- ಅಲ್ಲಾನ ಸ್ಮರಣೆ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ । ಪರಸ್ಪರ ಶುಭಾ ಕೋರಿದ ಮುಸ್ಲಿಂ ಬಾಂಧವರು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಫಿಯ ನಾಡಿನಾದ್ಯಂತ ಮುಸ್ಲಿಂ ಸಮುದಾಯದವರು ಗುರುವಾರ ರಂಜಾನ್ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ಶ್ರದ್ಧೆ ಭಕ್ತಿಯಿಂದ ಆಚರಿಸಿದರು.
ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಂ ಜನಾಂಗದವರು ಚಂದ್ರನನ್ನು ನೋಡಿ ಮರು ದಿನ ಹಬ್ಬಆಚರಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಪ್ರತೀತಿ.ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಚಿಕ್ಕಮಗಳೂರು ನಗರದಲ್ಲಿ ರಂಜಾನ್ ಆಚರಣೆ ಸಂಭ್ರಮದಿಂದ ಕೂಡಿತ್ತು. ಹಬ್ಬದ ಹ್ನಿನಲೆಯಲ್ಲಿ ಖರೀದಿ ಜೋರಾಗಿತ್ತು. ಮಹಿಳೆಯರು, ಮಕ್ಕಳು ಇಲ್ಲಿನ ಎಂ.ಜಿ. ರಸ್ತೆ, ಅಂಡೆ ಛತ್ರದ ಬಳಿ ಪ್ರತಿ ದಿನ ಸಂಜೆ ಹೊಸ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಬುಧವಾರ ರಾತ್ರಿ 11 ಗಂಟೆವರೆಗೆ ಈ ಪ್ರದೇಶದಲ್ಲಿ ಖರೀದಿ ಮುಂದುವರೆದಿತ್ತು.
ಗುರುವಾರ ಬೆಳಿಗ್ಗೆ ಹೊಸ ಬಟ್ಟೆ ಧರಿಸಿ, ದಾರಿ ಉದ್ದಕ್ಕೂ ಅಲ್ಲಾನ ಸ್ಮರಣೆ ಮಾಡುತ್ತಾ ಈದ್ಗಾ ಮೈದಾನದ ಕಡೆಗೆ ತೆರಳಿದರು. 10 ಗಂಟೆ ವೇಳೆಗೆ ಮುಸ್ಲಿಂ ಸಮುದಾಯ ಸಂಖ್ಯೆ ಹೆಚ್ಚಾಗಿತ್ತು. ಚಿಕ್ಕಮಗಳೂರಿನ ಕೆಂಪನಹಳ್ಳಿ ಈದ್ಗಾ ಮೈದಾನದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಮಂದಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ಧರ್ಮ ಗುರುಗಳು ಉಪನ್ಯಾಸ ನೀಡಿದರು. ಪ್ರಾರ್ಥನೆ ಬಳಿಕ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.ನಗರದ ವಿಜಯಪುರದ ಈದ್ಗಾ ಮೈದಾನದಲ್ಲೂ ಇದೇ ವಾತಾವರಣ, ಸಂಭ್ರಮ ಕಂಡು ಬಂದಿತು. ಮನೆಗಳಲ್ಲೂ ಕೂಡ ಹಬ್ಬದ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ ಪ್ರತಿ ವರ್ಷದಂತೆ ಈ ಬಾರಿಯೂ ಸಡಗರದಿಂದ ರಂಜಾನ್ ಆಚರಿಸಲಾಯಿತು.
11 ಕೆಸಿಕೆಎಂ 1ಚಿಕ್ಕಮಗಳೂರಿನ ಕೆಂಪನಹಳ್ಳಿಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಧರ್ಮಗುರುಗಳು ಉಪನ್ಯಾಸ ನೀಡಿದರು.--- ಬಾಕ್ಸ್ ----ಕೊಟ್ಟಿಗೆಹಾರ ಸುತ್ತಮುತ್ತ ಸಂಭ್ರಮದ ರಂಜಾನ್ ಆಚರಣೆ
ಕೊಟ್ಟಿಗೆಹಾರ: ಬಣಕಲ್, ಕೊಟ್ಟಿಗೆಹಾರ, ಚಕ್ಕಮಕ್ಕಿ, ಬಗ್ಗಸಗೋಡು, ಹೊರಟ್ಟಿ, ಗಬ್ಗಲ್ ಸುತ್ತಮುತ್ತಲಿನ ಮುಸ್ಲಿಂ ಬ್ಯಾರಿ ಹಾಗೂ ಶಾಫಿ ಸಮುದಾಯದವರು ಬೆಳಿಗ್ಗೆಯೇ ಹೊಸ ಬಟ್ಟೆ ಧರಿಸಿ ರಂಜಾನ್ ಹಬ್ಬದ ಪ್ರಯುಕ್ತ ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಕೊಟ್ಟಿಗೆಹಾರದ ಜುಮ್ಮಾ ಮಸೀದಿಯಲ್ಲಿ ಮುಸ್ಲಿಮರು ಲೋಕ ಕಲ್ಯಾಣಕ್ಕಾಗಿ ಕುರಾನ್ ಪಠಿಸಿದರು. 30 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿ, ಉಪವಾಸ ವ್ರತ ಸಂಪನ್ನಗೊಂಡ ನಂತರ ರಂಜಾನ್ ಹಬ್ಬ ಆಚರಿಸಲಾಗುತ್ತದೆ. ಅಲ್ಲಾಹು ಸರ್ವರಿಗೂ ಆರೋಗ್ಯ ಭಾಗ್ಯ ಹಾಗೂ ಕುಟುಂಬದಲ್ಲಿ ನೆಮ್ಮದಿ ಬದುಕು ನೀಡಿದ್ದಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಆಲಂಗಿಸಿ ಹಬ್ಬದ ಶುಭಾಶಯ ಕೋರಿದರು. ಖಬರಸ್ಥಾನಕ್ಕೆ ಹೋಗಿ ಕುಟುಂಬದ ಆತ್ಮಗಳಿಗೆ ಮುಕ್ತಿ ಸಿಗುವಂತೆ ಪ್ರಾರ್ಥಿಸಿದರು.
