ವರ್ಷ ಕಳೆದರೂ ಚೇತರಿಕೆಯಾಗದ ರಿಯಲ್ ಎಸ್ಟೇಟ್ ಉದ್ಯಮ

KannadaprabhaNewsNetwork | Published : Jan 12, 2025 1:20 AM

ಸಾರಾಂಶ

ದಿಢೀರನೇ ದುಡ್ಡು ಮಾಡಬಹುದು ಎಂದು ಆಸೆ ಹೊತ್ತು ಬಂದ ಯುವಕರು ಉದ್ಯಮದಲ್ಲಾಗಿರುವ ಪಲ್ಲಟದಿಂದ ಕೈ ಸುಟ್ಟುಕೊಂಡಿದ್ದಾರೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಹೊರ ರಾಜ್ಯ ಹಾಗೂ ಜಿಲ್ಲೆಗಳ ಹೂಡಿಕೆದಾರರಿಗೆ ಸ್ವರ್ಗವಾಗಿದ್ದ ನಗರ ಹಾಗೂ ಜಿಲ್ಲೆಯ ರಿಯಲ್ ಎಸ್ಟೇಟ್ ಉದ್ಯಮ ಕಳೆದ ಒಂದು ವರ್ಷದಿಂದ ಚೇತರಿಕೆ ಕಾಣದೆ ನೆಲಕಚ್ಚಿದೆ.

ದಿನದಿನಕ್ಕೆ ಕುಸಿಯುತ್ತಿರುವ ಸೈಟ್‌ಗಳ ಬೇಡಿಕೆಯಿಂದಾಗಿ ಉದ್ಯಮ ನೆಚ್ಚಿಕೊಂಡು ಬಡ್ಡಿಗೆ ಸಾಲ ತಂದು ಹೂಡಿಕೆ ಮಾಡಿದವರು ಮುಂದೇನು? ಎಂಬ ಆತಂಕದಲ್ಲಿದ್ದಾರೆ. ದಿಢೀರನೇ ದುಡ್ಡು ಮಾಡಬಹುದು ಎಂದು ಆಸೆ ಹೊತ್ತು ಬಂದ ಯುವಕರು ಉದ್ಯಮದಲ್ಲಾಗಿರುವ ಪಲ್ಲಟದಿಂದ ಕೈ ಸುಟ್ಟುಕೊಂಡಿದ್ದಾರೆ. ದುಬಾರಿ ಜಮೀನು ಖರೀದಿಸಿ ರಿಯಲ್ ಎಸ್ಟೇಟ್‌ಗೆ ಹಣ ಸುರಿದ ಹೊರ ರಾಜ್ಯಗಳ ಹೂಡಿಕೆದಾರರು ಕೋಟ್ಯಂತರ ರುಪಾಯಿ ನಷ್ಟಗೊಳ್ಳುವ ಭೀತಿಯಲ್ಲಿದ್ದಾರೆ.

ರಿಯಲ್ ಎಸ್ಟೇಟ್ ಕುಸಿತದಿಂದಾಗಿ ಕಳೆದ ಒಂದು ವರ್ಷದಿಂದ ಸೈಟ್‌ಗಳ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ಆದರೆ, ಖರೀದಿಸುವವರು ಇಲ್ಲದೇ ಕೆಲ ಲೇಔಟ್‌ಗಳಲ್ಲಿ ಕಳೆದ ಒಂದು ವರ್ಷದಿಂದ ಒಂದೇ ಒಂದು ಸೈಟ್ ಮಾರಾಟವಾಗಿಲ್ಲ ಎಂದು ಇಲ್ಲಿನ ಉದ್ಯಮಿಗಳು ಅಳಲು ತೋಡಿಕೊಳ್ಳುತ್ತಾರೆ.

