-ನ್ಯಾಯಕ್ಕೆ ಜಯ -ಲಾಟರಿಯಲ್ಲಿ ಪರಾಭವಗೊಂಡಿದ್ದರು ಎನ್ನಲಾದ ಅಭ್ಯರ್ಥಿಯನ್ನೇ ವಿಜೇತ ಎಂದು ನ್ಯಾಯಾಲಯ ಆದೇಶ
ಕನ್ನಡಪ್ರಭ ವಾರ್ತೆ ರಾಮನಗರತಾಲೂಕಿನ ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಕಳೆದ ವರ್ಷ ನಡೆದಿದ್ದ ಚುನಾವಣೆ ಫಲಿತಾಂಶವನ್ನು ಅಸಿಂಧುಗೊಳಿಸಿ, ಲಾಟರಿಯಲ್ಲಿ ಪರಾಭವಗೊಂಡಿದ್ದರು ಎನ್ನಲಾದ ಅಭ್ಯರ್ಥಿಯನ್ನೇ ವಿಜೇತ ಎಂದು ಘೋಷಿಸಿ ನ್ಯಾಯಾಲಯ ಆದೇಶ ಹೊರಡಿಸಿದ್ದು, ಜೆಡಿಎಸ್ ಬೆಂಬಲಿತ ಸುನೀತಾ ನಾಗರಾಜ್‌ಸಿಂಗ್ ಗ್ರಾಪಂ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಒಟ್ಟು 19 ಸದಸ್ಯ ಬಲ ಹೊಂದಿರುವ ಗ್ರಾಪಂನಲ್ಲಿ ಜೆಡಿಎಸ್ ಬೆಂಬಲಿತ 10 ಹಾಗೂ ಕಾಂಗ್ರೆಸ್ ಬೆಂಬಲಿತ 09 ಸದಸ್ಯರು ಆಯ್ಕೆಯಾಗಿದ್ದರು. ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಬಿಸಿಎಂ-ಎ ವರ್ಗಕ್ಕೆ ಮೀಸಲಾಗಿತ್ತು. ಚುನಾವಣೆಗೂ ಮುನ್ನ ಜೆಡಿಎಸ್ ಬೆಂಬಲಿತ ಇಬ್ಬರು ಸದಸ್ಯರನ್ನು ಕಾಂಗ್ರೆಸ್ ಮುಖಂಡರು ತಮ್ಮತ್ತ ಸೆಳೆದುಕೊಂಡಿದ್ದರು.2023ರ ಆಗಸ್ಟ್ 11ರಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿತರಾಗಿ ಕಾಂಗ್ರೆಸ್‌ನ ರಂಗಸ್ವಾಮಿ ಹಾಗೂ ಜೆಡಿಎಸ್‌ನ ಸುನೀತಾನಾಗರಾಜ್‌ಸಿಂಗ್ ನಾಮಪತ್ರ ಸಲ್ಲಿಸಿ ಅಂತಿಮ ಕಣದಲ್ಲಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಒಟ್ಟು 19 ಮತಗಳು ಚಲಾವಣೆಗೊಂಡಿದ್ದವು. ಇಬ್ಬರೂ ಅಭ್ಯರ್ಥಿಗಳು ತಲಾ 9 ಮತಗಳನ್ನು ಪಡೆದರೆ, ಒಂದು ಮತ ಅಸಿಂಧು ಎಂದು ತೀರ್ಮಾನಿಸಲಾಯಿತು. ಆದರೆ, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸುನೀತಾ ಎರಡು ಮತಗಳನ್ನು ಅಸಿಂಧುಗೊಳಿಸಬೇಕು. 9 ಮತಗಳನ್ನು ಪಡೆದಿರುವ ನನ್ನನ್ನೇ ವಿಜಯಿ ಎಂದು ಘೋಷಿಸುವಂತೆ ಪಟ್ಟು ಹಿಡಿದರು. ಆದರೆ, ಒಂದು ಮತವನ್ನು ಮಾತ್ರವೇ ಅಸಿಂಧು ಎಂದು ಚುನಾವಣಾಧಿಕಾರಿಗಳು ಪರಿಗಣಿಸಿದ್ದರು. ವಿಜೇತರ ಆಯ್ಕೆಗೆ ಲಾಟರಿ ಮೊರೆ ಹೋದಾಗ ಅದೃಷ್ಟ ಕಾಂಗ್ರೆಸ್‌ನ ರಂಗಸ್ವಾಮಿಗೆ ಒಲಿಯಿತು.
ಸುನೀತಾ ಅವರು ಚುನಾವಣಾಧಿಕಾರಿಗಳ ನಿರ್ಣಯವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದರು. ಸುದೀರ್ಘ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಲೋಕೇಶ್ ಅವರು ಎರಡು ಮತಗಳನ್ನು ಅಸಿಂಧುಗೊಳಿಸಿ, ಲಾಟರಿಯಲ್ಲಿ ಪರಾಭವಗೊಂಡಿದ್ದ ಸುನೀತಾ ವಿಜೇತ ಅಭ್ಯರ್ಥಿ ಎಂದು ಆದೇಶ ಹೊರಡಿಸಿದ್ದಾರೆ.ಆದೇಶದ ಪ್ರತಿಯೊಂದಿಗೆ ಗ್ರಾಪಂ ಕಾರ್ಯಾಲಯಕ್ಕೆ ಆಗಮಿಸಿದ ಸುನೀತಾ ಅಧ್ಯಕ್ಷ ಸ್ಥಾನದ ಕಾರ್ಯಭಾರ ವಹಿಸಿಕೊಂಡರು. ನೂತನ ಅಧ್ಯಕ್ಷರನ್ನು ಗ್ರಾಪಂ ಸದಸ್ಯರು ಹಾಗೂ ಜೆಡಿಎಸ್ ಮುಖಂಡರು ಅಭಿನಂದಿಸಿದರು.
