ಕನ್ನಡಪ್ರಭ ವಾರ್ತೆ ಮಂಗಳೂರು
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯ ಎಂಟನೇ ತಿಂಗಳ ಸ್ವಚ್ಛತಾ ಅಭಿಯಾನ ಭಾನುವಾರ ಬೆಳಗ್ಗೆ ಎಕ್ಕೂರು ಪರಿಸರದಲ್ಲಿ ನಡೆಯಿತು.ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಸಾನಿಧ್ಯದಲ್ಲಿ ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಗುರುಸಿದ್ಧಯ್ಯ ಹಾಗೂ ನಿಟ್ಟೆ ಫಿಸಿಯೋಥೆರಪಿ ಪ್ರಾಧ್ಯಾಪಕ ಡಾ. ಜಯೇಶ್ ಅಭಿಯಾನಕ್ಕೆ ಚಾಲನೆ ನೀಡಿದರು.
ಬಸ್ ತಂಗುದಾಣಕ್ಕೆ ಜೀವಕಳೆ:ಎಕ್ಕೂರಿನಲ್ಲಿ 2019ರಲ್ಲಿ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ನಿರ್ಮಿಸಲಾಗಿದ್ದ ಬಸ್ ತಂಗುದಾಣ ಶಿಥಿಲಾವಸ್ಥೆಗೆ ತಲುಪಿತ್ತು. ರಾಮಕೃಷ್ಣ ಮಿಷನ್ ಸ್ವಯಂ ಸೇವಕರ ತಂಡವು ಇದಕ್ಕೆ ಮರುಜೀವ ತುಂಬಲು ನಿರ್ಧರಿಸಿ ನೂತನ ಫ್ಲೆಕ್ಸ್‌ಗಳನ್ನು ಅಳವಡಿಸಿ ನೆಲಕ್ಕೆ ಸಿಮೆಂಟ್ ಹಾಕಿ ವ್ಯವಸ್ಥಿತಗೊಳಿಸಲಾಯಿತು. ಮುಂದಿನ ವಾರ ಇದಕ್ಕೆ ಪೇಂಟಿಂಗ್ ಮಾಡಿ ನಂತರ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ.
ಹಿರಿಯ ಸ್ವಯಂ ಸೇವಕರಾದ ವಿಠಲದಾಸ್ ಪ್ರಭು, ದಿಲ್‌ರಾಜ್ ಆಳ್ವ, ತಾರಾನಾಥ್ ಆಳ್ವ, ಶಿವರಾಂ, ಅವಿನಾಶ್ ಅಂಚನ್, ಸುನಂದಾ ಶಿವರಾಂ, ಮುಕೇಶ್ ಆಳ್ವ ಹಾಗೂ ಸಜಿತ್ ಕೆ. ನೇತೃತ್ವದಲ್ಲಿ ಎಸ್.ಡಿ.ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ. ಶೈನಿ ಮಾರ್ಗದರ್ಶನದಲ್ಲಿ ಎಸ್.ಡಿ.ಎಂ. ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿದ್ದ ಪ್ಲಾಸ್ಟಿಕ್, ಬಾಟಲಿಗಳು ಇತ್ಯಾದಿ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.ಸ್ವಯಂಸೇವಕರಾದ ಉದಯ್ ಕೆ.ಪಿ., ರಾಜೇಶ್, ವಿಜೇಶ್ ದೇವಾಡಿಗ, ಸಚಿನ್ ಶೆಟ್ಟಿ ನಲ್ಲೂರು ನೇತೃತ್ವದಲ್ಲಿ ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯದ ಆಡಳಿತಾಧಿಕಾರಿ ಸ್ಮಿತಾ ಶೆಣೈ, ಪ್ರಾಧ್ಯಾಪಕ ಡಾ. ಗುರುಸಿದ್ಧಯ್ಯ ಹಾಗೂ ಬಬಿತಾ ಮಾರ್ಗದರ್ಶನದಲ್ಲಿ ಸಹ್ಯಾದ್ರಿ ಸಂಸ್ಥೆಯ ವಿದ್ಯಾರ್ಥಿಗಳ ತಂಡವು ಆಟೋ ನಿಲ್ದಾಣದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ನಿಟ್ಟೆ ಫಿಸಿಯೋಥೆರಪಿ ಪ್ರಾಧ್ಯಾಪಕ ಡಾ. ಜಯೇಶ್ ನೇತೃತ್ವದ ವಿದ್ಯಾರ್ಥಿಗಳ ತಂಡ ರಾಷ್ಟ್ರೀಯ ಹೆದ್ದಾರಿ ವಿಭಜಕದಲ್ಲಿದ್ದ ಕಸ ತೆರವುಗೊಳಿಸಿದರು.ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ವೀಣಾ ಮಂಗಳ, ಪ್ರಮುಖರಾದ ಡಾ. ಸತೀಶ್ ರಾವ್, ಡಾ. ಕೃಷ್ಣ ಶರಣ್, ಬಾಲಕೃಷ್ಣ ಭಟ್, ಬಬಿತಾ ಶೆಟ್ಟಿ ಮತ್ತು ರಂಜನ್ ಬೆಳ್ಳರ್ಪ್ಪಾಡಿ ಇದ್ದರು.