ಭಾನುವಳ್ಳಿಯಲ್ಲಿ ರಾಯಣ್ಣ ಪುತ್ಥಳಿ ಮರು ಸ್ಥಾಪಿಸಿ: ರಾಜು ಮೌರ್ಯ

KannadaprabhaNewsNetwork | Published : Feb 27, 2024 1:38 AM

ಸಾರಾಂಶ

ಭಾನುವಳ್ಳಿ ಗ್ರಾಮದ ಲಕ್ಷ್ಮಪ್ಪ ಎಂಬವರಿಗೆ ಸೇರಿದ ಖಾಸಗಿ ಜಾಗದಲ್ಲಿ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ರಾಯಣ್ಣನ ಪುತ್ಥಳಿ ಪ್ರತಿಷ್ಠಾಪಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೊದಲ ಬಾರಿಗೆ ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿದ, ದೇಶಕ್ಕೆ ಪ್ರಾಣವನ್ನೇ ತ್ಯಾಗ ಮಾಡಿದ ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಜನಿಸಿದ ಜನ ಆ.15ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ರಾಯಣ್ಣನಿಗೆ ಬ್ರಿಟೀಷರು ಗಲ್ಲಿಗೇರಿಸಿದ ದಿನವಾದ ಜ.26ರಂದು ದೇಶ ಗಣರಾಜ್ಯವಾದಂತಹ ದಿನವಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯ ಹರಿಹರ ತಾಲೂಕು ಭಾನುವಳ್ಳಿ ಗ್ರಾಮದ ಖಾಸಗಿ ಜಾಗದಲ್ಲಿ ಪ್ರತಿಷ್ಠಾಪಿಸಿದ್ದು, ಅದನ್ನು ಅದೇ ಸ್ಥಳದಲ್ಲಿ ಮರು ಸ್ಥಾಪಿಸುವಂತೆ ಒತ್ತಾಯಿಸಿ ಹಾಲುಮತ ಮಹಾಸಭಾ ಹಾಗೂ ಹರಿಹರ ತಾಲೂಕು ಕುರುಬ ಸಮಾಜ ಬಾಂಧವರಿಂದ ಜಿಲ್ಲಾಡಳಿತ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಹಾಸಭಾದ ರಾಜ್ಯ ಸಂಚಾಲಕ ರಾಜು ಮೌರ್ಯ ಇತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮದ ಕುರುಬ ಸಮಾಜದ ಮುಖಂಡರು, ಸಮಾಜ ಕಾರ್ಯಕರ್ತರು ಭಾನುವಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಮರು ಪ್ರತಿಷ್ಠಾಪಿಸಲು ಒತ್ತಾಯಿಸಿ ಘೋಷಣೆ ಕೂಗಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರಾಜು ಮೌರ್ಯ, ಭಾನುವಳ್ಳಿ ಗ್ರಾಮದ ಲಕ್ಷ್ಮಪ್ಪ ಎಂಬವರಿಗೆ ಸೇರಿದ ಖಾಸಗಿ ಜಾಗದಲ್ಲಿ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ರಾಯಣ್ಣನ ಪುತ್ಥಳಿ ಪ್ರತಿಷ್ಠಾಪಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೊದಲ ಬಾರಿಗೆ ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿದ, ದೇಶಕ್ಕೆ ಪ್ರಾಣವನ್ನೇ ತ್ಯಾಗ ಮಾಡಿದ ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಜನಿಸಿದ ಜನ ಆ.15ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ರಾಯಣ್ಣನಿಗೆ ಬ್ರಿಟೀಷರು ಗಲ್ಲಿಗೇರಿಸಿದ ದಿನವಾದ ಜ.26ರಂದು ದೇಶ ಗಣರಾಜ್ಯವಾದಂತಹ ದಿನವಾಗಿದೆ ಎಂದರು.

