ಮುಂದುವರೆದಿತ್ತು.
ಶೃಂಗೇರಿ: ಗುಡುಗು ಸಿಡಿಲು ಸಹಿತ ಮಳೆಯ ಆರ್ಭಟಶೃಂಗೇರಿ: ತಾಲೂಕಿನಾದ್ಯಂತ ಭಾನುವಾರ ಮಧ್ಯಾಹ್ನ ಗುಡುಗು ಸಿಡಿಲು ಸಹಿತ ಕೆಲ ಹೊತ್ತು ಮಳೆ ಆರ್ಭಟಿಸಿತು. ಮಧ್ಯಾಹ್ನ ಮೋಡ ಕವಿದು ಶೃಂಗೇರಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ವಿವಿಧೆಡೆ ಗುಡುಗು ಸಿಡಿಲಿನ ಆರ್ಭಟ ದೊಂದಿದೆ ಮಳೆ ಅಬ್ಬರಿಸಿತು.ಕೆರೆಕಟ್ಟೆ, ನೆಮ್ಮಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಮಧ್ಯಾಹ್ನದಿಂದಲೇ ಗುಡುಗು ಸಿಡಿಲಿನ ಆರ್ಭಟ ಜೋರಾಗಿತ್ತು. ನಂತರ 1 ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ಗುಡುಗು ಸಿಡಿಲಿನ ಆರ್ಭಟದಿಂದ ಸಂಜೆಯವರೆಗೂ ವಿದ್ಯುತ್, ಮೊಬೈಲ್ ಸಂಪರ್ಕ ಅಸ್ತವ್ಯಸ್ತಗೊಂಡಿತ್ತು. ಶೃಂಗೇರಿ ಪಟ್ಟಣದಲ್ಲಿ ಸಾಧಾರಣದಿಂದ ಕೂಡಿದ ಮಳೆಯಾಯಿತು.ಶನಿವಾರ ಮಧ್ಯಾಹ್ನವೂ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿತ್ತು. ಕಳೆದರೆಡು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ತಂಪು ವಾತಾವರಣ ಮೂಡಿಸಿದೆ. ಸಂಜೆಯೂ ಕೆಲವೆಡೆ ಗುಡುಗು ಸಹಿತ ಸಾಧಾರಣ ಮಳೆ ಮುಂದುವರೆದಿತ್ತು.
ಬಾಳೆಹೊನ್ನೂರಲ್ಲಿ ತುಂತುರು ಮಳೆಬಾಳೆಹೊನ್ನೂರು: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಮಧ್ಯಾಹ್ನ ತುಂತುರು ಮಳೆಯಾಗಿದೆ. ಭಾನುವಾರ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಮೋಡ ಕವಿದ ವಾತಾವರಣ ಉಂಟಾಗಿ ಗುಡುಗು ಸಹಿತವಾಗಿ ಅರ್ಧ ಗಂಟೆ ಕಾಲ ತುಂತುರು ಮಳೆಯಾಗಿದೆ. ಬಳಿಕವೂ ಗುಡುಗು ಹಾಗೂ ಮೋಡದ ವಾತಾವರಣವಿತ್ತು.