ಸ್ವಂತ ಹಣದಲ್ಲೇ ವಿಶಾಲವಾದ ಸುಸಜ್ಜಿತ ಕ್ಯಾಂಪಸ್‌ ನಿರ್ಮಾಣ ಮಾಡಿಕೊಳ್ಳುತ್ತಿರುವ ರಾಜ್ಯದ ಏಕೈಕ ಶ್ರೀಮಂತ ರಾಜೀವ್‌ ವಿವಿ!

KannadaprabhaNewsNetwork | Updated : Apr 15 2025, 10:19 AM IST

ಸಾರಾಂಶ

ಸರ್ಕಾರದ ಅನುದಾನದ ನೆರವಿಲ್ಲದೆ ನೂರಾರು ಕೋಟಿ ರು.ಗಳ ಬೃಹತ್‌ ಮೊತ್ತದಲ್ಲಿ ಸ್ವಂತ ಹಣದಲ್ಲೇ ವಿಶಾಲವಾದ ಸುಸಜ್ಜಿತ ಕ್ಯಾಂಪಸ್‌ ನಿರ್ಮಾಣ ಮಾಡಿಕೊಳ್ಳುತ್ತಿರುವ ರಾಜ್ಯದ ಏಕೈಕ ಶ್ರೀಮಂತ ವಿಶ್ವವಿದ್ಯಾಲಯ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌).

ಲಿಂಗರಾಜು ಕೋರ 

 ಬೆಂಗಳೂರು : ಸರ್ಕಾರದ ಅನುದಾನದ ನೆರವಿಲ್ಲದೆ ನೂರಾರು ಕೋಟಿ ರು.ಗಳ ಬೃಹತ್‌ ಮೊತ್ತದಲ್ಲಿ ಸ್ವಂತ ಹಣದಲ್ಲೇ ವಿಶಾಲವಾದ ಸುಸಜ್ಜಿತ ಕ್ಯಾಂಪಸ್‌ ನಿರ್ಮಾಣ ಮಾಡಿಕೊಳ್ಳುತ್ತಿರುವ ರಾಜ್ಯದ ಏಕೈಕ ಶ್ರೀಮಂತ ವಿಶ್ವವಿದ್ಯಾಲಯ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌).

ಪ್ರಸ್ತುತ ಬೆಂಗಳೂರಿನ ಜಯನಗರದಲ್ಲಿರುವ ಆರ್‌ಜಿಯುಎಚ್‌ಎಸ್‌ ಕ್ಯಾಂಪಸ್‌ ಅನ್ನು ರಾಮನಗರಕ್ಕೆ ಸ್ಥಳಾಂತರಿಸಲು 2006ರಲ್ಲೇ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ನಿರ್ಧರಿಸಿ ಸುಮಾರು 70 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. 

ಕ್ಯಾಂಪಸ್‌ ಸ್ಥಳಾಂತರ ಸಂಬಂಧ ಆರ್‌ಜಿಯುಎಚ್‌ಎಸ್‌ ಕಾಯ್ದೆಗೂ ತಿದ್ದುಪಡಿ ತರಲಾಯಿತು.ಕ್ಯಾಂಪಸ್‌ಗೆ ನಿಗದಿಪಡಿಸಿದ್ದ ಜಾಗದ ಭೂ ವ್ಯಾಜ್ಯ, ಕ್ಯಾಂಪಸ್‌ ನಿರ್ಮಾಣಕ್ಕೆ ಅನುದಾನ ವಿಚಾರ ಹಾಗೂ ರಾಜಕೀಯ ಕಾರಣಗಳಿಂದಾಗಿ ಕ್ಯಾಂಪಸ್‌ ನಿರ್ಮಾಣ ಕಾರ್ಯ ಸಾಕಷ್ಟು ತಡವಾಗಿಯಿತು. ಕೊನೆಗೆ ಬಸವರಾ ಬೊಮ್ಮಾಯಿ ಅವರ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಯಾಂಪಸ್‌ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ಟೆಂಡರ್‌ ಪ್ರಕ್ರಿಯೆ ಮೂಲಕ ಶುರುವಾದ ಕಾಮಗಾರಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅವಧಿಯಲ್ಲಿ ಇನ್ನಷ್ಟು ವೇಗ ಪಡೆದಿದೆ.

