ಡ್ರಗ್ಸ್‌ ನೀಡಿ ಅತ್ಯಾಚಾರ: ಐಜಿಪಿ ಅಮಿತ್ ಸಿಂಗ್

KannadaprabhaNewsNetwork | Published : Aug 25, 2024 1:46 AM

ಸಾರಾಂಶ

ಯುವತಿಗೂ ಆರೋಪಿಗೂ ಇನ್‌ಸ್ಟಾಗ್ರಾಂನಲ್ಲಿ ಪರಿಚಯ ಇತ್ತು. ಆಕೆಯ ತಂದೆಯ ಜೊತೆ ಆರೋಪಿಗೆ ಹಲವು ವರ್ಷಗಳ ಪರಿಚಯ ಇತ್ತು. ಆ ಕಾರಣಕ್ಕೆ ಆಕೆ ಆತನ ಜೊತೆ ಕಾರಿನಲ್ಲಿ ಹೋಗಿದ್ದಳು. ಅಲ್ಲಿ ಆಕೆಗೆ ಬಿಯರ್ ಕುಡಿಸಿದ್ದಾರೆ. ಅದರಲ್ಲಿ ಡ್ರಗ್ಸ್ ಮಿಕ್ಸ್ ಮಾಡಲಾಗಿತ್ತು ಎಂದು ಐಜಿಪಿ ಅಮಿತ್ ಸಿಂಗ್ ಖಚಿತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಅತ್ಯಾಚಾರಕ್ಕೊಳಗಾದ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಲಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಖಚಿತಪಡಿಸಿದ್ದಾರೆ.ಯುವತಿಗೂ ಆರೋಪಿಗೂ ಇನ್‌ಸ್ಟಾಗ್ರಾಂನಲ್ಲಿ ಪರಿಚಯ ಇತ್ತು. ಆಕೆಯ ತಂದೆಯ ಜೊತೆ ಆರೋಪಿಗೆ ಹಲವು ವರ್ಷಗಳ ಪರಿಚಯ ಇತ್ತು. ಆ ಕಾರಣಕ್ಕೆ ಆಕೆ ಆತನ ಜೊತೆ ಕಾರಿನಲ್ಲಿ ಹೋಗಿದ್ದಳು. ಅಲ್ಲಿ ಆಕೆಗೆ ಬಿಯರ್ ಕುಡಿಸಿದ್ದಾರೆ. ಅದರಲ್ಲಿ ಡ್ರಗ್ಸ್ ಮಿಕ್ಸ್ ಮಾಡಲಾಗಿತ್ತು. ಅದನ್ನು ಕುಡಿದ ಆಕೆ ಪ್ರಜ್ಞೆ ಕಳೆದುಕೊಂಡಿದ್ದಾಳೆ, ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದವರು ಹೇಳಿದ್ದಾರೆ.

ಆಕೆಯ ರಕ್ತಪರಿಕ್ಷ ವರದಿ ಇನ್ನು ಬಂದಿಲ್ಲ, ರಕ್ತ ಪರೀಕ್ಷೆ ವರದಿಯಲ್ಲಿ ಯಾವ ರೀತಿಯ ಡ್ರಗ್ಸ್ ಎನ್ನುವುದು ತಿಳಿಯುತ್ತದೆ. ಅದನ್ನು ಎಲ್ಲಿಂದ ತಂದರು ಎಂದು ತನಿಖೆ ಮಾಡುತ್ತಿದ್ದೇವೆ. ಆರೋಪಿ ಅಲ್ತಾಫ್, ಡ್ರಗ್ ಪೆಡ್ಲರ್ ಎನ್ನುವ ಬಗ್ಗೆ ಮಾಹಿತಿ ಇಲ್ಲ, ಅದನ್ನು ತಳ್ಳಿ ಹಾಕುವಂತಿಲ್ಲ ಎಂದು ಐಜಿಪಿ ಹೇಳಿದ್ದಾರೆ.

ಆಕೆಯ ದೂರಿನಂತೆ ಎಫ್ಐಆರ್ ಮಾಡಲಾಗಿದ್ದು, ಗ್ಯಾಂಗ್ ರೇಪ್ ಎಂದನಿಸುತ್ತಿಲ್ಲ. ತನಿಖೆಯಿಂದ ಹೆಚ್ಚಿನ ಮಾಹಿತಿ ಸಿಗಬೇಕಾಗಿದೆ. ಈಗ ಆಕೆ ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲ, ಆಕೆಯ ಪರಿಸ್ಥಿತಿ ಸುಧಾರಿಸಿದ ಮೇಲೆ ಪೂರ್ಣವಿವರ ತಿಳಿಯಬಹುದು ಎಂದು ಹೇಳಿದ್ದಾರೆ.

