ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ತಾಲೂಕಿನಲ್ಲಿ ಇದುವರೆಗೆ ನಡೆಸಿದ ಜನಸ್ಪಂದನಾ ಕಾರ್ಯಕ್ರಮಗಳಲ್ಲಿ ಸುಮಾರು ೪ ಸಾವಿರ ಜನ ನಿವೇಶನ ಹಾಗೂ ಮನೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಗುರುತಿಸಲಿದ್ದಾರೆ. ಚನ್ನಪಟ್ಟಣದ ಸುತ್ತಮುತ್ತ ಹೊಸ ಟೌನ್ ನಿರ್ಮಿಸಿದರೂ ಪರವಾಗಿಲ್ಲ, ಎಲ್ಲರಿಗೂ ನಿವೇಶನ, ಮನೆ ನಿರ್ಮಿಸಿಕೊಡುವ ಕೆಲಸ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದರು.ತಾಲೂಕಿನ ಭೈರಾಪಟ್ಟಣ ಗ್ರಾಮದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೋಮವಾರದವರೆಗೆ ೨೫೦೦ ಜನ ನಿವೇಶನ ಹಾಗೂ ೧೫೦೦ ಜನ ಮನೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಯಾರಿಗೆ ಮನೆ, ನಿವೇಶನ ಇಲ್ಲ ಎಂಬುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಸರ್ಕಾರಿ ಜಾಗ ಗುರುತಿಸಿ, ಅಥವಾ ಖಾಸಗಿಯವರಿಂದ ಜಮೀನು ಖರೀದಿಸಿ, ಎಲ್ಲ ಅರ್ಹರಿಗೂ ವಸತಿ ಯೋಜನೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಶೇಷ ಅನುದಾನ:ಚನ್ನಪಟ್ಟಣಕ್ಕೆ ವಿಶೇಷ ಅನುದಾನ ನೀಡುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಜೊತೆ ಚರ್ಚೆ ನಡೆಸಿದ್ದು. ಅನುದಾನ ನೀಡಲು ಅವರು ಒಪ್ಪಿಗೆ ನೀಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ವಿಶೇಷ ಅನುದಾನ ನೀಡಲಾಗುವುದು. ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವ ಕೆಲಸವಾಗಬೇಕು ಎಂಬುದನ್ನು ಪಟ್ಟಿ ಮಾಡಿ ಅನುದಾನವನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಸದುಪಯೋಗ:ನಮ್ಮ ಐದು ಗ್ಯಾರಂಟಿ ಯೋಜನೆಗಳನ್ನು ಕ್ಷೇತ್ರದ ಜನ ಉಪಯೋಗಿಸಿಕೊಳ್ಳುತ್ತಿದ್ದಾರೆ. ಮೊನ್ನೆ ಪ್ರಧಾನಮಂತ್ರಿಯವರನ್ನು ಭೇಟಿಯಾಗಿ, ಮೆಟ್ರೋ ವಿಸ್ತರಣೆ ಬಗ್ಗೆ ಮನವಿ ಮಾಡಿದೆ. ಅವರು ನೀವು ಉಚಿತ ಬಸ್ ನೀಡಿದ್ದೀರಿ, ನಮ್ಮ ಮೆಟ್ರೋಗೆ ಯಾರು ಹತ್ತುತ್ತಾರೆ ಎಂದು ಕೇಳಿದರು. ಹಾಗೆಯೇ ನಮ್ಮ ಯೋಜನೆ ಎಲ್ಲಾ ಕಡೆ ಬಳಕೆಯಾಗುತ್ತಿದೆ ಎಂದರು.
