ದುರ್ವ್ಯಸನ ರಹಿತರಾಗಿ ಬದುಕುವುದೇ ನಿಜವಾದ ಅಭಿವೃದ್ಧಿ: ಡಾ. ಪ್ರಭುರಾಜ ನಾಯಕ

KannadaprabhaNewsNetwork | Published : Aug 4, 2024 1:19 AM

ಸಾರಾಂಶ

ಹಣ ಸಂಪಾದನೆ, ಆಸ್ತಿ ಗಳಿಕೆ, ಒಳ್ಳೆಯ ಹುದ್ದೆ ಎಲ್ಲದಕ್ಕಿಂತ ದುರ್ವ್ಯಸನ ರಹಿತರಾಗಿ, ಆರೋಗ್ಯಪೂರ್ಣವಾಗಿ ಬದುಕುವುದೇ ನಿಜವಾದ ಅಭಿವೃದ್ಧಿ.

ವ್ಯಸನ ಮುಕ್ತ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದ ಚಿಂತಕ

ಕನ್ನಡಪ್ರಭ ವಾರ್ತೆ ಕೊಪ್ಪಳ

ಹಣ ಸಂಪಾದನೆ, ಆಸ್ತಿ ಗಳಿಕೆ, ಒಳ್ಳೆಯ ಹುದ್ದೆ ಎಲ್ಲದಕ್ಕಿಂತ ದುರ್ವ್ಯಸನ ರಹಿತರಾಗಿ, ಆರೋಗ್ಯಪೂರ್ಣವಾಗಿ ಬದುಕುವುದೇ ನಿಜವಾದ ಅಭಿವೃದ್ಧಿ ಎಂದು ಚಿಂತಕ ಡಾ. ಪ್ರಭುರಾಜ್ ಕೆ. ನಾಯಕ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ಗುರುವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ವ್ಯಸನಗಳಲ್ಲಿ ಎರಡು ವಿಧ. ಒಂದು ಒಳ್ಳೆಯ, ಅಭಿವೃದ್ದಿ ಪೂರಕ ವ್ಯಸನವಾದರೆ ಇನ್ನೊಂದು ಬದುಕು, ಕುಟುಂಬ, ಸಮಾಜವನ್ನು ಹಾಳು ಮಾಡುವ ದುರ್ವ್ಯಸನ. ನಾವು ವಿದ್ಯಾವಂತರಾಗಿ, ತಿಳುವಳಿಕೆ ಉಳ್ಳವರಾಗಿ ಒಳ್ಳೆಯ ವಿಷಯಗಳನ್ನು ವ್ಯಸನಗಳನ್ನಾಗಿ ಮಾಡಿಕೊಳ್ಳಬೇಕು. ಓದುವುದು, ಹಾಡು, ನೃತ್ಯ, ಕವಿತೆ, ಕಥೆ ರಚನೆ, ಆರೋಗ್ಯವಂತ ಜೀವನ ಶೈಲಿ ರೂಢಿಸಿಕೊಳ್ಳುವುದು ಮುಂತಾದ ಇಂತಹ ವಿಷಯಗಳು ನಮಗೆ ವ್ಯಸನಗಳಾಗಬೇಕು. ಆದರೆ ಎಲ್ಲರುನ್ನೂ ಮುಖ್ಯವಾಗಿ ಯುವಕರನ್ನು ಹೆಚ್ಚಾಗಿ ಆಕರ್ಷಿಸುವ ಮಾದಕ ವಸ್ತುಗಳು, ಸಾಮಾಜಿಕ ಜಾಲತಾಣಗಳು, ಮೊಬೈಲ್ ಸಹವಾಸ ಯುವಜನರ ಬದುಕನ್ನೇ ನಾಶ ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮುನಿರಾಬಾದ್‌ನ ಐಆರ್‌ಬಿಯ ಡೆಪ್ಯೂಟಿ ಕಮಾಂಡೆಂಟ್ ರಾಧಾಕೃಷ್ಣ ಅಡಾವತ್ ಮಾತನಾಡಿ, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ. ಇತ್ತೀಚಿನ ಪ್ರಕರಣ ನೆನಪಿಸಿಕೊಳ್ಳುವುದಾದರೆ ರಾಜ್ಯವೊಂದರಲ್ಲಿ ಮಾದಕ ವಸ್ತುಗಳ ವ್ಯಸನಿಗಳಾದ ಯುವಕರು ಅವೈಜ್ಞಾನಿಕವಾಗಿ ಇಂಜೆಕ್ಷನ್ ಮೂಲಕ ಮಾದಕ ವಸ್ತು ತೆಗೆದುಕೊಂಡ ಕಾರಣ ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ಇಂತಹ ಆರೋಗ್ಯ ಸಮಸ್ಯೆಗಳು ಮಾದಕ ವ್ಯಸನಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ ಎಂದರು.

ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಪಿ.ಬಿ. ಗೌಡರ್, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿದರು.

ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಕೃಷ್ಣಮೂರ್ತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ವಯಸ್ಕರ ಶಿಕ್ಷಣ ಇಲಾಖೆಯ ವೆಂಕಟೇಶ್ ಕೊಂಕಲ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಕೊಪ್ಪಳ ಲಿಂಗಾಯತ ಮಹಾಸಭಾದ ಜಿಲ್ಲಾ ಯುವ ಘಟಕದ ಶೇಖರ ಇಂಗದಾಳ, ವಿಶ್ವಗುರು ಬಸವೇಶ್ವರ ಚಾರಿಟೇಬಲ್ ಟ್ರಸ್ಟ್‌ನ ಗುಡದಪ್ಪ ಹಡಪದ ಸೇರಿದಂತೆ ವಿವಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ನಗರದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ವಾರ್ತಾ ಇಲಾಖೆ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.

Share this article