ಆದರ್ಶ ಬದುಕಿಗೆ ರಾಮಾಯಣ ಅತ್ಯಂತ ಸೂಕ್ತ ಗ್ರಂಥ: ಶಾಸಕ ವಿಜಯೇಂದ್ರ

KannadaprabhaNewsNetwork | Published : Oct 29, 2023 1:01 AM

ಸಾರಾಂಶ

ತಾ.ಪಂ. ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತ ಆಯೋಜಿಸಿದ್ದ ವಾಲ್ಮೀಕಿ ಜಯಂತಿ
ಕನ್ನಡಪ್ರಭ ವಾರ್ತೆ, ಶಿಕಾರಿಪುರ ಸರ್ವ ಸಮುದಾಯದ ಜನತೆಗೆ ಸಂಸ್ಕಾರ ಸಂಸ್ಕೃತಿ ಮೂಲಕ ಆದರ್ಶ ಬದುಕು ಕಟ್ಟಿಕೊಳ್ಳುವ ದಿಸೆಯಲ್ಲಿ ಮಹಾನ್ ಗ್ರಂಥ ರಾಮಾಯಣ ಅತ್ಯಂತ ಸೂಕ್ತವಾಗಿದೆ. ರಾಮಾಯಣವನ್ನು ರಚಿಸಿದ ವಾಲ್ಮೀಕಿ ಮಹರ್ಷಿ ಜಾತಿ, ಧರ್ಮ ಮೀರಿದ ಮಹಾನ್ ದಾರ್ಶನಿಕರಾಗಿದ್ದಾರೆ ಎಂದು ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು. ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಮಾಯಣ ಬರೆಯುವ ಮೂಲಕ ಇಡೀ ಸಮಾಜಕ್ಕೆ ಆದರ್ಶವಾದ ಬದುಕು ಹೇಗಿರಬೇಕು, ಪರಸ್ಪರ ಮನುಷ್ಯರಲ್ಲಿನ ಸಂಬಂಧ ಹೇಗಿರಬೇಕು ಎನ್ನುವುದನ್ನು ವಾಲ್ಮೀಕಿ ಮಹರ್ಷಿಗಳು ಗ್ರಂಥದಲ್ಲಿ ತಿಳಿಸಿದ್ದಾರೆ ಎಂದರು. ನಾವು ಯಾವ ಜಾತಿಯಲ್ಲಿ ಜನಿಸಿದ್ದೇವೆ ಎನ್ನುವ ಕೀಳರಿಮೆ ಯಾರೂ ಇಟ್ಟುಕೊಳ್ಳಬಾರದು. ಬದಲಿಗೆ ಶಿಕ್ಷಣ, ಸಂಸ್ಕಾರ ಪಡೆಯುವುದಕ್ಕೆ ಆದ್ಯತೆ ನೀಡಿದರೆ ಸಮಾಜಕ್ಕೆ ಆದರ್ಶವಾಗಿ ಬದುಕಬಹುದು. ಎಲ್ಲ ಜಾತಿ- ಧರ್ಮಕ್ಕೆ ವಾಲ್ಮೀಕಿ ಮಹರ್ಷಿಗಳ ತತ್ವ-ಆದರ್ಶ ತಲುಪಿಸುವ ಮೂಲಕ ಸದೃಢ ಸಮಾಜ ನಿರ್ಮಾಣದ ಬಹುಮಹತ್ವದ ಉದ್ದೇಶದಿಂದ ಸರ್ಕಾರ ವಾಲ್ಮೀಕಿ ಜಯಂತಿ ಆಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿಸಲಾಗಿದೆ. ಆದ್ದರಿಂದ ವಾಲ್ಮೀಕಿ ಜಯಂತಿ ಅರ್ಥಪೂರ್ಣ ಆಚರಣೆ ಆಗಬೇಕು ಎಂದು ಹೇಳಿದರು. ತಾಲೂಕು ವಾಲ್ಮೀಕಿ ಸಮಾಜ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಆಚರಣೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಎರಡು ವಾಲ್ಮೀಕಿ ಭವನ ನಿರ್ಮಿಸಿದ್ದಲ್ಲದೇ, ರಾಜ್ಯದ ಎಲ್ಲ ತಾಲೂಕಿನಲ್ಲೂ ಭವನ ನಿರ್ಮಿಸಿ, ವಾಲ್ಮೀಕಿ ಸಮಾಜದ ಮಠದ ಅಭಿವೃದ್ಧಿಗೆ ಕೋಟ್ಯಂತರ ರು. ಅನುದಾನ ನೀಡಿದ ಯಡಿಯೂರಪ್ಪನವರು ಎಲ್ಲ ರಾಜಕಾರಣಿಗಳಿಗೆ ಆದರ್ಶರಾಗಿದ್ದಾರೆ. ವಾಲ್ಮೀಕಿ ಸಮಾಜದ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕೆ ಆದ್ಯತೆ ನೀಡಬೇಕು ಎಂದರು. ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಭರತ್, ತಾ.ಪಂ. ಇಒ ಪರಮೇಶ್, ಪುರಸಭೆ ಸದಸ್ಯರಾದ ರಮೇಶ್ ಗುಂಡ, ಭದ್ರಾಪುರ ಪಾಲಾಕ್ಷಪ್ಪ, ಮುಖಂಡ ಎಚ್.ಟಿ. ಬಳಿಗಾರ್, ಹುಚ್ರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು. - - - -28ಕೆ.ಎಸ್.ಕೆ.ಪಿ1: ಶಿಕಾರಿಪುರದಲ್ಲಿ ಶನಿವಾರ ತಾಲೂಕು ಆಡಳಿತ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಿ.ವೈ. ವಿಜಯೇಂದ್ರ ಅವರನ್ನು ಸನ್ಮಾನಿಸಲಾಯಿತು.

Share this article