ರಾಮನಗರ ಜಿಲ್ಲೆಗೆ ೧೦೦ ಹೊಸ ಬಸ್‌ಗಳನ್ನು ಕೊಟ್ಟಿದ್ದೇವೆ. ಕ್ಷೇತ್ರದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ಬ್ಯಾರಿಕೇಡ್ ನಿರ್ಮಾಣಕ್ಕೆ ಈಗಾಗಲೇ ೬೦ ಕೋಟಿ ರು. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಮುಂದಿನ ಹಂತದಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು. ನೀರಾವರಿ ಇಲಾಖೆಯಲ್ಲಿ ೧೬೨ ಕೋಟಿ ರು. ಅನುದಾನವನ್ನು ಕ್ಷೇತ್ರಕ್ಕೆ ಕೊಟ್ಟಿದ್ದೇನೆ. ಇದುವರೆಗೂ ತಾಲೂಕಿನ ೬ ಕಡೆ ಜನಸ್ಪಂದನಾ ಸಭೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ತಾಲೂಕು ಕಚೇರಿಯಲ್ಲೂ ನಿಮ್ಮ ಅರ್ಜಿ ಸ್ವೀಕಾರ ಮಾಡುತ್ತೇವೆ. ಇಲ್ಲಿ ಅರ್ಜಿ ಸಲ್ಲಿಸಲು ಆಗದವರು ಅಲ್ಲಿ ಸಲ್ಲಿಸಿ ಎಂದರು.ಅಧಿಕಾರ ಶಾಶ್ವತವಲ್ಲ:
ನಾನು ನಿಮ್ಮ ಸೇವೆಗೆ ಬಂದಿದ್ದೇನೆ. ಚುನಾವಣೆ, ಅಧಿಕಾರ, ರಾಜಕಾರಣ ಯಾವುದೂ ಶಾಶ್ವತ ಅಲ್ಲ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಎಲ್ಲಾ ಅಧಿಕಾರಿಗಳನ್ನು ನಿಮ್ಮ ಮನೆ ಬಾಗಿಲಿಗೆ ಕರೆತಂದಿದ್ದೇನೆ. ನಮ್ಮ ಕಾರ್ಯಕ್ರಮದ ಕುರಿತು ಯಾರು ಏನೇ ಟೀಕೆ ಮಾಡಿದರೂ ತಲೆ ಕೆಡಿಸಿಕೊಳ್ಳಲ್ಲ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದರು.ನಿಮ್ಮ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ್ದೇನೆ. ಯಾರೇ ಬರಲಿ, ಯಾರೇ ಹೋಗಲಿ. ನಾನು ನಿಮ್ಮ ಜಿಲ್ಲೆಯ ಮನೆಮಗ. ನಿಮ್ಮ ಸೇವೆಗೆ ನಮ್ಮ ಮನೆ ಬಾಗಿಲು ಸದಾ ತೆರೆದಿರುತ್ತದೆ. ನೀವು ಯಾವಾಗ ಬೇಕಾದರೂ ಬರಬಹುದು. ನನಗೆ ನೀವು, ನಿಮಗೆ ನಾನು, ಇದೇ ಶಾಶ್ವತ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಸದಾ ನನ್ನ ಮೇಲೆ ಇರಲಿ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಪುಟ್ಟಣ್ಣ, ಮಾಜಿ ಶಾಸಕ ಅಶ್ವತ್ಥ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ , ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್ ಇತರರು ಇದ್ದರು.ಮುಖಂಡರು ಬೇರೆಯವರಿಗೆ ಅವಕಾಶ ಮಾಡಿಕೊಡಿ:
ಇನ್ನು ಮುಂದೆ ನನಗೆ ದೊಡ್ಡ ಹಾರಗಳನ್ನು ಹಾಕಬೇಡಿ. ಜನಸ್ಪಂದನ ಸಭೆಯಲ್ಲಿ ನಾನು ಜನರ ಅಹವಾಲು ಆಲಿಸುವಾಗ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ನಮ್ಮ ಸುತ್ತ ಸುತ್ತುವುದನ್ನು ಬಿಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದರು.ನಾನು ಜನರ ಬಳಿ ಅರ್ಜಿ ಸ್ವೀಕರಿಸುವಾಗ ಯಾರೂ ನನ್ನ ಹಿಂದೆ ಬರಬೇಡಿ. ಜಾಸ್ತಿ ಪೊಲೀಸರು ಸಹ ಬೇಡ. ಒಂದಿಬ್ಬರು ಅಧಿಕಾರಿಗಳನ್ನು ಹೊರತುಪಡಿಸಿ ಎಲ್ಲರೂ ನಿಮ್ಮ ನಿಮ್ಮ ಜಾಗದಲ್ಲೇ ಇರಿ ಎಂದು ತಾಕೀತು ಮಾಡಿದರು.
ಇಲ್ಲಿಗೆ ಬಂದಿರುವ ಸಾರ್ವಜನಿಕರಿಗೂ ನನ್ನನ್ನು ಭೇಟಿ ಮಾಡಬೇಕು ಎಂಬ ಆಸೆ ಇರುತ್ತದೆ. ಆದ್ದರಿಂದ ಅವರಿಗೂ ಅವಕಾಶ ಮಾಡಿಕೊಡಿ ಎಂದು ಸ್ಥಳೀಯ ಮುಖಂಡರಿಗೆ ಮನವಿ ಮಾಡಿದರು.