ಶಿವರಾತ್ರಿ ದಿನ ರಾಮೇಶ್ವರ ಕೆಫೆ ಪನಾರಂಭಕ್ಕೆ ಭರದಿಂದ ಸಿದ್ಧತೆ

KannadaprabhaNewsNetwork |  
Published : Mar 07, 2024, 01:46 AM ISTUpdated : Mar 07, 2024, 03:12 PM IST
Remeshwaram Cafe 1 | Kannada Prabha

ಸಾರಾಂಶ

ಬಾಂಬ್‌ ಸ್ಫೋಟದಿಂದ ಹಾನಿಗೆ ಒಳಗಾಗಿದ್ದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ದುರಸ್ತಿ ಆರಂಭವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಾಂಬ್‌ ಸ್ಫೋಟದಿಂದ ಹಾನಿಯಾಗಿರುವ ಕುಂದಲಹಳ್ಳಿಯ ‘ದಿ ರಾಮೇಶ್ವರಂ ಕೆಫೆ’ ದುರಸ್ತಿ ಕಾರ್ಯ ಭರದಿಂದ ಸಾಗಿದ್ದು, ಶಿವರಾತ್ರಿ ಹಬ್ಬದ ದಿನ ಪುನಾರಂಭವಾಗುವ ಸಾಧ್ಯತೆಯಿದೆ.

ಮಾ.1ರಂದು ಮಧ್ಯಾಹ್ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟವಾಗಿ ಹೋಟೆಲ್‌ನ ಸಿಬ್ಬಂದಿ ಸೇರಿದಂತೆ 10 ಮಂದಿ ಗಾಯಗೊಂಡಿದ್ದರು. ಸ್ಫೋಟದ ಬೆನ್ನಲ್ಲೇ ಇಡೀ ಹೋಟೆಲ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಸಿಬ್ಬಂದಿ ಹಾಗೂ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿದ್ದರು. 

ತನಿಖಾ ತಂಡಗಳ ಜತೆಗೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಘಟನಾ ಸ್ಥಳದಲ್ಲಿ ಬಿದ್ದಿದ್ದ ಸ್ಫೋಟದ ವಸ್ತುಗಳ ಮಾದರಿಯನ್ನು ಸಂಗ್ರಹಿಸಿದ್ದರು. ಬಾಂಬ್‌ ಸ್ಫೋಟದ ವೇಳೆ ಗಾಜು, ಪೀಠೋಪಕರಣಗಳು, ಮೇಲ್ಛಾವಣಿ ಸೇರಿದಂತೆ ಸಾಕಷ್ಟು ಹಾನಿಯಾಗಿತ್ತು. 

ತನಿಖೆ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು, ಸಿಸಿಬಿ ಪೊಲೀಸರು, ಎನ್‌ಐಎ ಅಧಿಕಾರಿಗಳು, ಎನ್‌ಎಸ್‌ಜಿ ಅಧಿಕಾರಿಗಳು ಸೇರಿದಂತೆ ನೆರೆಯ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಘಟನಾ ಸ್ಥಳವನ್ನು ಪರಿಶೀಲಿಸಿದ್ದರು.

ಘಟನಾ ಸ್ಥಳದ ತನಿಖೆ ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು, ಹೋಟೆಲ್‌ ಪುನರಾರಂಭಿಸಲು ಮಾಲೀಕರಿಗೆ ಅನುಮತಿ ನೀಡಿದ್ದಾರೆ.

ಇದರ ಬೆನ್ನಲ್ಲೇ ಬಾಂಬ್‌ ಸ್ಫೋಟದಿಂದ ಹಾನಿಗೊಳಗಾಗಿದ್ದ ಹೋಟೆಲ್‌ ದುರಸ್ತಿ ಕೆಲಸ ಭರದಿಂದ ಸಾಗಿದೆ. ಹತ್ತಾರು ಸಂಖ್ಯೆಯ ಸಿಬ್ಬಂದಿ ಹೋಟೆಲ್‌ ಸ್ವಚ್ಛಗೊಳಿಸಿದ್ದಾರೆ.

ತ್ವರಿತಗತಿಯಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಮಾ.8ರ ಸಂಜೆ 6ಕ್ಕೆ ರಾಮೇಶ್ವರಂ ಕೆಫೆ ಪುನರಾರಂಭಿಸಲು ಮಾಲೀಕರು ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