ಬೀದರ್ : ಮಳೆಗಾಲ ಆರಂಭವಾಗುತ್ತಿರುವುದರಿಂದ ನೀರು ನಿಲ್ಲದಂತೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನೋಡಿಕೊಳ್ಳಬೇಕು. ನೀರು ನಿಲ್ಲುವ ಸ್ಥಳಗಳಲ್ಲಿ ಸೊಳ್ಳೆಗಳು ಹೆಚ್ಚಾಗಿ ಉತ್ಪತ್ತಿಯಾಗಿ ಡೆಂಘೀ ಮತ್ತು ಚಿಕುನ್ ಗುನ್ಯ ಕಾಯಿಲೆಗಳು ಬರುತ್ತವೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಬೀದರ್ ಆಶ್ರಯದಲ್ಲಿ ನಡೆದ ಅಂತರ ಇಲಾಖೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೀದರ್ ಜಿಲ್ಲೆಯ ಯಾವ ತಾಲೂಕಿನಲ್ಲಿ ಹೆಚ್ಚಿನ ಡೆಂಘೀ ಹಾಗೂ ಚಿಕುನ್ ಗುನ್ಯ ಪ್ರಕರಣ ಹೆಚ್ಚಾಗಿ ಕಂಡು ಬರುತ್ತವೆ. ಅಂತಹ ಪ್ರದೇಶಗಳಲ್ಲಿ ಕಾಯಿಲೆಗಳ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಜನರಿಗೆ ಅರಿವು ಮೂಡಿಸಬೇಕು ಎಂದರು.
ಹಾಗೂ ಮಳೆ ಬಂದಾಗ ಕಲುಷಿತ ನೀರು ಕುಡಿಯುವ ನೀರಿಗೆ ಸೇರುವ ಸಾಧ್ಯತೆ ಇರುವುದರಿಂದ ಕ್ಲೋರಿನ್ ಸಾಕಾಗುವಷ್ಟು ಇಟ್ಟುಕೊಳ್ಳಬೇಕೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡೆಂಘೀ ಹಾಗೂ ಚಿಕುನ್ ಗುನ್ಯ ರೋಗ ಹರಡದಂತೆ ಜಿಲ್ಲೆಯ ಜನರು ಮುಂಜಾಗ್ರತೆ ವಹಿಸಬೇಕು. ಮನೆಯೊಳಗೆ ಮತ್ತು ಮೇಲ್ಚಾವಣಿಯ ನೀರಿನ ತೊಟ್ಟಿಗಳನ್ನು ತಪ್ಪದೇ ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ನೀರು ಭರ್ತಿ ಮಾಡಿ ಮುಚ್ಚಳಿಕೆಯಿಂದ ಮುಚ್ಚಬೇಕು. ಒಡೆದ ಬಾಟಲಿ, ಟಿನ್, ಟೈರ್ ಇತ್ಯಾದಿಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಏರ್ ಕೂಲರ್ ಮತ್ತು ಬೆಂಕಿ ಆರಿಸಲು ಉಪಯೋಗಿಸುವ ಬಕೆಟ್‌ಗಳಲ್ಲಿ ನೀರನ್ನು ಆಗಾಗ್ಗೆ ಬದಲಾಯಿಸುತ್ತಿರಬೇಕು ಎಂದರು.
ಮಲಗುವಾಗ ಸೊಳ್ಳೆ ಪರದೆ ತಪ್ಪದೇ ಉಪಯೋಗಿಸಬೇಕು. ಡೆಂಘೀ ಜ್ವರದ ಲಕ್ಷಣಗಳಾದ ತೀವ್ರ ಜ್ವರ, ವಿಪರೀತ ತಲೆನೋವು ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸ ಖಂಡ ಮತ್ತು ಕೀಲುಗಳಲ್ಲಿ ನೋವು ಹಾಗೂ ಚಿಕುನ್ ಗುನ್ಯ ರೋಗದ ಲಕ್ಷಣಗಳಾದ ಜ್ವರ ಮತ್ತು ಚಳಿ, ಮೈ ಕೈ ನೋವು ತಲೆ ನೋವಿನ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಳೆಗಾಲ ಆರಂಭವಾಗುತ್ತಿರುವುದರಿಂದ ಜಿಲ್ಲೆಯ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ಹೇಳಿದರು.
ಈ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ, ಮಲೇರಿಯಾ ಅಧಿಕಾರಿ ಡಾ. ರಾಜಶೇಖರ ಪಾಟೀಲ, ಕುಟುಂಬ ಕಲ್ಯಾಣ ಅಧಿಕಾರಿ ಡಾ. ದಿಲೀಪ್ ಡೊಂಗ್ರೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಂಕ್ರೆಪ್ಪಾ ಬೊಮ್ಮಾ, ಡಾ.ಅನಿಲ ಚಿಂತಾಮಣಿ, ನಗರಸಭೆ ಆಯುಕ್ತರಾದ ಶಿವಪ್ಪ ಅಂಬಿಗೇರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಗುರುರಾಜ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.