ಯಲಬುರ್ಗಾ : ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಲಿ ಎನ್ನುವ ಕಳಕಳಿಯಿಂದ ರಾಜ್ಯದಲ್ಲೇ ಅತೀ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಈ ತಾಲೂಕಿಗೆ ಮಂಜೂರು ಮಾಡಿಸಿದ ಕೀರ್ತಿ ರಾಯರಡ್ಡಿ ಅವರಿಗೆ ಸಲ್ಲುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ದಮ್ಮೂರ ಗ್ರಾಮದಲ್ಲಿ ಬುಧವಾರ ನೂತನ ಸರ್ಕಾರಿ ಪ್ರೌಢಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ರಾಯರಡ್ಡಿಯವರು ಶಿಕ್ಷಣದ ಬಗ್ಗೆ ಸಾಕಷ್ಟು ಕಾಳಜಿ ಇಟ್ಟುಕೊಂಡುವರು. ಈಗಾಗಲೇ ಆರು ಜೂನಿಯರ್ ಕಾಲೇಜು, ಐದು ಪ್ರೌಢಶಾಲೆಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ, ನಮ್ಮ ಶಾಲೆಯಲ್ಲಿ ಇರುವಂತಹ ಶಿಕ್ಷಕರು ಯಾವ ಖಾಸಗಿ ಶಾಲೆಯಲ್ಲೂ ಇಲ್ಲ. ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಧನ್ಯರು ಎಂದರು.
ಮಾಜಿ ಸಚಿವ ಬಸವರಾಜ ರಾಯರಡ್ಡಿಯವರು ಈ ಕ್ಷೇತ್ರದಲ್ಲಿ ಎಂಜಿನಿಯರಿಂಗ್, ನವೋದಯ, ಮೊರಾರ್ಜಿ ವಸತಿ ಶಾಲೆಗಳು, ಪಾಲಿಟೆಕ್ನಿಕ್, ಐಟಿಐ ಕಾಲೇಜು, ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಿದ್ದಾರೆ. ಅಂತವರ ಮುಂದೆ ನಾನಿನ್ನೂ ಕಿರಿಯ ಸಚಿವ, ಅವರ ಮಾರ್ಗದರ್ಶನ ಪಡೆದು ಇನ್ನೂ ಎತ್ತರ ಸ್ಥಾನಕ್ಕೆ ಬೆಳೆಯುತ್ತೇನೆ ಎಂದರು.
ರಾಜ್ಯದಲ್ಲಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಿರಲೆಂದು ಈಗಾಗಲೇ ಒಟ್ಟು ೧೨ ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಇನ್ನೂ ೧೦ ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು. ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ರಾಜ್ಯದ ರೈತರಿಗೆ ಉಚಿತ ವಿದ್ಯುತ್ ಹಾಗೂ ಗ್ರಾಮೀಣ ಕೃಪಾಂಕದ ಮೇಲೆ ಸಾಕಷ್ಟು ಶಿಕ್ಷಕರನ್ನು ನೇಮಿಸಿಕೊಂಡು ಅದೆಷ್ಟೋ ಜನರಿಗೆ ಬದುಕನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜನಕಲ್ಯಾಣಕ್ಕಾಗಿ ಜಾರಿಗೊಳಿಸಿರುವುದು ಐತಿಹಾಸಿಕ ದಾಖಲೆಯಾಗಿದೆ. ಇನ್ನೂ ಕ್ಷೇತ್ರದಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ, ೧೫ ಹೊಸ ಬಸ್ ನಿಲ್ದಾಣ, ಆರೋಗ್ಯ ಪ್ರಾಥಮಿಕ ಕೇಂದ್ರ, ಹೊಸ ಕೆರೆ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗಿದೆ. ಜನರು ಭೂಮಿಯನ್ನು ಕೊಡುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಈ ಸಂದರ್ಭ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಇಒ ಸಂತೋಷ ಪಾಟೀಲ, ಉಪನಿರ್ದೇಶಕ ಶ್ರೀಶೈಲ್ ಬಿರಾದಾರ, ತಹಸೀಲ್ದಾರ ಬಸವರಾಜ ತೆನ್ನಳ್ಳಿ, ಬಿಇಒ ಕೆ.ಟಿ. ನಿಂಗಪ್ಪ ಹಾಗೂ ಮುಖಂಡರಾದ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಪಾಟೀಲ, ವೀರನಗೌಡ ಬಳೋಟಗಿ, ಯಂಕಣ್ಣ ಯರಾಶಿ, ಕೆರಿಬಸಪ್ಪ ನಿಡಗುಂದಿ, ಅಡಿವೆಪ್ಪ ಭಾವಿಮನಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಮತ್ತಿತರರು ಇದ್ದರು.