ಲೋಕಸಭೆ ಚುನಾವಣೆಗೆ ಸನ್ನದ್ಧ

KannadaprabhaNewsNetwork | Published : Mar 19, 2024 12:50 AM

ಸಾರಾಂಶ

ತೇರದಾಳ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು ೨,೩೨,೮೬೯ ಮತದಾರರಿದ್ದಾರೆ. ೧,೧೫೬೫೪ ಪುರುಷ, ೧೧೭೨೦೩ ಮಹಿಳಾ ಮತ್ತು ೧೨ ತೃತೀಯ ಲಿಂಗಿಗಳು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಪ್ರಪಂಚದಲ್ಲೇ 98 ಕೋಟಿಯಷ್ಟು ಅತೀ ಹೆಚ್ಚು ಮತದಾರರನ್ನು ಹೊಂದಿರುವ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯ 2024ರ ಲೋಕಸಭೆ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಚುನಾವಣಾ ಆಯೋಗ ಸಜ್ಜಾಗಿದೆ. ಅದರಂತೆ ಬಾಗಲಕೋಟೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ, ಆಯೋಗದ ನಿಯಮಗಳನ್ವಯ ಚುನಾವಣೆ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ಸಾಜೀದ್ ಅಹಮದ್ ಮುಲ್ಲಾ ಹೇಳಿದರು.

ರಬಕವಿ - ಬನಹಟ್ಟಿ ತಹಸೀಲ್ದಾರ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತೇರದಾಳ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು ೨,೩೨,೮೬೯ ಮತದಾರರಿದ್ದಾರೆ. ೧,೧೫೬೫೪ ಪುರುಷ, ೧೧೭೨೦೩ ಮಹಿಳಾ ಮತ್ತು ೧೨ ತೃತೀಯ ಲಿಂಗಿಗಳು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ನಗರ ಪ್ರದೇಶಗಳಲ್ಲಿ ೨೩೬ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ೧೦೬ ಮತಗಟ್ಟೆಗಳಿವೆ. ಮಹಾಲಿಂಗಪುರದ ಕೆಂಗೇರಿಮಡ್ಡಿಯಲ್ಲಿ ಹೆಚ್ಚುವರಿ ಮತಗಟ್ಟೆ ನಿರ್ಮಾಣಗೊಳ್ಳಲಿದೆ. ೨೬ ಸೂಕ್ಷ್ಮ ಮತ್ತು ೨೧೦ ಸಾಮಾನ್ಯ ಮತಗಟ್ಟೆಗಳಿವೆ ಎಂದರು.

ಅಭ್ಯರ್ಥಿಗಳಿಗೆ ಏ.೧೯ರ ವರೆಗೆ ನಾಮಪತ್ರ ಸಲ್ಲಿಕೆ ಹಾಗೂ ಏ.೨೨ರಂದು ನಾಮಪತ್ರ ವಾಪಸು ಪಡೆಯಲು ಅವಕಾಶವಿದೆ. ಮೇ.೭ರಂದು ಮತದಾನ ನಡೆಯಲಿದ್ದು, ಜೂನ್ - ೪ ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಕಳೆದ ನಾಲ್ಕು ದಿನಗಳಿಂದ ನಮ್ಮ ಅಧಿಕಾರಿಗಳಿಂದ ರಾಜಕೀಯ ಪಕ್ಷಗಳ ಜಾಹೀರಾತು ಬ್ಯಾನರ್‌, ಭಾವಚಿತ್ರಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಹೇಳಿದರು.

ಕ್ಷೇತ್ರದಲ್ಲಿ ತಾಲೂಕು ನೋಡಲ್ ಅಧಿಕಾರಿಯಾಗಿ ತಾಪಂ ಇಒ ಸಿದ್ದಪ್ಪ ಪಟ್ಟಿಹಾಳ ಕಾರ್ಯ ನಿರ್ವಹಿಸಲಿದ್ದಾರೆ. ತೇರದಾಳ 3ನೇ ಕಾಲುವೆ, ಬುದ್ನಿ, ಮಹಾಲಿಂಗಪುರ ಎಪಿಎಂಸಿ ಬಳಿ 3 ಚೆಕ್ ಪೋಸ್ಟ್‌ಗಳು ದಿನದ ೨೪ ಗಂಟೆ ಕಾರ್ಯನಿರ್ವಹಸಲಿವೆ. ೨ ಭಾಗಗಳಲ್ಲಿ ೨ ಸೂಕ್ಷ್ಮಾವಲೋಕನ ತಂಡಗಳು, ಸಂಚಾರಿ ಅಧೀಕ್ಷಕತೆಗೆ( ಫ್ಲೈಯಿಂಗ್‌ ಸ್ಕ್ವಾಡ್‌) ೬ ಸಿಬ್ಬಂದಿ ಇದ್ದಾರೆ. ಒಟ್ಟು ೧೮ ಸಿಬ್ಬಂದಿ ದಿನರಾತ್ರಿ ಕಾರ್ಯ ನಿರ್ವಹಣೆಯಲ್ಲಿದ್ದಾರೆ. ಅಭ್ಯರ್ಥಿಗಳ ಖರ್ಚು-ವೆಚ್ಚ ಅವಲೋಕನೆಗೆ ಪ್ರತ್ಯೇಕ ತಂಡವಿದೆ. ೧೮ ಜನ ವಲಯಾಧಿಕಾರಿಗಳಿದ್ದಾರೆ. ವಿಶೇಷ ತರಬೇತುದಾರರು ೧೧, ಚುನಾವಣೆ ಸಲಕರಣೆಗಳ ವಿಲೇವಾರಿಗೆ ೧೮ ಜನ ಸಿಬ್ಬಂದಿ ನಿಯೋಜಿಸಲಾಗಿದೆ. ಎಲ್ಲ ೨೩೬ ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್, ಶೌಚಾಲಯ, ರಸ್ತೆ, ರ‍್ಯಾಂಪ್, ಪೀಠೋಪಕರಣಗಳಿವೆ ಎಂದರು.

