ಸಿಂಧನೂರು: ಸರ್ಕಾರಕ್ಕೆ ಕಳೆದ ಎರಡು ದಿನಗಳ ಹಿಂದೆ ನೀಡಿರುವ ಜಾತಿ ಜನಗಣತಿಯ ವರದಿ ಅವೈಜ್ಞಾನಿಕವಾಗಿದ್ದರೆ ವೀರಶೈವ ಲಿಂಗಾಯತರು ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ಹೋರಾಟ ಮಾಡಿ ಪ್ರತಿಭಟಿಸಿರಿ. ಅದರಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡುವುದಾಗಿ ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರು ಹೇಳಿದರು.
ಮನೆ-ಮನೆಗೆ ತೆರಳಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸದೆ, ಅವೈಜ್ಞಾನಿಕವಾದ ವರದಿಯನ್ನು ಸಲ್ಲಿಸಲಾಗಿದೆ. ವೀರಶೈವ ಲಿಂಗಾಯತ ಸಮಾಜದ ಸಚಿವರು, ಶಾಸಕರು ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಬೇಕು. ಮುಖ್ಯಮಂತ್ರಿಗಳ ಬಳಿ ತಾವು ಸಹ ಬರಲು ಸಿದ್ಧರಿರುವದಾಗಿ ಹೇಳಿದರು.
ರಾಜ್ಯದಲ್ಲಿ 2 ಕೋಟಿಯಷ್ಟು ಜನಸಂಖ್ಯೆ ಇರುವ ವೀರಶೈವ ಲಿಂಗಾಯತರನ್ನು 77 ಲಕ್ಷಕ್ಕೆ ಇಳಿಸಲಾಗಿದೆ. ಜಾತಿ ಗಣತಿ ಸಮೀಕ್ಷೆ ಮಾಡುವಾಗ ಎಲ್ಲರನ್ನು ಸಂಪರ್ಕ ಮಾಡಿಲ್ಲ. ಸಿದ್ದಗಂಗಾ ಶ್ರೀಗಳೇ ಈ ವಿಚಾರವಾಗಿ ಧ್ವನಿ ಎತ್ತಿದ್ದಾರೆ. ಪುನಃ ಜಾತಿಗಣತಿ ಸಮೀಕ್ಷೆ ಮಾಡಿದರೆ ಯಾರು ಸಹ ಉಪ ಪಂಗಡಗಳನ್ನೇ ಪ್ರಧಾನವಾಗಿ ಬಳಸದೆ ಪ್ರಥಮವಾಗಿ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯ ಎಂದು ಬರೆಸಬೇಕು. ಮತ್ತು ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸೇರ್ಪಡೆಗೆ ಮುಖಂಡರು ವಿಶೇಷವಾಗಿ ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು.ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು.
ನಂತರ ನಗರದಲ್ಲಿ ರೇಣುಕಾಚಾರ್ಯರರ ಭಾವಚಿತ್ರದ ಅದ್ದೂರಿ ಮೆರವಣಿಗೆ ಮತ್ತು ಜಂಗಮ ವಟುಗಳ ಮೆರವಣಿಗೆ ನಡೆಯಿತು. ವೀರಗಾಸೆ, ಪುರವಂತಿಕೆ, ಡೊಳ್ಳು, ಹಲಗೆ, ಜಿಂಜರ್ ಮೇಳಗಳು ಮೆರವಣಿಗೆಗೆ ಕಳೆ ಕಟ್ಟಿದ್ದವು.