ಕನ್ನಡದ ವಿಚಾರದಲ್ಲಿ ಎಷ್ಟು ಬಾರಿಯಾದ್ರೂ ಜೈಲಿಗೆ ಹೋಗಲು ಸಿದ್ಧ: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ

KannadaprabhaNewsNetwork | Published : Mar 15, 2024 1:16 AM

ಸಾರಾಂಶ

ನ್ನ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಕೊನೆವರೆಗೂ ನಾಡು ನುಡಿಗಾಗಿ ಹೋರಾಡಿ ಸಾಯುತ್ತೇನೆ. ತಲೆ ತಗ್ಗಿಸಿ ಸಾಯಲ್ಲ.

ಹರಪನಹಳ್ಳಿ: ಕನ್ನಡ ಭಾಷೆ ವಿಚಾರದಲ್ಲಿ ರಾಜಿ ಇಲ್ಲ. ಎಷ್ಟು ಬಾರಿಯಾದರೂ ಜೈಲಿಗೆ ಹೋಗಲು ಸಿದ್ಧ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದರು.ಅವರು ಪಟ್ಟಣದ ಹಳೆ ಬಸ್‌ ನಿಲ್ದಾಣದಲ್ಲಿ ಬುಧವಾರ ರಾತ್ರಿ ಕರವೇ ತಾಲೂಕು ಘಟಕದಿಂದ ಆಯೋಜಿಸಿದ್ದ ಕನ್ನಡದ ಹಬ್ಬ-2024 ಹಾಗೂ ತಮಗೆ ನೀಡಿದ ಚಳವಳಿ ಭೀಷ್ಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ನನ್ನ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಕೊನೆವರೆಗೂ ನಾಡು ನುಡಿಗಾಗಿ ಹೋರಾಡಿ ಸಾಯುತ್ತೇನೆ. ತಲೆ ತಗ್ಗಿಸಿ ಸಾಯಲ್ಲ. ಹೋರಾಟದ ಹಾದಿಯಲ್ಲಿ ಸಾಯಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ನುಡಿದರು.ಕನ್ನಡಕ್ಕಾಗಿ ಯಾವ ರಾಜಕಾರಣಿಯೂ ಜೈಲಿಗೆ ಹೋಗಿರುವ ಊದಾಹರಣೆ ಇಲ್ಲ. ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ನಾಮಕರಣ ಮಾಡಿದ್ದಾರೆ, ಆದರೆ ಬಸವಣ್ಣನವರ ವಿಚಾರಧಾರೆಗಳನ್ನು ಯಾವುದಾದರೂ ರಾಜಕಾರಣಿ ಅಳ‍ವಡಿಸಿಕೊಂಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.ಬೆಂಗಳೂರು ಭಾಷಾ ಅಲ್ಪಸಂಖ್ಯಾತರ, ಬಂಡವಾಳಶಾಹಿಗಳ ಮುಷ್ಠಿಯಲ್ಲಿದೆ. ಕನ್ನಡಿಗರ ಊರು ಬೆಂಗಳೂರು ಆಗಬೇಕು. ಕಳೆದ ಡಿ.27ರಂದು ಬಹುದೊಡ್ಡ ಬದಲಾವಣೆಯಾಯಿತು. ಬೆಂಗಳೂರು ಕನ್ನಡಿಕೀರಣವಾಗುವ ಹಾದಿಯಲ್ಲಿದೆ ಎಂದು ಹೇಳಿದರು.ಎಂ.ಪಿ. ಪ್ರಕಾಶ ಸಮಾಜಮುಖಿ ಟ್ರಸ್ಟ್‌ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ ಮಾತನಾಡಿ, ಕನ್ನಡದ ಇತಿಹಾಸವನ್ನು ಮಕ್ಕಳಿಗೆ ಹೇಳಿ ಕೊಡುವ ಕೆಲಸವಾಗಬೇಕು. ಆಂಗ್ಲ ಭಾಷೆಯ ಒತ್ತಡಿಂದ ಕನ್ನಡ ನಲುಗುತ್ತದೆ. ಇಂತಹ ದಿನಗಳಲ್ಲಿ ನಾರಾಯಣಗೌಡರಂತವರ ಅಗತ್ಯತೆ ಇದೆ ಎಂದರು. ಭಾಷೆ ಸತ್ತರೆ ಸಂಸ್ಕೃತಿ ಸತ್ತು ಹೋಗುತ್ತದೆ. ಕನ್ನಡ ಪುಸ್ತಕಗಳನ್ನು ಪ್ರತಿಯೊಬ್ಬರೂ ಓದಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಕರವೇ ತಾಲೂಕು ಘಟಕದಿಂದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರಿಗೆ ಚಳವಳಿ ಭೀಷ್ಮ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರವೇ ತಾಲೂಕು ಅಧ್ಯಕ್ಷ ಗಿರಜ್ಜಿ ನಾಗರಾಜ ಪ್ರಸ್ತಾವಿಕವಾಗಿ ಮಾತನಾಡಿದರು.ನೀಲಗುಂದ ಗುಡ್ಡದ ವಿರಕ್ತಮಠದ ಮ.ನಿ.ಪ್ರ. ಚೆನ್ನಬಸವ ಶಿವಯೋಗಿಗಳು, ವಾಲ್ಮೀಕಿ ನಗರದ ವೀರಯ್ಯಹಾಲಸ್ವಾಮಿಗಳು, ದಾವಣಗೆರೆ ಹಾಗೂ ವಿಜಯನಗರ ಕರವೇ ಜಿಲ್ಲಾದ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಎಂ.ಎಸ್. ರಾಮೇಗೌಡ, ಪಿಎಸ್‌ಐ ಶಂಭುಲಿಂಗ ಹಿರೇಮಠ, ಕಸಾಪ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಸಮಾಜ ಸೇವಕಿ ವನಜಾಕ್ಷಿ, ಕರವೇ ರಾಜ್ಯ ಪದಾಧಿಕಾರಿಗಳಾದ ವೀರಭದ್ರಪ್ಪ, ರಘುನಾಥ, ವಿನೋದ ಅಬ್ಬಿಗೇರಿ, ರಾಮಣ್ಣ, ರಾಘು, ಕೂಡ್ಲಗಿ ಕರವೇ ಅಧ್ಯಕ್ಷ ಹಾಲೇಶ, ಶ್ವೇತ, ಬಾಗಳಿ ಶಿವಕುಮಾರ, ಬಸವರಾಜ ಭಂಡಾರಿ, ಅಶೋಕ ಹಿಂದೂಸ್ಥಾನಿ, ರಾಜು, ಗಿರೀಶ, ನಾಗರಾಜ ಕಲ್ಮಠ ಉಪಸ್ಥಿತರಿದ್ದರು.

Share this article