ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕಳೆಂಜ ಸರ್ವೆ ನಂಬರ್ 309ರಲ್ಲಿ ಅಕ್ರಮವಾಗಿ ಮನೆ ನಿರ್ಮಿಸಲಾಗಿದೆ ಎಂದು ಆರೋಪಿಸಿ ಅರಣ್ಯ ಇಲಾಖೆ ದರ್ಪ ತೋರಿದ್ದಲ್ಲದೆ, ಇದೀಗ ಜಂಟಿ ಸರ್ವೇ ನಡೆಸಿ 94 ಮನೆಗಳ ತೆರವು ಮಾಡುತ್ತೇವೆ ಎಂಬ ವದಂತಿ ಸೃಷ್ಟಿಸುತ್ತಿದೆ. ಅರಣ್ಯ ಇಲಾಖೆಯ ಸರ್ವೆಗೆ ಗರಂ ಆದ ಕ್ಷೇತ್ರದ ಶಾಸಕ ಹರೀಶ್ ಪೂಂಜ, ಕಳೆಂಜದ ಜನತೆಗೆ ಅವರ ಹಕ್ಕಿನ ಭೂಮಿ ಕೊಡಿಸುವ ಸಲುವಾಗಿ ಸುಪ್ರೀಂ ಕೋರ್ಟ್‌ವರೆಗೆ ಹೋಗುವುದಾದರೂ ನಾನು ಅದರ ಸಂಪೂರ್ಣ ಖರ್ಚು ಭರಿಸುತ್ತೇನೆ ಎಂದು ಗ್ರಾಮಸ್ಥರಿಗೆ ಆಶ್ವಾಸನೆ ನೀಡಿದರು. ಕಳೆಂಜ ಗ್ರಾಮದ ಸರ್ವೆ ನಂಬರ್ 309 ರ ಅಮ್ಮಿನಡ್ಕ ಎಂಬಲ್ಲಿ ಲೋಲಾಕ್ಷ ಮತ್ತು ಅನಂತ ಅವರು ಮನೆ ನಿರ್ಮಾಣಕ್ಕೆಂದು ತಳಪಾಯ ಗೋಡೆ ರಚಿಸಿದ್ದನ್ನು 2023ರ ಅಕ್ಟೋಬರ್ 6 ರಂದು ಕೆಡವಿದ ಪ್ರಕರಣಕ್ಕೆ ಸಂಬಂಧಿಸಿ ಅರಣ್ಯ ಇಲಾಖೆ ಸುಳ್ಳು ಸರ್ವೆ ದಾಖಲೆ ನೀಡುತ್ತಿದೆ ಎಂದು ಮಾ.11ರಂದು ಕಳೆಂಜ ಕಾಯರ್ತಡ್ಕ ಶ್ರೀ ಉಮಾಮಹೇಶ್ವರ ಶಿವಪಾರ್ವತಿ ಸಭಾ ವೇದಿಕೆಯಲ್ಲಿ 309 ಸರ್ವೇ ನಂಬರ್ ಜನವಸತಿ ಪ್ರದೇಶದ ಗೊಂದಲ ನಿವಾರಣೆ ಕುರಿತು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಬಡವರ ಜತೆ ಚೆಲ್ಲಾಟವಾಡುತ್ತಿದೆ. ಕಳೆದ ನೂರಾರು ವರ್ಷಗಳಿಂದ ವಾಸಿಸುತ್ತಿದ್ದ ಒಂದು ಬಡ ಕುಟುಂಬದ ಮನೆ ತೆರವು ಮಾಡುತ್ರಿವು ವೇಳೆ ಓರ್ವ ಕ್ಷೇತ್ರದ ಶಾಸಕನಾಗಿ ಸ್ಥಳಕ್ಕೆ ತೆರಳಿದ್ದು ತಪ್ಪೇ? ಅರಣ್ಯ ಕಾಯ್ದೆ ಪ್ರಕಾರ ಅಕ್ರಮ ಮನೆ ನಿರ್ಮಿಸಿದ್ದು ತಿಳಿದಲ್ಲಿ ಸಂಬಂಧಪಟ್ಟವರಿಗೆ ತೆರವಿಗೆ ನೋಟಿಸ್ ನೀಡಬೇಕು. ಇದು ಯಾವುದೇ ಪ್ರಕ್ರಿಯೆ ನಡೆಸದೆ ಏಕಾಏಕಿ ತೆರವುಗೊಳಿಸಿದ್ದನ್ನು ಪ್ರಶ್ನಿಸಲು ಹೋದ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳ ಮೇಲೆಯೇ ಅರಣ್ಯ ಇಲಾಖೆ ಹಲ್ಲೆ ನಡೆಸಲು ಮುಂದಾಗಿತ್ತು ಎಂದು ಶಾಸಕ ಪೂಂಜ ಹೇಳಿದರು. 