ಆರ್. ಸುಬ್ರಮಣಿ
ಕನ್ನಡಪ್ರಭ ವಾರ್ತೆ ಸಿದ್ದಾಪುರಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿಯಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಲವು ಕಡೆಗಳಲ್ಲಿ ರಸ್ತೆ ಮೇಲೆ ನೀರು ಬಂದಿದೆ. ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ಭಾಗದ ಕರಡಿಗೋಡು ಗುಹ್ಯ ಬೆಟ್ಟದಕಾಡು ಕುಂಬಾರ ಗುಂಡಿಯಂತಹ ನದಿ ತಟದ ಪ್ರದೇಶಗಳಲ್ಲಿ ಕಾವೇರಿ ನದಿ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದೆ.
ಕರಡಿಗೋಡು ರಸ್ತೆ ಮೇಲೆ ನೀರು: ಕರಡಿಗೋಡು ಹೊಳೆಕರೆ ರಸ್ತೆಯಲ್ಲಿ ನೀರು ಬಂದಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ನದಿ ದಡದಲ್ಲಿರುವ ಮನೆಗಳ ಸಮೀಪ ಕೂಡ ನೀರು ಬಂದಿದೆ. ಸದ್ಯ ಈ ಭಾಗದಲ್ಲಿ ಯಾವುದೇ ಮನೆಗಳಿಗೆ ನೀರು ನುಗ್ಗಿಲ್ಲ. ಕಂದಾಯ ಇಲಾಖೆ ಕಾವೇರಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ನದಿ ದಡದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೋಟಿಸ್ ನೀಡಿದೆ. ಸದ್ಯಕ್ಕೆ ಯಾವುದೇ ಮನೆಗಳಿಗೆ ನೀರು ನುಗ್ಗಿಲ್ಲ ಎಂಬ ಮಾಹಿತಿ ಕಂದಾಯ ಅಧಿಕಾರಿಗಳಿಂದ ಬಂದಿದೆ.ನದಿ ದಡದ ನಿವಾಸಿಗಳಲ್ಲಿ ಆತಂಕ: ಕಳೆದ ಎರಡು ದಿನಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ನದಿ ದಡದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. 2018 ರ ಮಳೆಗೆ ಮನೆಗಳಿಗೆ ನೀರು ನುಗ್ಗಿ ಹಲವು ಕಡೆಗಳಲ್ಲಿನ ನದಿ ದಡದ ನಿವಾಸಿಗಳ ಮನೆ ಕುಸಿದಿತ್ತು. ಹಲವರ ಮನೆಗಳಿಗೂ ಹಾನಿಯಾಗಿತ್ತು. ನಂತರ ಅವರೆಲ್ಲರೂ ತಾತ್ಕಾಲಿಕ ಮನೆ ನಿರ್ಮಿಸಿ ಹಾಗೂ ಮನೆ ಹಾನಿಯಾದವರು ಮನೆಗಳನ್ನು ದುರಸ್ತಿ ಪಡಿಸಿ ವಾಸವಾಗಿದ್ದಾರೆ. ಆದರೆ ನಿರಂತರ ಮಳೆಯಿಂದಾಗಿ ನದಿ ನೀರು ಏರಿಕೆಯಾಗುತ್ತಿರುವುದು ಇವರನ್ನು ಆತಂಕಕ್ಕೀಡಾಗಿಸಿದೆ.
ಕಂದಾಯ ಇಲಾಖೆ ಅಧಿಕಾರಿಗಳು ನದಿ ನೀರು ಏರಿಕೆಯಾಗುವುದರ ಬಗ್ಗೆ ಸ್ಥಳದಲ್ಲಿ ಇದ್ದು ಮಾಹಿತಿ ಕಲೆ ಹಾಕುತ್ತಿದ್ದು ಮಳೆ ಜಾಸ್ತಿಯಾಗಿ ಅವಶ್ಯಕತೆಯಾದಲ್ಲಿ ಕಾಳಜಿ ಕೇಂದ್ರ ತೆರೆಯಲು ಎಲ್ಲ ಸಿದ್ಧತೆ ಮಾಡಲಾಗಿದೆ. ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪವನ್ನು ಕಾಯ್ದಿರಿಸಲಾಗಿದ್ದು ತಕ್ಷಣ ನಿವಾಸಿಗಳನ್ನು ಸ್ಥಳಾಂತರಿಸಲು ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಸಹಾಯವಾಣಿ ಕೂಡ ತೆರೆಯಲಾಗಿದ್ದು ಸಾರ್ವಜನಿಕರು ಸಮಸ್ಯೆಗಳಿಗೆ 08274- 257328 ಸಹಾಯವಾಣಿಯನ್ನು ದಿನದ 24 ಗಂಟೆಯು ಸಂಪರ್ಕಿಸಬಹುದು ಎಂದು ಅಮ್ಮತ್ತಿ. ಕಂದಾಯ ನೀರಿಕ್ಷಕರು ಬಿ ಆರ್ ಅನಿಲ್ ಕುಮಾರ್ ಹೇಳಿದರು.