ರಾಯಣ್ಣನಂತಹ ವೀರ ಪುರುಷ ಜಗತ್ತಿನಲ್ಲೇ ಅಪರೂಪ, ಇಡೀ ದೇಶದ ಹೆಮ್ಮೆಯೂ ಹೌದು. ಯುವಕರಿಗೆ ಆದರ್ಶವಾದ ಇಂತಹ ಮಹಾನ್‌ ವೀರನ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ಹೆಚ್ಚು ಪ್ರಚಾರ ಮಾಡಬೇಕಿತ್ತು. ಯುವಕರಲ್ಲಿ ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಬೇಕಿತ್ತು. ರಾಯಣ್ಣನ ಸ್ವಾತಂತ್ರ್ಯ ಉದ್ಯಾನವನ, ಪುತ್ಥಳಿ ಸ್ಥಾಪಿಸಿ, ಮುಂದಿನ ಪೀಳಿಗೆಗೆ ಪರಿಚಯಿಸಬೇಕಿತ್ತು. ಆದರೆ, ಸರ್ಕಾರಗಳು ಮಾಡದ ಕೆಲಸವನ್ನು ರಾಯಣ್ಣನ ಅಭಿಮಾನಿಗಳು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಅನ್ಯ ಸಮುದಾಯದವರು ವಿರೋಧಿಸಿದರೆಂಬ ಒಂದೇ ಕಾರಣಕ್ಕೆ ಹುತಾತ್ಮ ರಾಯಣ್ಣನ ಪುತ್ಥಳಿಯ ಭಾನುವಳ್ಳಿ ಗ್ರಾಮದಲ್ಲಿ ತೆರವುಗೊಳಿಸಲಾಗಿದೆ. ತೆರವುಗೊಳಿಸುವ ಮುನ್ನ ಗ್ರಾಪಂ ಸಾಮಾನ್ಯ ಸಭೆಯ ಅಭಿಪ್ರಾಯ, ಠರಾವು ಸಂಗ್ರಹಿಸಿ, ಕ್ರಮ ಕೈಗೊಳ್ಳಬಹುದಿತ್ತು. ಸರ್ಕಾರಿ ಜಾಗಗಳಲ್ಲಿ ಅನುಮತಿ ಪಡೆಯದೇ, ವಿವಿಧ ಹೆಸರಿನ ವೃತ್ತಗಳ ನಾಮಫಲಕಗಳು, ಮಹಾದ್ವಾರಗಳ ನಿರ್ಮಿಸಿದ್ದು, ಗ್ರಾಮದ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಆದರೆ, ಟ್ರಸ್ಟ್‌ನವರ ಖಾಸಗಿ ಸ್ಥಳದಲ್ಲಿ ಸ್ಥಾಪಿಸಿದ್ದ ಪುತ್ಥಳಿ ತೆರಗೊಳಿಸಿದ್ದು ಸ್ವಾತಂತ್ರ್ಯ ಹೋರಾಟಗಾರ, ಹುತಾತ್ಮ ಸಂಗೊಳ್ಳಿ ರಾಯಣ್ಣನವರಿಗೆ ಮಾಡಿದ ಅಪಮಾನವಾಗಿದೆ ಎಂದು ದೂರಿದರು.

ಮಹಾಸಭಾ, ಕುರುಬ ಸಮಾಜದ ಮುಖಂಡರು, ಭಾನುವಳ್ಳಿ ಗ್ರಾಮದ ಹಾಲುಮತ ಸಮಾಜದವರು ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿದರು.

..................

ಭಾನುವಳ್ಳಿ ಗ್ರಾಮದ ಎಲ್ಲಾ ಸಮಾಜದವರ ಸೌಹಾರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಲ್ಲಿನ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯು ದಿಟ್ಟ ನಿರ್ಧಾರ ಕೈಗೊಂಡಿದೆ. ಅಲ್ಲಿನ ಗ್ರಾಮ ಪಂಚಾಯಿತಿ ಕೈಗೊಂಡ ಠರಾವಿಗೆ ಜಿಲ್ಲಾಡಳಿತವು ಮಾನ್ಯತೆ ನೀಡುವ ಮೂಲಕ ಲೋಪದೋಷ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.

ರಾಜು ಮೌರ್ಯ, ಕುರುಬ ಸಮಾಜದ ಮುಖಂಡ

Share this article