ಸುನೀತಾ ಮಾತನಾಡಿ, ಅಂದಿನ ಚುನಾವಣೆಯಲ್ಲೇ ನಾನು ಗೆದ್ದಿದ್ದರೂ ನನಗೆ ಅನ್ಯಾಯವಾಗಿತ್ತು, ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದೆ. ನ್ಯಾಯಾಲಯ ನನಗಿಂದು ನ್ಯಾಯ ನೀಡಿದೆ. ಇದು ಸತ್ಯಕ್ಕೆ ಸಂದ ಜಯ ಮುಂದೆ ಪ್ರಾಮಾಣಿಕವಾಗಿ ಗ್ರಾಪಂ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ.ರಾಜು, ಗ್ರಾಪಂ ಉಪಾಧ್ಯಕ್ಷೆ ಮಂಗಳಗೌರಮ್ಮ, ಸದಸ್ಯರಾದ ಭಾಸ್ಕರ್, ಮಹದೇಶಸ್ವಾಮಿ, ಯಡೂರಯ್ಯ ಜೆಡಿಎಸ್ ಮುಖಂಡರುಗಳಾದ ಸಬ್ಬಕೆರೆ ಶಿವಲಿಂಗಪ್ಪ, ಚಿಕ್ಕೇನಹಳ್ಳಿ ಪಾರ್ಥಣ್ಣ, ದೇವರದೊಡ್ಡಿ ಚಂದ್ರಗಿರಿ, ಕುಂಭಾಪುರ ಸಿದ್ದಪ್ಪ, ಅಂಜನಾಪುರ ರೇವಣ್ಣ, ವಾಸು, ಚನ್ನಮಾನಹಳ್ಳಿ ಅಪ್ಪಾಜಣ್ಣ, ಗಿರಿಸ್ವಾಮಿ, ಶ್ರೀನಿವಾಸಮೂರ್ತಿ, ಇಟ್ಟಿಗೆ ಪ್ಯಾಕ್ಟರಿ ನಾಗರಾಜು, ಮಂಜುನಾಥ್, ಕಿರಣ್, ರವಿ, ಗೂಳಿಗೌಡ, ರಾಮಕೃಷ್ಣಯ್ಯ, ಬೋರೇಗೌಡ, ಕುಮಾರ್ ಹಾಜರಿದ್ದರು.ನ್ಯಾಯಕ್ಕೆ ಸಂದ ಜಯ
19 ಸದಸ್ಯ ಬಲ ಹೊಂದಿರುವ ಗ್ರಾಪಂ ಮೊದಲ ಅವಧಿಯಲ್ಲಿ ಜೆಡಿಎಸ್ ಕೈಯಲ್ಲಿತ್ತು. ಆಗ ಕಾಂಗ್ರೆಸ್ ನಾಯಕರು ಗ್ರಾಪಂ ಕೈವಶ ಮಾಡಿಕೊಳ್ಳಲು ಜೆಡಿಎಸ್‌ನ ಇಬ್ಬರು ಸದಸ್ಯರನ್ನು ತಮ್ಮತ್ತ ಸೆಳೆದುಕೊಂಡಿದ್ದರು.ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಮಾಡಬಹುದೆಂಬ ಅನುಮಾನದಿಂದ ಒಬ್ಬೊಬ್ಬ ಸದಸ್ಯರೂ ಬೇರೆ ಬೇರೆ ರೀತಿ ಗುರುತು ಹಾಕಬೇಕೆಂದು ನಿರ್ದೇಶಿಸಲಾಗಿತ್ತು. ಅದರಂತೆ ಒಬ್ಬ ಸದಸ್ಯರು ಕಾಂಗ್ರೆಸ್ ಬೆಂಬಲಿತ ರಂಗಸ್ವಾಮಿ ಪರ ಐದು ಬಾರಿ ಗುರುತು ಹಾಕುವ ಜತೆಗೆ ಹೆಬ್ಬೆಟ್ಟಿನ ಗುರುತನ್ನೂ ಹಾಕಿದ್ದರು.
ಎಣಿಕೆ ಸಂದರ್ಭದಲ್ಲಿ ಹೆಬ್ಬೆಟ್ಟಿನ ಗುರುತಿದ್ದ ಕಾರಣ ಆ ಮತ ಅಸಿಂಧುಗೊಳಿಸಬೇಕು ಎಂದು ಜೆಡಿಎಸ್‌ನ ಸುನೀತಾ ವಾದಿಸಿದ್ದರಾದರೂ, ಒತ್ತಡಕ್ಕೆ ಮಣಿದಿದ್ದ ಚುನಾವಣಾಧಿಕಾರಿಗಳು ಆ ಮತವನ್ನು ಸಿಂಧು ಎಂದು ಪರಿಗಣಿಸಿದ್ದರು. ಆದರೆ, ನ್ಯಾಯಾಲಯ ಆ ಮತವನ್ನು ಅಸಿಂಧು ಎಂದು ತೀರ್ಮಾನಿಸಿ, ಸುನೀತಾ 9 ಹಾಗೂ ರಂಗಸ್ವಾಮಿ 8 ಮತಗಳನ್ನು ಪಡೆದಂತಾಗಿದೆ.