ಕನ್ನಡಪ್ರಭ ವಾರ್ತೆ ಪುತ್ತೂರು
ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಡಾ. ರಾಮಕೃಷ್ಣ ಆಚಾರ್ ಪ್ರಾಥಮಿಕ ಶಾಲೆಯ ಒಬ್ಬ ಅಧ್ಯಾಪಕನಾಗಿ ಸ್ವ ಪ್ರಯತ್ನದಿಂದಲೇ ಕಲಿಯುವುದು, ಕಲಿಸುವುದು ಮತ್ತು ಸಂಘಟಿಸುವ ಪ್ರಯತ್ನ ಮಾಡಿದರು. ಅವರು ಎಲ್ಲೆಲ್ಲ ಇದ್ದರೋ ಅಲ್ಲೆಲ್ಲ ಸಂಘಟನೆ ಬೆಳೆದಿದೆ. ಶಿಕ್ಷಣದಲ್ಲಿ ತುಳುವಿಗೆ ಮಾನ್ಯತೆ ನೀಡುವ ಬಹಳ ಅದ್ಭುತವಾದ ಕೆಲಸವನ್ನು ಅವರು ಮಾಡಿದ್ದಾರೆ ಎಂದು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಬಿ.ಎ. ವಿವೇಕ್ ರೈ ಹೇಳಿದ್ದಾರೆ.ಪುತ್ತೂರಿನ ಸುಕೃತೀಂದ್ರ ಕಲಾ ಮಂಟಪದಲ್ಲಿ ಭಾನುವಾರ ನಡೆದ, ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರೂ ಆಗಿದ್ದ ನಿವೃತ್ತ ಉಪನ್ಯಾಸಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ, ಮುಖ್ಯೋಪಾಧ್ಯಾಯರಾಗಿ, ಉಪನ್ಯಾಸಕರಾಗಿ, ತನ್ನ ನಿವೃತ್ತಿಯ ತನಕ ಅಭ್ಯಾಸ ಮಾಡುತ್ತಾ ಬಂದಿರುವ ಅವರು ಬದುಕಿನಲ್ಲಿ ವಿಶ್ರಾಂತಿ ಪಡೆದಿರಲಿಲ್ಲ ಎಂದರು.೨೦೧೦ರಲ್ಲಿ ತನ್ನ ಅನಾರೋಗ್ಯದ ಕಾರಣದಿಂದ ಕಾಲನ್ನು ಕಳೆದರೂ ಕೂಡಾ ೧೪ ವರ್ಷಗಳ ಕಾಲ ನಿರಂತರ ಕೆಲಸ ಮಾಡುತ್ತಾ ಬಂದರು. ಅವರ ಮಹತ್ವದ ಕೃತಿಗಳು ಬಂದದ್ದೇ ೨೦೧೦ರ ಬಳಿಕ ಎಂದ ಡಾ. ವಿವೇಕ್ ರೈ ಅವರು ೧೯೭೫, ೭೬ನೇ ಕಾಲಕ್ಕೆ ಬಂದ ತುಳು ಜನಪದ ಕಥೆಗಳು. ಕನ್ನಡ ಅನುದಾದಕ್ಕೆ ನಾನೆ ಮುನ್ನುಡಿ ಬರೆದಿದ್ದೆ. ಅವರ ೧೮೩೭ರ ತುಳುವರ ರೈತ ಹೋರಾಟ ಕನ್ನಡದಲ್ಲಿ ಮೊದಲು ಬಂತು. ಬಳಿಕ ಅದು ಬೇರೆ ಬಾಷೆ ತರ್ಜುಮೆಯಾಯಿತು. ಹೀಗೆ ೧೪ ವರ್ಷಗಳ ಕಾಲ ಅವರ ಸ್ಥಿತಿಯಲ್ಲಿದ್ದವರು ಬೇರೆ ಯಾರೆ ಆದರೂ ಹಾಸಿಗೆಯಿಂದ ಏಳುತ್ತಿರಲಿಲ್ಲ. ಆದರೆ ಪಾಲ್ತಾಡಿಯವರಿಂದ ೧೫ಕ್ಕೂ ಹೆಚ್ಚು ಪುಸ್ತಕ ೨೦೧೦ ರ ಬಳಿಕ ಪ್ರಕಟವಾಗಿತ್ತು ಎಂದು ನೆನಪಿಸಿಕೊಂಡರು.
ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ನಿವೃತ್ತ ಉಪ ಕುಲಪತಿ ಡಾ.ಚಿನ್ನಪ್ಪ ಗೌಡ ಮಾತನಾಡಿ, ಪ್ರಸ್ತುತ ತುಳುವಿನ ಅಧ್ಯಯನಕ್ಕೆ ಪಾಲ್ತಾಡಿ ಅವರು ಉತ್ತಮ ತಳಹದಿ ಹಾಕಿ ಕೊಟ್ಟಿದ್ದಾರೆ. ಮುಂದಿನ ೫೦ ವರ್ಷಗಳು ಕಳೆದರೂ ಅವರ ಗ್ರಂಥ, ಮಾಹಿತಿ ಕೊಡುಗೆಗಳ ಮೌಲ್ಯ ಕಡಿಮೆಯಾಗಲಾರದು. ಅಕಾಡೆಮಿ ಇರುವುದು ಪ್ರಶಸ್ತಿಗಳನ್ನು ಹಂಚುವುದಕ್ಕಲ್ಲ. ಪ್ರಶಸ್ತಿ ಪಡೆಯಲು ಅರ್ಹರಾದವರನ್ನು ಅಕಾಡೆಮಿ ಸೃಷ್ಟಿ ಮಾಡಬೇಕು ಎಂದು ಡಾ. ಪಾಲ್ತಾಡಿ ತಿಳಿಸಿಕೊಟ್ಟಿದ್ದರು ಎಂದು ಹೇಳಿದರು.ಉಪನ್ಯಾಸಕ ಡಾ. ನರೇಂದ್ರ ರೈ ದೇರ್ಲ ಅವರು ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಕುರಿತು ಬರೆದ ವಿಚಾರಧಾರೆ ಪುಸ್ತಕ ಪರಿಚಯ ಮಾಡಿದರು. ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ರಚಿತ ಹಲವು ತುಳು ಜನಪದ ಗೀತೆಗಳನ್ನು ಹಾಡಲಾಯಿತು. ಕೆ. ಆರ್. ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.
ಪ್ರಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.