೮೫ ವಯೋಮಾನ ಮೀರಿದ ೧೪೭೧ ಜನ ಮತ್ತು ೪೧೧೪ ಜನ ವಿಕಲಚೇತನರು ಇಚ್ಛಿಸಿದಲ್ಲಿ ಮನೆಯಲ್ಲೇ ಮತದಾನ ಮಾಡುವ ಅವಕಾಶವಿದೆ. ಸರ್ಕಾರಿ ಸೇವೆಯಲ್ಲಿ ಅಗತ್ಯ ಸೇವೆಗಾಗಿ ಬಳಕೆಯಾದ ಸಿಬ್ಬಂದಿಗೆ ಆಯಾ ಇಲಾಖೆಗಳ ಮುಖ್ಯಸ್ಥರ ಧೃಢೀಕರಣ ಪತ್ರದ ಆಧಾರದಲ್ಲಿ ೩ದಿನಗಳ ಅವಧಿಯಲ್ಲಿ ಮತದಾನ ಮಾಡಲು ಅವಕಾಶವಿದೆ. ಸಖಿ, ಯುವ ಮತದಾರರು, ಮಾದರಿ ಮತಗಟ್ಟೆ, ಥೀಮ್ಸ್ ಬೇಸ್ಡ್, ಪಿಡಬ್ಲೂಡಿ ಮತಗಟ್ಟೆಗಳು ಈ ಬಾರಿ ವಿಶೇಷ ಮತಗಟ್ಟೆಗಳಾಗಿವೆ. ಕ್ಷೇತ್ರದಲ್ಲಿ ಸುಲಲಿತ ಚುನಾವಣಾ ಕಾರ್ಯ ನಡೆಯಲು ನಾಗರಿಕರು ತಮ್ಮ ಜವಾಬ್ದಾರಿ, ಮತ್ತು ಬದ್ಧತೆಯಿಂದ ಆಯೋಗದ ಸಿಬ್ಬಂದಿಗೆ ನೆರವಾಗುವಂತೆ ಸೂಚಿಸಿದರು.

ಮಾಧ್ಯಮಗೋಷ್ಠಿಯಲ್ಲಿ ತಹಸೀಲ್ದಾರ ಗಿರೀಶ ಸ್ವಾದಿ, ಸಿಪಿಐ ಸಂಜೀವ ಬಳಿಗಾರ, ಉಪತಹಶಿಲ್ದಾರ ಸದಾಶಿವ ಕಾಂಬಳೆ ಇದ್ದರು.

--------

ಬಾಕ್ಸ್ : ಸುವಿಧಾ: ಸುವಿದಾ ತತ್ರಾಂಶ ಬಳಸಿ ಅಭ್ಯರ್ಥಿಗಳು ತಮ್ಮ ಪ್ರಚಾರಕ್ಕೆ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಿದೆ. ದೂರು ನಿರ್ವಹಣೆಗೆ ೧೯೫೦ ಸಂಖ್ಯೆಗೆ, ಮತ್ತು ರಬಕವಿ-ಬನಹಟ್ಟಿ ತಹಸೀಲ್ದಾರ ಕಚೇರಿ ದೂರವಾಣಿ ಸಂಖ್ಯೆ ೦೮೩೫೩-೨೩೦೫೫೫ಗೆ ಅಭ್ಯರ್ಥಿಗಳು, ಸಾರ್ವಜನಿಕರು ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ. ಸಿವಿಜಿಲ್‌ ಆ್ಯಪ್‌ ಮೂಲಕ ಸಾರ್ವಜನಿಕರು ಚುನಾವಣಾ ಅವ್ಯವಹಾರಗಳ ಬಗ್ಗೆ ಆಯೋಗಕ್ಕೆ ಮಾಹಿತಿ ಸಲ್ಲಿಸಬಹುದು.

Share this article