ಗ್ರಾಮಸ್ಥರಿಂದ ವಿರೋಧ । ಅಭಿವೃದ್ಧಿ ಪಡಿಸಿ, ಜನತೆಗೆ ಮೂಲ ಸೌಕರ್ಯ ಒದಗಿಸಲು ಒತ್ತಾಯವಿ.ಎಂ. ನಾಗಭೂಷಣ
ಕನ್ನಡಪ್ರಭ ವಾರ್ತೆ ಸಂಡೂರುತಾಲೂಕಿನ ರಾಮಘಡ ಜನತೆ ಒಪ್ಪಿದರೆ ಅವರನ್ನು ಗುಡ್ಡದ ಕೆಳಗೆ ಸ್ಥಳಾಂತರಿಸುವ ವಿಚಾರ ಅಧಿಕಾರಿಗಳ ಮಟ್ಟದಲ್ಲಿ ಹರಿದಾಡುತ್ತಿದ್ದು, ಗ್ರಾಮಸ್ಥರು, ಪರಿಸರವಾದಿಗಳಲ್ಲಿ ಆತಂಕ ಉಂಟುಮಾಡಿದೆ.
ರಾಮಘಡ ಸುತ್ತಲೂ ದಟ್ಟ ಅರಣ್ಯ, ಐತಿಹಾಸಿಕ ತಾಣಗಳು, ಗಣಿ ಪ್ರದೇಶ ಹೊಂದಿ, ಒಂದು ಕಾಲದಲ್ಲಿ ಬ್ರಿಟಿಷರ ಬೇಸಿಗೆಯ ತಂಗುದಾಣವಾಗಿತ್ತು. ಇದೀಗ ಗಣಿ ಬಾಧಿತ ಪ್ರದೇಶವೂ ಆಗಿದೆ. ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಹಾಗೂ ಪರಿಸರ ಪುನಶ್ಚೇತನಕ್ಕಾಗಿ ರಚಿಸಲಾಗಿರುವ ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮದ (ಕೆಎಂಇಆರ್‌ಸಿ) ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿಜ್ಜೂರ್ ಇತ್ತೀಚೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದಾರೆ. ಗಣಿಬಾಧಿತ ಗ್ರಾಮವಾದ ರಾಮಘಡದ ಜನತೆ ಒಪ್ಪಿದಲ್ಲಿ ಗ್ರಾಮವನ್ನು ಗುಡ್ಡದ ಕೆಳಗಡೆ ಸ್ಥಳಾಂತರಿಸಲು ಮತ್ತು ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ವಿಷಯ ಈಗ ಗ್ರಾಮಸ್ಥರಲ್ಲಿ ಮತ್ತು ಪರಿಸರಾಸಕ್ತರಲ್ಲಿ ಚರ್ಚೆ ಹುಟ್ಟುಹಾಕಿದೆ.ಜನ ಸಂಗ್ರಾಮ ಪರಿಷತ್‌ನ ಮುಖಂಡರಾದ ಟಿ.ಎಂ. ಶಿವಕುಮಾರ್, ಶ್ರೀಶೈಲ ಆಲ್ದಳ್ಳಿ, ಜಿ.ಕೆ. ನಾಗರಾಜ, ಮಂಜುನಾಥ ಹಾಗೂ ಮೂಲಿಮನೆ ಈರಣ್ಣ ಅವರನ್ನೊಳಗೊಂಡ ತಂಡ ಭಾನುವಾರ ರಾಮಘಡಕ್ಕೆ ಭೇಟಿ ನೀಡಿ, ಗ್ರಾಮದ ಸ್ಥಳಾಂತರ, ಅಲ್ಲಿನ ಮೂಲಸೌಕರ್ಯಗಳ ಕೊರತೆ ಕುರಿತು ವಿಚಾರಿಸಿದಾಗ, ಗ್ರಾಮಸ್ಥರು ಅಲ್ಲಿನ ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟಿದ್ದಾರೆ.
ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ೬೦ ಮನೆಗಳಿದ್ದು, ಅಂದಾಜು ೧೮೦ ಜನಸಂಖ್ಯೆ ಇದೆ. ಗ್ರಾಮದಲ್ಲಿ ಕೋಟೆ, ಶ್ರೀರಾಮಸ್ವಾಮಿ, ತಾಯಮ್ಮ ದೇವಸ್ಥಾನಗಳು, ಬ್ರಿಟಿಷರ ಕಾಲದ ಕುರುಹುಗಳು, ಚರ್ಚ್, ಪೀರಲ ದೇವರ ಮಸೀದಿ ಇವೆ.ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ. ಮಳೆಗಾಲದಲ್ಲಿ ರಸ್ತೆ ಕೆಸರುಮಯವಾಗುತ್ತದೆ. ಬೇಸಿಗೆಯಲ್ಲಿ ಧೂಳು ಆವರಿಸಿಕೊಳ್ಳುತ್ತದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ. ಗ್ರಾಮಕ್ಕೆ ಉತ್ತಮ ರಸ್ತೆ ನಿರ್ಮಿಸಿಕೊಡಬೇಕು. ಆಸ್ಪತ್ರೆ ಇಲ್ಲ. ಸರ್ಕಾರಿ ವಾಹನ ಸಂಚಾರ ವ್ಯವಸ್ಥೆ ಇಲ್ಲ. ಗಣಿ ಕಂಪನಿಗಳವರು ನೀರಿನ ವ್ಯವಸ್ಥೆ, ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುತ್ತಿದ್ದಾರೆ. ಶಾಶ್ವತವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಬೇಕು. ಗ್ರಾಮದಲ್ಲಿ ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್, ಡಿಗ್ರಿ ಆದವರಿದ್ದಾರೆ. ಅವರಿಗೆ ಸೂಕ್ತ ಉದ್ಯೋಗ ಕಲ್ಪಿಸಬೇಕು ಎಂಬುದು ನಮ್ಮ ಬೇಡಿಕೆಗಳಾಗಿವೆ.
ಕೆಎಂಇಆರ್‌ಸಿಯವರು ನಮ್ಮ ಗ್ರಾಮದಲ್ಲಿಯೇ ಮೂಲ ಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ರೋಸಿ ಚಾಲಿಯಾ, ಪರಶುರಾಮ, ದೇವೇಂದ್ರಪ್ಪ, ರಜಿಯಾ, ಮೇರಿ ಇಗ್ನೇಷಿಯಸ್, ಮಾರ್ಗರೇಟ್ ಮುಂತಾದವರು ಆಗ್ರಹಿಸಿದ್ದಾರೆ.ಗಣಿಗಾರಿಕೆಯಿಂದ ನಲುಗಿರುವ ರಾಮಘಡ ಗ್ರಾಮವನ್ನು ಸ್ಥಳಾಂತರಿಸಬಾರದು. ಗ್ರಾಮವನ್ನು ಅಭಿವೃದ್ಧಿ ಪಡಿಸಿ, ಮೂಲ ಸೌಕರ್ಯಗಳನ್ನು ಒದಗಿಸಬೇಕಲ್ಲದೆ, ಅದನ್ನು ಪ್ರವಾಸಿ ತಾಣವನ್ನಾಗಿಸಬೇಕು ಎಂಬ ಮಾತು ಗ್ರಾಮಸ್ಥರು ಮತ್ತು ಪರಿಸರವಾದಿಗಳಿಂದ ಕೇಳಿ ಬರುತ್ತಿದೆ. ಕೆಎಂಇಆರ್‌ಸಿಯವರು ಯಾವ ರೀತಿಯ ಕ್ರಮ ಕೈಗೊಳ್ಳುವರು ಎಂಬುದನ್ನು ಕಾದುನೋಡಬೇಕಿದೆ.