ರಾಮನಗರ ಜಿಲ್ಲೆಯ ಅರ್ಚಕರಹಳ್ಳಿಯಲ್ಲಿ 600 ಕೋಟಿ ರು. ವೆಚ್ಚದಲ್ಲಿ ವಿವಿಯ ಆಡಳಿತ ಕಚೇರಿ, ವೈದ್ಯಕೀಯ ಕಾಲೇಜು ನಿರ್ಮಾಣವಾಗುತ್ತಿದೆ. ನಿಗದಿತ ಅವಧಿಯಂತೆ ಕಾಮಗಾರಿ ಪೂರ್ಣಗೊಂಡರೆ ಈ ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಂಡು ಕ್ಯಾಂಪಸ್‌ ಸ್ಥಳಾಂತರಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಹೇಳುತ್ತಿದೆ.ಆದರೆ, ವಿಶ್ವವಿದ್ಯಾಲಯದ ಅಧಿಕಾರಿ ವರ್ಗ ನೀಡಿದ ಮಾಹಿತಿ ಪ್ರಕಾರ, ಡಿಸೆಂಬರ್‌ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ. 2026ರ ಮೇ-ಜೂನ್‌ ವೇಳೆಗೆ ಪೂರ್ಣಗೊಳ್ಳಬಹುದು ಎನ್ನಲಾಗಿದೆ. ಆದರೆ, ಸರ್ಕಾರ ಕ್ಯಾಂಪಸ್‌ನ ಪೂರ್ಣ ನಿರ್ಮಾಣದವರೆಗೆ ಕಾಯದೆ ಕಾಮಗಾರಿ ಮುಗಿದ ಕಟ್ಟಡಗಳಿಗೆ ಹಂತ ಹಂತವಾಗಿ ಕ್ಯಾಂಪಸ್‌ ಸ್ಥಳಾಂತರಿಸುವ ಲೆಕ್ಕಾಚಾರದಲ್ಲಿ ಸರ್ಕಾರವಿದೆ.

1200 ಸಂಯೋಜಿತ ಕಾಲೇಜು-3.5 ಲಕ್ಷ ವಿದ್ಯಾರ್ಥಿಗಳು:

ಆರ್‌ಜಿಯುಎಚ್‌ಎಸ್‌ ಅನ್ನು ರಾಜ್ಯದಲ್ಲೇ ಅತಿ ಶ್ರೀಮಂತ ಸಾರ್ವಜನಿಕ ವಿಶ್ವವಿದ್ಯಾಲಯ ಎಂದು ಹೇಳಬಹುದು ಎನ್ನುತ್ತಾರೆ ಶಿಕ್ಷಣ ತಜ್ಞರು. ಏಕೆಂದರೆ, ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ 1200ಕ್ಕೂ ಹೆಚ್ಚು ಸಂಯೋಜಿತ ಕಾಲೇಜುಗಳನ್ನು ಇದು ಹೊಂದಿದ್ದು, ವಿವಿಯ ಕ್ಯಾಂಪಸ್‌ ಹಾಗೂ ಕಾಲೇಜುಗಳಲ್ಲಿ ಒಟ್ಟಾರೆ 3.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ, ನರ್ಸಿಂಗ್‌ ಹೀಗೆ ಅನೇಕ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಕೋರ್ಸುಗಳನ್ನು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಇತರೆ ಸಾರ್ವಜನಿಕ ವಿವಿಗಳಲ್ಲಿರುವಂತೆ ಈ ವಿಶ್ವವಿದ್ಯಾಲಯದಲ್ಲೂ ಕೂಡ ಕಾಯಂ ಬೋಧಕ, ಬೋಧಕೇತರ ಸಿಬ್ಬಂದಿ ಕೊರತೆಯೂ ಇದೆ.

₹1000 ಕೋಟಿ ಮೂಲ ನಿಧಿ

ಪ್ರತೀ ವರ್ಷ ಕಾಲೇಜುಗಳ ಸಂಯೋಜನಾ ಶುಲ್ಕ ಹಾಗೂ ವಿದ್ಯಾರ್ಥಿಗಳ ದಾಖಲಾತಿ ಅನುಮೋದನೆ ಮತ್ತು ಪರೀಕ್ಷಾ ಶುಲ್ಕದಿಂದಲೇ ನೂರಾರು ಕೋಟಿ ರು. ಆದಾಯ ಬರುತ್ತಿದೆ. ಇದರಿಂದ ಪ್ರಸ್ತುತ ವಿವಿಯು ಪ್ರತೀ ವರ್ಷ ಸುಮಾರು 250 ಕೋಟಿ ರು.ಗಳಿಗೂ ಹೆಚ್ಚಿನ ಬಜೆಟ್‌ ಮಂಡನೆ ಮಾಡುತ್ತಿದೆ. ಪ್ರತೀ ವರ್ಷ ತನ್ನ ಖರ್ಚು-ವೆಚ್ಚಗಳನ್ನು ಕಳೆದು ಉಳಿದ ಹಣವನ್ನು ಸೇರಿಸಿ 600 ಕೋಟಿ ರು.ಗಳಷ್ಟು ಅನುದಾನವನ್ನು ಕ್ಯಾಂಪಸ್‌ ನಿರ್ಮಾಣಕ್ಕೆ ನೀಡಿದೆ. ಅಲ್ಲದೆ, ಅನೇಕ ವರ್ಷಗಳಿಂದ ಈ ವಿಶ್ವವಿದ್ಯಾಲಯ ತನ್ನ ನಿವೃತ್ತ ನೌಕರರ ಪಿಂಚಣಿ, ಸಂಶೋಧನಾ ಚಟುವಟಿಕೆ, ವಿದ್ಯಾರ್ಥಿ ವೇತನಕ್ಕಾಗಿ 1000 ಕೋಟಿ ರು.ಗಳಷ್ಟು ಮೂಲ ನಿಧಿ(ಕಾರ್ಪಸ್‌ ಫಂಡ್‌) ಹೊಂದಿದೆ. ಇದರಿಂದ ಠೇವಣಿ ಇಡಲಾಗಿದ್ದು ಬರುವ ಬಡ್ಡಿ ಹಣವನ್ನು ನಿರ್ದಿಷ್ಟ ಕಾರ್ಯಗಳಿಗೆ ಬಳಸುತ್ತಿದೆ.

