ಕನ್ನಡಪ್ರಭ ವಾರ್ತೆ ರಾಮನಾಥಪುರ
ಇಲ್ಲಿಯ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಬಳಿ ತೇರಿನ ಮನೆ ಬಳಿ ವಾಸವಿದ್ದ ವೃದ್ಧೆಯ ರಕ್ಷಣೆ ಮಾಡಿದ ಚನ್ನರಾಯಪಟ್ಟಣದ ಮಾತೃಭೂಮಿ ವೃದ್ಧಾಶ್ರಮದ ಕಾರ್ಯದರ್ಶಿಯಾದ ಸುಮಾ ವಿಕ್ರಮ್ ತಮ್ಮ ಆಶ್ರಮಕ್ಕೆ ಕರೆದೊಯ್ದರು. ಇದೇ ಸಂದರ್ಭದಲ್ಲಿ ವಿಕ್ರಮ್ ಜೈಹಿಂದ್ ರವರು ಮಾತನಾಡಿ, ದೇವರ ವಿಗ್ರಹಗಳನ್ನು ತೊಳೆಯುವ ಪುಣ್ಯಕ್ಷೇತ್ರ ರಾಮನಾಥಪುರ. ಇಲ್ಲಿನ ಹೊಳೆಯಲ್ಲಿ ಮುಳುಗಿ ಸುಬ್ರಮಣ್ಯಸ್ವಾಮಿ ದೇವರ ದರ್ಶನ ಮಾಡಿ ಪಾಪದ ಕೊಳೆಯನ್ನು ಕಳೆದುಕೊಳ್ಳುವ ಈ ಸ್ಥಳದಲ್ಲಿ ಈ ಅಜ್ಜಿಯ ದುರ್ವಾಸನೆಯ ದೇಹವನ್ನು ನೋಡಿ ಮನ ಕಲಕಿತು ಎಂದು ಹೇಳಿದರು. ಇಂಥ ಪರಿಸ್ಥಿತಿಯಲ್ಲಿ ಯಾರಿದ್ದರೂ ಎಲ್ಲಿದ್ದರೂ ಎಂತಹ ಪರಿಸ್ಥಿತಿಯಲ್ಲಿದ್ದರೂ ನಮ್ಮ ಮೊಬೈಲ್ ನಂಬರ್ 9535585978 ಕರೆ ಮಾಡಿ ತಿಳಿಸಿ ಬಂದು ಕರೆದುಕೊಂಡು ಹೋಗುತ್ತವೆ ಎಂದು ತಿಳಿಸಿದರು.ನಮ್ಮ ಆಶ್ರಮಕ್ಕೆ ಯಾವುದೇ ತರಹದ ಸರ್ಕಾರದ ಅನುದಾನಗಳು ಇರುವುದಿಲ್ಲ. ಬಾಡಿಗೆ ಕಟ್ಟಡದಲ್ಲಿ ನಮ್ಮ ಆಶ್ರಮವನ್ನು ನಡೆಸುತ್ತಾ ಬಂದಿರುತ್ತೇವೆ. ನಮ್ಮ ಸಂಸ್ಥೆಯಲ್ಲಿ ಪ್ರಸ್ತುತ ಸುಮಾರು 150 ಜನ ಆಶ್ರಯ ಪಡೆಯುತ್ತಿದ್ದಾರೆ. ನಿಮ್ಮ ಸಹಾಯ ಒಂದು ರುಪಾಯಿಂದ ಶುರುವಾಗಲಿ ಎಂದು ಹೇಳುತ್ತಾ ಇನ್ನೂ ನೂರಾರು ಜನರಿಗೆ ಆಶಯ ನೀಡುವ ಹಂಬಲದಿಂದ ಆಶ್ರಮವನ್ನು ನಡೆಸುತ್ತಿದ್ದೇವೆ ನಿಮ್ಮ ಸಲಹೆ ಸಹಕಾರ ನೀಡಲಿ ಎಂದು ಕೇಳಿಕೊಂಡರು.