ಕೊಟ್ಟಿಗೆಹಾರ ಜುಮ್ಮಾ ಮಸೀದಿ ಗುರು ಅಬ್ದುಲ್ ಹಮೀದ್ ಪೈಝಿ ಮಾತನಾಡಿ, ಶುದ್ಧ ಮಾನವೀಯ ಹಾಗೂ ಸಾಮಾಜಿಕ ಕಳಕಳಿಯೇ ಈ ಹಬ್ಬದ ಸಂದೇಶ. ರಂಜಾನ್ ಹಬ್ಬದ ಸಂಭ್ರಮದಲ್ಲಿ ಈದ್ ಪ್ರಾರ್ಥನೆಗಾಗಿ ಪ್ರವಾದಿ ಮುಹಮ್ಮದ್ ಹಾಗೂ ಅವರ ಅನುಯಾಯಿಗಳು ಮದೀನಾದ ಮಸೀದಿಯಲ್ಲಿ ಸೇರಿದ್ದರು. ಈದ್ ನಮಾಜ್ ಗೆ ಸಿದ್ಧರಾಗುತ್ತಿದ್ದ ವೇಳೆ, ಮಸೀದಿ ಮೂಲೆಯಲ್ಲಿ ಕುಳಿತು ಅಳುತ್ತಿದ್ದ ಬಾಲಕ ಹಝ್ರತ್ ಮುಹಮ್ಮದ್ ಅವರ ಕಣ್ಣಿಗೆ ಬಿದ್ದು, ವಿಚಾರಿಸಿದಾಗ ಅತ ಅನಾಥನೆಂದೂ, ಧರಿಸಲು ಹೊಸ ಬಟ್ಟೆ ಇರಲಿಲ್ಲವೆಂದು, ಹಬ್ಬದ ಸಂಭ್ರಮ ತನಗಿಲ್ಲವೆಂದೂ ಅಳುವ ವಿಚಾರ ತಿಳಿಯಿತು.ಮುಹಮ್ಮದ್ ಪೈಗಂಬರರು ಬಾಲಕನನ್ನು ಆಲಂಗಿಸಿ, ಹಣೆಗೆ ಮುತ್ತಿಟ್ಟು, ತಮ್ಮ ಮನೆಗೆ ಕರೆದೊಯ್ದು ಸ್ನಾನ ಮಾಡಿಸಿ ಹೊಸ ಬಟ್ಟೆ ನೀಡಿ ಇತರ ಮಕ್ಕಳೊಂದಿಗೆ ಊಟಕ್ಕೆ ಕೂರಿಸಿದರು. ಅನಾಥನಾದ ಬಾಲಕ ಎಲ್ಲರೊಂದಿಗೆ ಸಂತೋಷ ದಿಂದ ಈದ್ ಆಚರಿಸಿದನು. ಇದರಿಂದ ಈ ಹಬ್ಬ ದಾನ ಧರ್ಮಗಳ ಹಬ್ಬವಾಗಿ ಆಚರಿಸಲ್ಪಡುತ್ತಿದೆ ಎಂದರು.
ಬಣಕಲ್ ಮೊಹಿದ್ದೀನ್ ಜುಮ್ಮಾ ಮಸೀದಿ ದರ್ಮಗುರು ಮೊಹಮ್ಮದ್ ಹಾರಿಸಿ ಬಾಖವಿ ಖತೀಬ್ ಮಾತನಾಡಿ, ಒಂದು ತಿಂಗಳ ಉಪವಾಸದ ಬಳಿಕ ಮುಸಲ್ಮಾನರು ಆಚರಿಸುವ ರಂಜಾನ್ ಹಬ್ಬದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ, ಹಬ್ಬದ ಆಚರಣೆಯಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಕಳಕಳಿಯೂ ಇದೆ.ಕಠಿಣ ಉಪವಾಸದ ಮೂಲಕ ದೇಹವನ್ನು ದಂಡಿಸಿ ಸ್ವಾರ್ಥ ರಹಿತವಾಗಿ ಸರಳವಾಗಿ ಬದುಕಿ ಕಡ್ಡಾಯ ದಾನ ಮಾಡುವ ಮೂಲಕ ದಮನಿತರ ಕಷ್ಟಕ್ಕೆ, ಬಡವರ ನೋವಿಗೆ ಸ್ಪಂದಿಸುವ ಸಾಮಾಜಿಕ ಸಮಾನತೆ ಸಂದೇಶವಿದೆ ಎಂದರು.ಧರ್ಮಗುರು ಮುಹಜಿನ್ ಅಮೀರ್ ಫಾರೂಖಿ ಇದ್ದರು. ಬಣಕಲ್, ಕೊಟ್ಟಿಗೆಹಾರದಲ್ಲಿ ಈದ್ ನಮಾಜ್ ನಲ್ಲಿ ಸ್ಥಳೀಯ ಮುಸ್ಲಿಂ ಭಾಂದವರು, ಮಕ್ಕಳು ಭಾಗವಹಿಸಿದ್ದರು. 11 ಕೆಸಿಕೆಎಂ 2ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ರಂಜಾನ್ ಆಚರಿಸಲಾಯಿತು.