 ವಿವಿ ಇತಿಹಾಸ 

1994ರಲ್ಲಿ ಎಂ. ವೀರಪ್ಪ ಮೊಯ್ಲಿ ಅವರ ನೇತೃತ್ವದ ಸರ್ಕಾರವಿದ್ದಾಗ ರಾಜ್ಯದಲ್ಲಿ ಆರ್‌ಜಿಯುಎಚ್‌ಎಸ್‌ ಸ್ಥಾಪನೆಗೆ ಅನುಮೋದನೆಗೊಂಡು 1996ರಲ್ಲಿ ಅಧಿಕೃತವಾಗಿ ಆರಂಭವಾಯಿತು. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಆರಂಭವಾದ ಮೂರನೇ ವಿಶ್ವವಿದ್ಯಾಲಯ ಇದಾಗಿದೆ. ಇದಕ್ಕೂ ಮುನ್ನ ಆಂಧ್ರಪ್ರದೇಶದ ಡಾ. ಎನ್‌ಟಿಆರ್‌ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯ ಮತ್ತು ತಮಿಳುನಾಡಿನ ಡಾ.ಎಂಜಿಆರ್‌ ವೈದ್ಯಕೀಯ ವಿಶ್ವವಿದ್ಯಾಲಯ ಆರಂಭಗೊಂಡವು.ಕಟ್ಟಡಕ್ಕೆ ಪೂರ್ಣ ಹಣ ವಿವಿ ಕೊಟ್ಟಿದೆರಾಮನಗರದಲ್ಲಿ ತಲೆ ಎತ್ತುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಮತ್ತು ವೈದ್ಯಕೀಯ ಕಾಲೇಜು ನಿರ್ಮಾಣದ ಕೆಲಸ ಭರದಿಂದ ಸಾಗಿದೆ. ಈಗಾಗಲೇ ಸುಮಾರು 40ರಷ್ಟು ಕೆಲಸ ಪೂರ್ಣಗೊಂಡಿದೆ. ಹಣಕಾಸಿನ ಕೊರತೆ ಇಲ್ಲ, ಸಂಪೂರ್ಣ 600 ಕೋಟಿ ರು.ಗಳನ್ನು ವಿವಿಯೇ ನೀಡಿದೆ. ಕಾಮಗಾರಿಯನ್ನು ಈ ವರ್ಷ ಡಿಸೆಂಬರ್‌ ವೇಳೆಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಪೂರ್ಣಗೊಂಡ ನಂತರ ಕ್ಯಾಂಪಸ್‌ ಸ್ಥಳಾಂತರ ನಡೆಯಲಿದೆ.- ಡಾ.ಶರಣ್ ಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ

ದೇಶಕ್ಕೇ ರಾಜೀವ್‌ ವಿವಿ ಬ್ರಾಂಡ್

ಆರ್‌ಜಿಯುಎಚ್‌ಎಸ್‌ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ದೇಶದಲ್ಲಿ ಬ್ರಾಂಡ್‌ ಆಗಿದೆ. ಕೇವಲ ತರಗತಿ ಬೋಧನೆ, ಪರೀಕ್ಷೆಗಳಿಗೆ ಸೀಮಿತವಾಗಿಲ್ಲ. ವಿವಿ ಹೊಸಹೊಸ ಕೋರ್ಸುಗಳ ಆರಂಭ, ಸಂಶೋಧನಾ ಚಟುವಟಿಕೆಗಳು, ಪಬ್ಲಿಕೇಷನ್‌ಗಳು ಹೊರಬರುತ್ತಿವೆ. ರಾಮನಗರದಲ್ಲಿ ಹೊಸ ಕ್ಯಾಂಪಸ್‌ ಪೂರ್ಣಗೊಂಡರೆ ಈ ಎಲ್ಲಾ ಚಟುವಟಿಕೆಗಳನ್ನು ದ್ವಿಗುಣಗೊಳಿಸಲು ಸಹಾಯವಾಗುತ್ತದೆ.

-- ಡಾ.ಸಚ್ಚಿದಾನಂದ, ಆರ್‌ಜಿಯುಎಚ್‌ಎಸ್‌ ವಿಶ್ರಾಂತ ಕುಲಪತಿ

Share this article