ಹಳಿಯಾಳದಲ್ಲಿ ರಂಜಾನ್ ಆಚರಣೆ

KannadaprabhaNewsNetwork | Published : Apr 12, 2024 1:13 AM

ಸಾರಾಂಶ

ಸಾನ್ನಿಧ್ಯ ವಹಿಸಿದ ಜಾಮೀಯಾ ಮಸೀದಿ ಮೌಲಾನಾ ಮುಪ್ತಿ ಮುಷ್ತಾಕ ಅಹ್ಮದ ಅವರು, ಹಬ್ಬದ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.

ಹಳಿಯಾಳ: ತಾಲೂಕಿನೆಲ್ಲೆಡೆ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಗುರುವಾರ ಪವಿತ್ರ ರಂಜಾನ್ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಪಟ್ಟಣದ ಅರ್ಬನ್ ಬ್ಯಾಂಕ್ ವೃತದಲ್ಲಿನ ಅಂಜುಮನ್ ಸಂಸ್ಥೆಯ ಬಳಿ ಜಮಾಯಿಸಿದ ಸಾವಿರಾರು ಮುಸ್ಲಿಮರು ಧಾರ್ಮಿಕ ಪವಿತ್ರ ಶ್ಲೋಕಗಳ ಪಠಣವನ್ನು ಮಾಡುತ್ತಾ ಮೆರವಣಿಗೆಯಲ್ಲಿ ಈದ್ಗಾ ಮೈದಾನಕ್ಕೆ ಬಂದರು.

ಸಾನ್ನಿಧ್ಯ ವಹಿಸಿದ ಜಾಮೀಯಾ ಮಸೀದಿ ಮೌಲಾನಾ ಮುಪ್ತಿ ಮುಷ್ತಾಕ ಅಹ್ಮದ ಅವರು, ಹಬ್ಬದ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಪ್ರಧಾನ ಗುರು ಮುಪ್ತಿ ಫಯಾಜ್ ಅಹಮದ್ ಇಟ್ಟಂಗಿವಾಲೆ ರಂಜಾನ್ ಹಬ್ಬದ ಆಶೀರ್ವಚನ ನೀಡಿದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು ರಂಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಸರ್ವರಿಗೂ ಶುಭಾಶಯ ಕೋರಿದರು. ಕಾಂಗ್ರೆಸ್ ಪ್ರಮುಖರಾದ ಸತ್ಯಜಿತ ಗಿರಿ, ಉಮೇಶ ಬೊಳಶೆಟ್ಟಿ ಮೊದಲಾದವರು ಆಗಮಿಸಿದ್ದರು.

ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಅಲಿಂ ಬಸರಿಕಟ್ಟಿ, ವಕ್ಫ್‌ ಸಮಿತಿ ಜಿಲ್ಲಾಧ್ಯಕ್ಷ ಮಹಮದಖಯ್ಯಾಂ ಮುಗದ, ಪುರಸಭಾ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಉದ್ಯಮಿ ಆರ್.ಎಂ. ಬಸರಿಕಟ್ಟಿ, ಪುರಸಭಾ ಸದಸ್ಯ ಫಯಾಜ್ ಶೇಖ್, ಪ್ರಮುಖರಾದ ರಿಜ್ವಾನ್ ಕಿಲ್ಲೆದಾರ, ಎಲ್.ಎಸ್. ದಲಾಲ, ಯೂಸುಪ ಜಂಗೂಬಾಯಿ, ಅಬ್ದುಲ್‌ ಸಲಿಂ ದಲಾಲ, ಇಮ್ತಿಯಾಜ್ ಶೇಖ್, ಎಂ.ಎ. ಕಾಗದ, ಸುಭಾನಿ ಗೋರಿಖಾನ, ಸರಪರಾಜ್ ಬೇಪಾರಿ, ರಹೀಸ ಕೊಠೊರ ಇನ್ನೂ ಹಲವು ಪ್ರಮುಖರು ಇದ್ದರು.

