ಶೇಷಗಿರಿಯಲ್ಲಿ ಸಹೃದಯರ ಮನಸೂರೆಗೊಂಡ ರಂಗಾಯಣ ನಾಟಕ

KannadaprabhaNewsNetwork |  
Published : Mar 24, 2025, 12:31 AM IST
ಫೋಟೋ : 21ಎಚ್‌ಎನ್‌ಎಲ್2, 2ಎ, 2ಬಿ, 2ಸಿ, 2ಡಿ | Kannada Prabha

ಸಾರಾಂಶ

50 ವರ್ಷಗಳಿಂದ ಕರ್ನಾಟಕದ ಬಹುಮುಖ್ಯ ಅನ್ನಬಹುದಾದ ಒಂದಿಲ್ಲ ಒಂದು ತಂಡ ಸತ್ತವರ ನೆರಳನ್ನು ರಂಗಕ್ಕೆ ತರುತ್ತಲೇ ಇವೆ. ಇದಕ್ಕೆ ಮೊದಲ ಛಾಪನ್ನು ಮೂಡಿಸಿದವರು ರಂಗಕರ್ಮಿ ಬಿ.ವಿ. ಕಾರಂತರು.

ಹಾನಗಲ್ಲ: ಸತ್ಯ ಕಟುಸತ್ಯಗಳ ನಡುವೆ ತೂಗುವ ಸತ್ತವರ ನೆರಳು ನಾಟಕ ರಂಗಾಯಣದ ನಾಟಕ ರಂಗಗ್ರಾಮ ಶೇಷಗಿರಿಯಲ್ಲಿ ಸಹೃದಯರ ಮನಸೂರೆಗೊಳ್ಳುವಲ್ಲಿ ಯಶ ಕಂಡಿತು. ರಂಗಭೂಮಿಗೆ ಸಂಬಂಧಿಸಿದಂತೆ ಸದಾ ಏನಾದರೊಂದು ಹೊಸದು ನಡೆಯುತ್ತಲೇ ಇರುವ ಶೇಷಗಿರಿಯಲ್ಲಿ ಈ ಬಾರಿ ರಂಗಾಯಣ ಧಾರವಾಡದ ರೆಪರ್ಟರಿಯಿಂದ ನಾಟಕಕಾರ ಜಿ.ಬಿ. ಜೋಶಿ(ಜಡಭರತ) ಅವರ ಸತ್ತವರ ನೆರಳು ನಾಟಕ ತುಂಬ ಪ್ರಭಾವಿಯಾಗಿ ಪ್ರದರ್ಶನವಾಯಿತು. 50 ವರ್ಷಗಳಿಂದ ಕರ್ನಾಟಕದ ಬಹುಮುಖ್ಯ ಅನ್ನಬಹುದಾದ ಒಂದಿಲ್ಲ ಒಂದು ತಂಡ ಸತ್ತವರ ನೆರಳನ್ನು ರಂಗಕ್ಕೆ ತರುತ್ತಲೇ ಇವೆ. ಇದಕ್ಕೆ ಮೊದಲ ಛಾಪನ್ನು ಮೂಡಿಸಿದವರು ರಂಗಕರ್ಮಿ ಬಿ.ವಿ. ಕಾರಂತರು. ಈಗಿನ ಅನೇಕ ಪ್ರಸಿದ್ಧ ನಟ ನಿರ್ದೇಶಕರು ಕಾರಂತರ ಪ್ರದರ್ಶನದಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿದ್ದರೆಂಬ ಹೆಗ್ಗಳಿಕೆ ಇದರದು. ಈ ಸಲ ಪ್ರತಿಭಾವಂತ ನಿರ್ದೇಶಕ ಹುಲಗಪ್ಪ ಕಟ್ಟಿಮನಿ ರಂಗಾಯಣ ರಾಷ್ಟ್ರೀಯ ನಾಟಕೋತ್ಸವಕ್ಕಾಗಿ ಸಿದ್ಧಪಡಿಸಿದ್ದು. ಅತ್ಯಂತ ಅಭಿನಯ ಕೌಶಲ ಹೊಂದಿದ ಯುವ ನಟ ಸಮೂಹ ಸಮರ್ಥವಾಗಿ ನಾಟಕವನ್ನು ರಂಗಕ್ಕೆ ತಂದಿದ್ದಾರೆ. ಇಡೀ ನಾಟಕದುದ್ದಕ್ಕೂ ಹತ್ತಕ್ಕೂ ಹೆಚ್ಚು ಪುರಂದರದಾಸರ ಹಾಡುಗಳನ್ನು ಬಳಕೆ ಮಾಡಲಾಗಿದೆ. ಪ್ರತಿ ದೃಶ್ಯ ಬದಲಾಗುವಾಗ ಕಥಾನಕ್ಕೆ ಮೆರುಗು ನೀಡುವ ರೀತಿಯಲ್ಲಿ ರಾಗ ಸಂಯೋಜನೆಯನ್ನು ರಾಘವ ಕಮ್ಮಾರ ಮಾಡಿದ್ದಾರೆ. ನಿರೂಪಕ ಜೋಡಿಯಾಗಿ ಹರೀಶಕುಮಾರ ಮತ್ತು ಭಾಗ್ಯಶ್ರೀ ಪಾಳಾ ಭಾವಪೂರ್ಣವಾಗಿ ಅಭಿನಯಿಸಿದ್ದು ವಿಶೇಷ.