--------------------

ಇದೊಂದು ಪೂರ್ವನಿಯೋಜಿತ ಕೃತ್ಯ: ಸುನಿಲ್ ಕುಮಾರ್

ಬಡ ಯುವತಿಯೊಬ್ಬಳನ್ನು ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಅತ್ಯಂತ ಖಂಡನೀಯ. ಇದೊಂದು ಪೂರ್ವಯೋಜಿತ ಕೃತ್ಯ ಎನ್ನುವ ಸಂದೇಹ ದಟ್ಟವಾಗಿ ಕಾಣುತ್ತದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.ಯುವತಿಯನ್ನು ಪುಸಲಾಯಿಸಿ ಕಾರಿನಲ್ಲಿ ಪಳ್ಳಿ ಎಂಬಲ್ಲಿವರೆಗೆ ಅಪಹರಿಸಿ ಅಮಲು ಪದಾರ್ಥ ನೀಡಿ ಈ ಕೃತ್ಯ ನಡೆಸಿದ್ದಾರೆ ಎಂದರೆ ಇದನ್ನು ಊಹಿಸಲು ಅಸಾಧ್ಯ. ಪ್ರಕರಣ ಸಂಬಂಧ ಪೊಲೀಸರು ಸಮಗ್ರ ತನಿಖೆ ನಡೆಸಿ, ಪ್ರಕರಣ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು. ಸಂತ್ರಸ್ತ ಯುವತಿಯ ಆರೋಗ್ಯ ವೆಚ್ಚವನ್ನು ಸರ್ಕಾರ ಭರಿಸಬೇಕು. ಜಿಲ್ಲಾಡಳಿತ ಯುವತಿಗೆ ಮಾನಸಿಕ ಧೈರ್ಯ ತುಂಬಿ, ಆಕೆ ಮತ್ತು ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

------

ಮಾದಕ ವ್ಯಸನದಿಂದ ಪೈಶಾಚಿಕ ಕೃತ್ಯ: ಕಾಂಗ್ರೆಸ್ಯುವತಿ ಮೇಲೆ ನಡೆದ ಅತ್ಯಾಚಾರ ಅತ್ಯಂತ ಖಂಡನೀಯ. ಈ ಘಟನೆಯಿಂದ ಇಡೀ ಸಮಾಜ ತಲೆ ತಗ್ಗಿಸುವಂತಾಗಿದೆ. ಪ್ರಕರಣದ ಎಲ್ಲ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಆಗ್ರಹಿಸಿದ್ದಾರೆ.

ಈ ಘಟನೆಯಿಂದ ಜನರಲ್ಲಿ ಆತಂಕದ ವಾತಾವರಣದ ನಿರ್ಮಾಣವಾಗಿದೆ. ಯುವಕರು ಮಾದಕ ವಸ್ತುಗಳಿಗೆ ಬಲಿಯಾಗಿ ಇಂತಹ ಪೈಶಾಚಿಕ ಕೃತ್ಯಗಳಲ್ಲಿ ತೊಡಗುತಿದ್ದಾರೆ. ಪೊಲೀಸ್ ಇಲಾಖೆ ಅಂಥವರನ್ನು ಮಟ್ಟ ಹಾಕಿ, ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತೆಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅವರ ಕುಟುಂಬದ ಜೊತೆ ಕಾಂಗ್ರೆಸ್ ಪಕ್ಷ ನಿಲ್ಲಲಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

------ಉಗ್ರ ಹೋರಾಟದ ಎಚ್ಚರಿಕೆ

ನಮ್ಮ ಸಮಾಜದ ಹೆಣ್ಣು ಮಗಳ ಮೇಲೆ ಆಗಿರುವ ಹೀನಾಯ ಕೃತ್ಯವನ್ನು ಭೋವಿ ಸಮುದಾಯವು ಖಂಡಿಸುತ್ತದೆ. ಅತ್ಯಾಚಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟವನ್ನು ಸಮಾಜದ ಮೂಲಕ ನಡೆಸುವುದಾಗಿ ಮಾಜಿ ಜಿಲ್ಲಾ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

----------

ಪ್ರಕರಣವನ್ನು ಎನ್ಐಎಗೆ ನೀಡಿ: ಬಿಜೆಪಿ ಮಹಿಳಾ ಮೋರ್ಚಾಅಮಾಯಕ ಯುವತಿಯ ಅತ್ಯಾಚಾರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಗೆ ಒಪ್ಪಿಸಬೇಕು ಎಂದು ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಆಗ್ರಹಿಸಿದೆ.

ಪೊಲೀಸ್ ಇಲಾಖೆ ಮೊದಲೇ ಎಚ್ಚೆತ್ತುಕೊಳ್ಳುತ್ತಿದ್ದರೆ, ಇಂತಹ ಘಟನೆ ನಡೆಯುತ್ತಿರಲಿಲ್ಲ. ಇನ್ನಾದರೂ ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಹುಡುಗಿಗೆ ನ್ಯಾಯ ಒದಗಿಸಬೇಕು ಹಾಗೂ ಹುಡುಗಿ ಮೇಲೆ ಸರಣಿ ಅತ್ಯಾಚಾರ ನಡೆದಿರುವ ಸಾಧ್ಯತೆಯಿದೆ. ಇಂತಹ ಹೇಯ ಕೃತ್ಯ ನಡೆಸಿರುವವರನ್ನು ತಕ್ಷಣವೇ ಬಂಧಿಸಬೇಕು. ಇಲ್ಲವಾದಲ್ಲಿ ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಉಗ್ರ ಪ್ರತಿಭಟನೆ ಮಾಡಲಿದೆ ಎಂದು ಕಾರ್ಕಳ ಮಹಿಳಾ ಮೋರ್ಚಾ ಎಚ್ಚರಿಸಿದ್ದಾರೆ.

Share this article