309 ಸರ್ವೇ ನಂಬರ್ ನಲ್ಲಿ 8474 ಎಕರೆಯಿದೆ. ನಾವು ಅರಣ್ಯ, ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಿ ಎಂದು ಹೇಳಿದ್ದೆವು. ರೆಖ್ಯದಲ್ಲಿ 700 ಎಕರೆ ಅರಣ್ಯ ಕಂದಾಯ ಭೂಮಿಯ ಜಂಟಿ ಸರ್ವೇ ನಡೆಸಲು ಹೇಳಿ ಒಂದು ವರ್ಷವಾದರು ಆಗಿಲ್ಲ. ಆದರೆ 8474 ಎಕರೆ ಜಾಗದ ಸರ್ವೆ ನಡೆಸುವಾಗ ಆ ಭಾಗದ 94 ಮನೆಗಳಿಗೆ ಮಾಹಿತಿ ನೀಡಿಲ್ಲ? ಯಾರಿಗೂ ಹೇಳದೆ, ನೋಟಿಸ್ ನೀಡದೆ ಹೇಗೆ ಸರ್ವೆ ನಡೆಸಿದರು. ಇವರಿಗೆ 94 ಮನೆಗಳ ಮೇಲೆ ಕಾಳಜಿಯಿದ್ದಿದ್ದೇ ಆಗಿದ್ದರೆ ಗಡಿ ಗುರುತು ಮಾಡಿ ಸರ್ವೇ ನಡೆಸಬೇಕಿತ್ತು. ರಾಜಕೀಯವಾಗಿ ಶಾಸಕರ ಮೇಲೆ ಗೂಬೆ ಕೂರಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾಡಿದ ಷಡ್ಯಂತ್ರವಿದು. ಅವರು ಅರಣ್ಯ ಇಲಾಖೆಗೆ ಒತ್ತಡ ಹೇರಿ ಇಲಾಖೆಯಿಂದ ತಪ್ಪು ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ. ಒಂದು ವೇಳೆ ಅವರು ಅರಣ್ಯ ಇಲಾಖೆಗೆ ಒತ್ತಡ ಹೇರಿಲ್ಲವೆಂದಾದರೆ ಇದೇ ಉಮಾಮಹೇಶ್ವರ ದೇವಸ್ಥಾನದಲ್ಲಿ ಆಣೆ ಮಾಡಬೇಕು ಎಂದು ಶಾಸಕ ಪೂಂಜ ಆಗ್ರಹಿಸಿದರು.ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿ: ಸರ್ವೇ ನಂಬರ್ 309ರಲ್ಲಿ ಕಳೆದ ನೂರಾರು ವರ್ಷಗಳಿಂದ ವಾಸವಾಗಿದ್ದಾರೆ ಎಂಬುದಕ್ಕೆ ಅಲ್ಲಿನ ಕೃಷಿ ಸಾಕ್ಷಿ. ಆದರೆ ಅರಣ್ಯ ಇಲಾಖೆ, ಕಂದಾಯ ಅಧಿಕಾರಿಗಳು, ಸರ್ವೆ ಇಲಾಖೆಯವರನ್ನು ಕರೆಸದೆ ಸರ್ವೆ ನಡೆಸಿದ್ದೇವೆ ಎಂದು ಹೇಳುವುದನ್ನು ನಂಬಲು ಸಾಧ್ಯವಿಲ್ಲ. ಮುಂದೆ ಸರ್ವೆ ಕಾರ್ಯಕ್ಕೆ ಬಂದಾಗ ನನ್ನನ್ನು ಕರೆಯಿರಿ ನಾನು ಬರುತ್ತೇನೆ, ನಮ್ಮ ಸಮಕ್ಷಮದಲ್ಲಿ ಸರ್ವೇ ನಡೆಯಲಿ ಎಂದ ಶಾಸಕ ಪೂಂಜ ಗ್ರಾಮಸ್ಥರಿಗೆ ಹೇಳಿದರು. ಸಂತ್ರಸ್ತರೆಲ್ಲರು ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ನೀಡಬೇಕು ಎಂದು ಪಂಚಾಯತ್ ಪಿಡಿಒ ಅವರ ಮುಖೇನ ಅರ್ಜಿ ಸಲ್ಲಿಸೋಣ. ಎಲ್ಲರೂ ಅರ್ಜಿ ನೀಡಬೇಕು ಎಂದರು.ಪುದುವೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಯಶವಂತ್, ಪ್ರಾಥಮಿಕ ಕೃಷಿ ಸಂಘದ ಅಧ್ಯಕ್ಷ ರಮೇಶ್ ಕಾಯಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸನ್ನ, ಸದಸ್ಯರಾದ ಕುಸುಮಾ ಬಿ., ಲಿಲತಾಕ್ಷಿ ಮಮತಾ ಉಪಸ್ಥಿತರಿದ್ದರು. ಸ್ಥಳೀಯರಾದ ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯಿತಿ ಸದಸ್ಯ ಹರೀಶ್ ಕೆ.ಬಿ. ವಂದಿಸಿದರು.