ಬಿಸಿಲಿನ ತಾಪ:ಈ ಬಾರಿ ಹಿಂದೆಂದಿಗಿಂತಲೂ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಹಬ್ಬದ ಸಾಮೂಹಿಕ ಪ್ರಾರ್ಥನೆಗೆ ಅನುಕೂಲ ಒದಗಿಸಲು ಇಡೀ ಈದ್ಗಾ ಮೈದಾನಕ್ಕೆ ಶಾಮಿಯಾನ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಹಿರಿಯ ನಾಗರಿಕರಿಗಾಗಿ ಕುಳಿತುಕೊಳ್ಳಲು ಆಸನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಗ್ರಾಮೀಣ ಭಾಗದಲ್ಲಿಯೂ ರಂಜಾನ್: ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಜೋಗನಕೊಪ್ಪ, ತಟ್ಟಿಗೇರಾ, ಅಡಕೆಹೊಸೂರ, ಕಾವಲವಾಡ, ತೇರಗಾಂವ, ಭಾಗವತಿ, ಗೋಲೆಹಳ್ಳಿ, ಮುರ್ಕವಾಡ, ಅಮ್ಮನಕೊಪ್ಪ, ತತ್ವಣಗಿ, ಜಾವಳ್ಳಿ, ತಿಮ್ಮಾಪುರ ಮೊದಲಾದೆಡೆ ರಂಜಾನ್ ಆಚರಣೆ ನಡೆಯಿತು.

ಸಹಬಾಳ್ವೆಯೇ ರಂಜಾನ್‌ ಹಬ್ಬದ ಆಶಯ

ಸಿದ್ದಾಪುರ: ಪ್ರತಿವರ್ಷದಂತೆ ಈ ವರ್ಷವೂ ಪಟ್ಟಣದ ಮುಸ್ಲಿಮರು ಈದುಲ್ ಫಿತ್ರ್‌(ರಂಜಾನ್‌) ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.

ಕಡುಬಿಸಿಲಿನ ತಾಪದಲ್ಲೂ ಒಂದು ತಿಂಗಳ ಕಠಿಣ ಉಪವಾಸ ಆಚರಿಸಿದ ಮುಸ್ಲಿಮರು ಏ. ೧೧ರ ಬೆಳಗ್ಗೆ ಮಸೀದಿಯಿಂದ ಹೊರಟು ಈದ್ಗಾಕ್ಕೆ ತೆರಳಿ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಧಾರ್ಮಿಕ ಪ್ರವಚನ ನೀಡಿದ ಮಸೀದಿಯ ಪ್ರಧಾನ ಗುರುಗಳಾದ ಮೌಲಾನಾ ಮೆಹಮೂದ ರಝಾ, ಪರಸ್ಪರರಲ್ಲಿ ಭಾತೃತ್ವ, ಸಹಬಾಳ್ವೆ ರಂಜಾನ್ ಹಬ್ಬದ ಆಶಯವಾಗಿದ್ದು, ನಮ್ಮಲ್ಲಿನ ವೈಷಮ್ಯ, ವೈಮನಸ್ಸನ್ನು ತೊಡೆದುಹಾಕಿ ಸಹೋದರತ್ವ, ಮಾನವೀಯ ಮಾಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.ಸಿದ್ದಾಪುರ ಬದ್ರಿಯಾ ಜಾಮೀಯಾ ಮಸೀದಿ ಅಧ್ಯಕ್ಷ ಅಬ್ದುಲ್ ಮುನಾಪ್ ಹಬ್ಬದ ಶುಭಾಶಯ ಕೋರಿದರು. ಕಮಿಟಿಯ ಕಾರ್ಯದರ್ಶಿ ಇಸ್ಮಾಯಿಲ್ ಖಾನ್, ಕಮಿಟಿಯ ಪದಾಧಿಕಾರಿಗಳು, ಸಮಾಜದ ಪ್ರಮುಖರಾದ ಮುನ್ವರ್ ಗುರ್ಖಾರ್, ಕಾದರ ಬಾಷಾ, ರಿಯಾಜ್ ಸಾಬ್, ಬಿ.ಎ. ಸಾಬ್ ಮುಂತಾದವರು ಇದ್ದರು.

Share this article