ಒಲ್ಲದ ಮನಸ್ಸಿನಿಂದ ಗುಣತೀರ್ಥ ಸ್ವಾಮಿಯಾದ ತಾನು ಜೀವಂತ ಇರುವಾಗಲೇ ತನ್ನದೇ ಬೃಂದಾನವನ್ನು ನೋಡಿ, ಇದೆಲ್ಲ ಸುಳ್ಳು ಎಂದು ಸಿಡಿದೇಳುವ ದೃಶ್ಯದಿಂದ ನಾಟಕ ಆರಂಭವಾಗುತ್ತದೆ. ಪೂರ್ವಾಶ್ರಮದ ನಾರಾಯಣ ನಾನು ಜೀವಂತ ಇದ್ದೇನೆ. ಇದು ನನ್ನ ಬೃಂದಾವನ ಅಲ್ಲ ಎಂದು ಹೇಳಿದರೂ ಭಕ್ತರ ದೈವಿ ನಂಬಿಕೆಯ ಮುಂದೆ ನಿಸ್ಸಹಾಯಕನಾಗಿ ಕುಳಿತಾಗ ನಾಟಕ ಮಂಗಲವಾಗುತ್ತದೆ. ನಾರಾಯಣ ಪಾತ್ರಧಾರಿ ಹರೀಶ ದೊಡ್ಡಮನಿ ನಾಟಕದ ಶಕ್ತಿಕೇಂದ್ರವಾಗುತ್ತಾರೆ.

ಸತ್ತವರ ನೆರಳು ಯಾವಾಗಲೂ ಕಾಡುತ್ತದೆ. ಭಕ್ತರಿಗೆ ಪೂಜಿಸಲು, ಆರಾಧಿಸಲು ಬೃಂದಾವನ ಮಾತ್ರ ಬೇಕು. ಅದರಲ್ಲಿ ಯಾರೇ ಇದ್ದರೂ ಸರಿ. ನಂಬಿಕೆ ಅಪನಂಬಿಕೆ, ಸತ್ಯ ಅಸತ್ಯ, ವಾಸ್ತವ ಅವಾಸ್ತವ ಗೊಂದಲಗಳು ವಿಚಾರವಂತರನ್ನು ಕಾಡದೇ ಇರಲಾರವು. ಇಡೀ ನಾಟಕ ಸತ್ಯ ಮತ್ತು ಕಟುಸತ್ಯಗಳ ತೂಗುಯ್ಯಾಲೆಯಾಗುತ್ತವೆ. ನಾಟಕವನ್ನು ಹರಿಕೀರ್ತನೆ, ರಸ್ತೆ ಹಾಡುಗಾರರ ತಂತ್ರದ ಮೂಲಕ ನಿರೂಪಿಸಲಾಗಿದೆ.

ಮೊದಲು ಪ್ರಕಾಂಡ ಪಂಡಿತರಾಗಿದ್ದ ಶ್ರೀನಿವಾಸ ಊರ್ಫ ಸೀನ ನಾಟಕದಲ್ಲಿ ಸಮಾಜ ವಿಮರ್ಶಕನಾಗಿ ಕಾಣುತ್ತಾನೆ. ಮಠ ವ್ಯವಸ್ಥೆಯನ್ನು ಸದಾ ಪ್ರಶ್ನಿಸುತ್ತಾನೆ. ನಾಟಕದಲ್ಲಿ ದಿವಾನ್ ಕೃಷ್ಣಾಚಾರಿಯಾಗಿ ಗೋಪಾಲ ಉಣಕಲ್, ಹಿರೆ ಸ್ವಾಮಿಗಳಾಗಿ ಪ್ರಮೋದ ಅಂಬೇಕರ, ಕಾಶಿ ಪಂಡಿತರಾಗಿ ವಿಜೇಂದ್ರ ಅರ್ಚಕ್, ಮಂಜುನಾಥ ತಳವರ, ಪ್ರಿಯಾಂಕ್, ದರ್ಶನ, ಅಂಬಿಕಾ, ಸಂತೋಷ ಪ್ರಸಾದ ಅಭಿನಯ ನಾಟಕದ ಗುಣಮೌಲ್ಯವಾಗಿತ್ತು.

ರಂಗಸಜ್ಜಿಕೆ, ಸಂಗೀತ, ಸಮೂಹ ಚಲನೆ, ವಾದ್ಯ ಬಳಕೆ, ಬೆಳಕಿನ ಸಂಯೋಜನೆ ಉತ್ಕೃಷ್ಟ ಮಟ್ಟದ್ದು. ಒಮ್ಮೆ ನೋಡಲೇಬೇಕಾದ ಸತ್ತವರ ನೆರಳು ನಾಟಕ ನೀಡಿದ ರಂಗಾಯಣ ಧಾರವಾಡ ಮತ್ತು ಹಾವೇರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಭಿನಂದನಾರ್ಹವಾದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