ಸ್ಥಳೀಯರು ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷರು ಶರಣ ಎಂ.ಎನ್. ಕುಮಾರಸ್ವಾಮಿ ಅವರು ಕಾವೇರಿ ದೇವಸ್ಥಾನದ ಆಸುಪಾಸು ಭಿಕ್ಷೆ ಬೇಡಿ ಬದುಕುತ್ತಿದ್ದ ಈ ಅಜ್ಜಿಯನ್ನು ವೃದ್ಧಾಶ್ರಮಕ್ಕೆ ಫೋನ್ ಮಾಡಿ ನಮ್ಮನ್ನು ಕರೆಸಿಕೊಂಡು ಸೇರಿಸಿದ್ದು ವಯಸ್ಸಾಗಿ ಈ ಅಜ್ಜಿಯ ಪರಿಸ್ಥಿತಿ ಕಣ್ಣಾರೆ ನೋಡಲು ಸಾಧ್ಯವಾಗುತ್ತಿರುವುದಿಲ್ಲ ಎಂದು ಅಕ್ಕಪಕ್ಕದವರು ತಿಳಿಸಿದ ಕಾರಣ ನಾವು ಆಶ್ರಮಕ್ಕೆ ಕರೆ ನೀಡಿ ತಿಳಿಸಿರುತ್ತೇವೆ. ಆಶ್ರಮಕ್ಕೆ ನಾವು ತೆರಳಿ ಅಲ್ಲಿ ಆಗುಹೋಗುಗಳನ್ನು ಕಣ್ಣಾರೆ ನೋಡಿ ಮನ ಕಲಕುವ ಒಂದು ಸನ್ನಿವೇಶ ಎಂದು ತಿಳಿಸಲು ಆಶಿಸುತ್ತೇನೆ. ಎಲ್ಲಾ ತಾಲೂಕು ಜಿಲ್ಲೆ ಹೊರ ರಾಜ್ಯಗಳಿಂದಲೂ ಇಲ್ಲಿ ಆಶ್ರಮಾವಾಸಿಗಳಾಗಿರುತ್ತಾರೆ. ಈ ಅಜ್ಜಿಯನ್ನು ಒಂದು ನೆಲೆ ಮಾಡಿರುವುದು ಸ್ಥಳೀಯರಿಗೆ ಒಂದು ಖುಷಿಯ ವಿಚಾರ ಹಾಗೂ ಚನ್ನರಾಯಪಟ್ಟಣದ ವೃದ್ಧಾಶ್ರಮದ ನಾಗಣ್ಣ ಅವರ ಕುಟುಂಬಕ್ಕೆ ಧನ್ಯವಾದಗಳನ್ನು ಕುಮಾರಸ್ವಾಮಿ ಸಲ್ಲಿಸಿದರು.
ಇಲ್ಲಿಯ ಸ್ಥಳೀಯರಾದ ಇಂದ್ರಮ್ಮ ಮುಂತಾದವರು ಕಣ್ಣೀರಿಡುತ್ತಾ ಈ ಅಜ್ಜಿಯನ್ನು ಮಾತೃಭೂಮಿ ವೃದ್ಧಾಶ್ರಮಕ್ಕೆ ಕಳಿಸಿಕೊಟ್ಟರು.ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಅರ್ಚಕರು ಶ್ರೀನಾಥ್, ಗ್ರಾಮಸ್ಥರಾದ ನರಸಿಂಹಮೂರ್ತಿ, ನಾಗೇಶ್, ರಾಜೇಶ್, ಸುಮೀತ್, ಇಂದ್ರಮ್ಮ, ಅಶ್ವಿನಿ ಕನಕಚಾರ್, ಹೇಳವಪ್ಪ, ಪೇಂಟ್ ಮಂಜುನಾಥ, ಯು.ಎಸ್. ಸುಬ್ಬರಾಯ, ಭಾನು ಮುಂತಾದವರು ಇದ್ದರು.