ರಾಷ್ಟ್ರಕವಿ ಕುವೆಂಪು ಬರಹ ಸಾರ್ವಕಾಲಿಕ ಅನ್ವಯ: ಎ.ಎಸ್‌.ಪೊನ್ನಣ್ಣ

KannadaprabhaNewsNetwork | Published : Dec 30, 2023 1:15 AM

ಸಾರಾಂಶ

ಮಡಿಕೇರಿ ಗಾಂಧಿ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನದ ಪ್ರಯುಕ್ತ ಶುಕ್ರವಾರ ವಿಶ್ವಮಾನವ ದಿನಾಚರಣೆ ನಡೆಯಿತು. ಕುವೆಂಪು ಬರಹ, ವ್ಯಕ್ತಿತ್ವ, ಕೊಡುಗೆಗಳನ್ನು ಸ್ಮರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ ರಾಷ್ಟ್ರಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಕನ್ನಡ ನಾಡು-ನುಡಿಗೆ ನೀಡಿರುವ ಕೊಡುಗೆಯನ್ನು ಪ್ರತಿಯೊಬ್ಬರೂ ತಿಳಿದುಕೊಂಡು, ನಾಡಿನ ಅಭಿವೃದ್ಧಿಗೆ ಶ್ರಮಿಸಬೇಕು. ಕುವೆಂಪು ಬರಹಗಳು ಸಾರ್ವಕಾಲಿಕ ಅನ್ವಯ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ಹಾಗೂ ಕೊಡಗು ಜಿಲ್ಲಾ ಜಾನಪದ ಪರಿಷತ್ತು ಸಹಕಾರದಲ್ಲಿ ನಗರದ ಗಾಂಧಿ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನದ ಪ್ರಯುಕ್ತ ಶುಕ್ರವಾರ ನಡೆದ ‘ವಿಶ್ವಮಾನವ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಮಾತನಾಡಿ, ಸೋಮವಾರಪೇಟೆ ಪಟ್ಟಣದ ಜಿಎಂಪಿ ಶಾಲೆಯ ಚೆನ್ನಬಸಪ್ಪ ಸಭಾಂಗಣ ಬಳಿ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆ/ ಪುತ್ಥಳಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಪುತ್ಥಳಿ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು. ಪುತ್ಥಳಿ ನಿರ್ಮಾಣ ಸಂಬಂಧ ಜಾಗವು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರಲಿದ್ದು, ಜಿಲ್ಲಾಡಳಿತವು ಪುತ್ಥಳಿ ನಿರ್ಮಾಣಕ್ಕೆ ಅವಕಾಶ ಮಾಡಬೇಕು ಎಂದು ಕೋರಿದರು.

‘ಪ್ರತಿಯೊಬ್ಬರೂ ಹುಟ್ಟುವಾಗ ಇಂತಹ ಸಮಾಜದಲ್ಲಿ ಹುಟ್ಟುತ್ತೇವೆ ಎಂದು ಅರ್ಜಿ ಸಲ್ಲಿಸಿರುವುದಿಲ್ಲ, ಕುವೆಂಪು ಅವರು ಹೇಳಿದಂತೆ ಹುಟ್ಟುತ್ತ ವಿಶ್ವಮಾನವರಾಗಿ, ಬೆಳೆಯುತ್ತಾ ಅಲ್ಪ ಮಾನವರಾಗುತ್ತೇವೆ. ಆಧುನಿಕ ಯುಗದಲ್ಲಿಯೂ ಸಹ ಜಾತಿ ವ್ಯವಸ್ಥೆ ಕಡಿಮೆಯಾಗುತ್ತಿಲ್ಲ ಎಂದೆನಿಸುತ್ತದೆ ಎಂದು ಡಾ.ಮಂತರ್ ಗೌಡ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ.ಕೋರನ ಸರಸ್ವತಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ಹಲವು ಕವನ ಸಂಕಲನ, 2 ರೂಪಾಂತರಗಳು ಸೇರಿ 14 ನಾಟಕಗಳನ್ನು, 2 ಬೃಹತ್ ಕಾದಂಬರಿ, ಜೊತೆಗೆ ಒಂದು ಮಹಾಕಾವ್ಯವನ್ನು, ನೂರಾರು ಲೇಖನ, ಹಾಗೆಯೇ ‘ನೆನಪಿನದೋಣಿ’ ಹೆಸರಿನ ಆತ್ಮ ಚರಿತ್ರೆ ಬರೆದಿದ್ದಾರೆ ಎಂದು ತಿಳಿಸಿದರು. ಕುವೆಂಪು ಅವರು ರಚಿಸಿದ ಎರಡು ಮಹಾ ಕಾದಂಬರಿಗಳಾದ ‘ಕಾನೂರು ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಪ್ರಮುಖವಾಗಿವೆ. ಈ ಎರಡು ಕೃತಿಗಳು ಕನ್ನಡ ಸಾಹಿತ್ಯಕ ಮೌಲ್ಯವನ್ನು ಸಾರಿ ಹೇಳುತ್ತವೆ. ಮಲೆನಾಡಿನಲ್ಲಿ ನಡೆಯುವ ಈ ಕಥನಗಳು ಕುವೆಂಪು ಅವರ ನಿರೂಪಣಾ ಪ್ರತಿಭೆಗೆ ಶ್ರೇಷ್ಠ ಉದಾಹರಣೆಯಾಗಿದೆ ಎಂದು ವಿವರಿಸಿದರು.

ಜಗದಕವಿ, ಯುಗದಕವಿ ಕುವೆಂಪು ಅವರು ಸಾಹಿತ್ಯ, ಕವನಸಂಕಲನ, ಕಾದಂಬರಿ, ನಾಟಕ, ವಿಮರ್ಶೆಗಳು ಬರೆಯುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಅವರು ವರ್ಣಿಸಿದರು. ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಅನಂತಶಯನ ಮಾತನಾಡಿ ನೂರು ದೇವರುಗಳನ್ನು ನೂಕಾಚೆ ದೂರ ಎಂದು ಕುವೆಂಪು ಅವರು ಸಾರುವ ಮೂಲಕ ವೈಚಾರಿಕತೆಗೆ ಒತ್ತು ನೀಡಿದ್ದಾರೆ. ಕುವೆಂಪು ಅವರ ಬರಹ ಹಾಗೂ ವಿಮರ್ಶೆಗಳು ಜನಮೆಚ್ಚುಗೆಗೆ ಪಾತ್ರವಾಗಿದೆ. ಕುವೆಂಪು ಅವರು ಸಂಪ್ರದಾಯವನ್ನು ವಿರೋಧಿಸಿದರು ಸಹ, ದೈವತ್ವವನ್ನು ಹೊಂದಿದ್ದರು ಎಂದು ಹೇಳಿದರು. ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ , ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮುನಿರ್ ಅಹಮ್ಮದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎಸ್.ಎನ್.ಚಂಗಪ್ಪ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್, ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಅನಿಲ್ ಎಚ್.ಟಿ., ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್, ಒಡಿಪಿ ಸಂಸ್ಥೆಯ ಜಾಯ್ಸ್ ಮೆನೇಜಸ್ ಮತ್ತಿತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಸ್ವಾಗತಿಸಿದರು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಮತ್ತು ಪ್ರೇಮರಾಘವಯ್ಯ ನಾಡಗೀತೆ ಹಾಡಿದರು, ಮುನೀರ್ ಅಹಮ್ಮದ್ ನಿರೂಪಿಸಿದರು. ಮಣಜೂರು ಮಂಜುನಾಥ್ ವಂದಿಸಿದರು.

ಕಾರ್ಯಕ್ರಮಕ್ಕೂ ಮೊದಲು ಗಣ್ಯರು ನಗರದಲ್ಲಿರುವ ಕುವೆಂಪು ಅವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ನೆರವೇರಿಸಿದರು.

Share this article