ಉದ್ಯಮ ನೆಲಕಚ್ಚಿದ್ದು ಏಕೆ?:

ಕಳೆದ ಆರೇಳು ವರ್ಷಗಳಿಂದ ನಗರದಲ್ಲಿ ಭಾರೀ ಪ್ರಮಾಣದಲ್ಲಿ ತಲೆ ಎತ್ತಿದ ಲೇಔಟ್‌ಗಳು, ಕೃಷಿ ಜಮೀನುಗಳನ್ನು ಪರಿವರ್ತನೆಗೊಳಿಸಿ ಸೈಟ್‌ಗಳನ್ನಾಗಿ ಮಾರಾಟಕ್ಕೆ ಮುಂದಾಗಿರುವುದು, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬರುತ್ತಿರುವ ಉದ್ಯಮಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಹಾಗೂ ಜನಸಂಖ್ಯೆಗೆ ಮೀರಿ ಬೆಳೆದ ಲೇಔಟ್‌ಗಳ ನಿರ್ಮಾಣ ಉದ್ಯಮ ನೆಲಕಚ್ಚಲು ಪ್ರಮುಖ ಕಾರಣ ಎನ್ನಲಾಗಿದೆ.

ರಿಯಲ್ ಎಸ್ಟೇಟ್ ವಿಸ್ತಾರಗೊಳ್ಳುತ್ತಿದ್ದಂತೆಯೇ ನಗರ ಹೊರವಲಯದ 10 ಕಿ.ಮೀ ವ್ಯಾಪ್ತಿಯೊಳಗಿನ ಕೃಷಿ ಜಮೀನುಗಳಿಗೆ ಇದ್ದಕ್ಕಿದ್ದಂತೆಯೇ ಭಾರೀ ಬೇಡಿಕೆ ಬರುತ್ತಿದ್ದಂತೆಯೇ ಅನೇಕ ರೈತಾಪಿ ಕುಟುಂಬಗಳು ಕೃಷಿ ಚಟುವಟಿಕೆಯಿಂದ ದೂರ ಉಳಿದು ಪಾಲುದಾರಿಕೆಯಲ್ಲಿ ಲೇಔಟ್ ನಿರ್ಮಾಣಕ್ಕೆ ಮುಂದಾದರು. ಬರೀ ಆರೇಳು ವರ್ಷದ ಹಿಂದೆ ಎಕರೆಗೆ ₹30 ರಿಂದ ₹40 ಲಕ್ಷಕ್ಕೆ ಮಾರಾಟವಾಗುತ್ತಿದ್ದ ಕೃಷಿ ಭೂಮಿಗಳು ₹3ರಿಂದ ₹4 ಕೋಟಿಗೆ ಬೆಲೆ ಕುದುರಿಸಿಕೊಂಡವು. ಈ ಪರಿಯ ಕೃಷಿ ಭೂಮಿಯ ಬೇಡಿಕೆ, ನಗರ ಹೊರವಲಯದ ಬಹುತೇಕ ಜಮೀನುಗಳು ಲೇಔಟ್‌ಗಳಾಗಿ ಬದಲಾಗುವಂತಾಯಿತು.

ಕಪ್ಪುಹಣ ಹೊಂದಿರುವವರು, ನೆರೆಯ ಆಂಧ್ರಪ್ರದೇಶದ ಅನೇಕ ಉದ್ಯಮಿಗಳು ಬಳ್ಳಾರಿಯ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿದರು. ದಿನದಿನಕ್ಕೆ ಲೇಔಟ್‌ಗಳು ಹೆಚ್ಚಾದವೇ ವಿನಃ ಖರೀದಿಸುವವರ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳ ಕಂಡು ಬರಲಿಲ್ಲ. ಇದು ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮವನ್ನು ತತ್ತರಿಸುವಂತೆ ಮಾಡಿದೆ.

ಬಳ್ಳಾರಿಯಲ್ಲಿ ನಿತ್ಯ 60 ನಿವೇಶನ ನೋಂದಣಿ:

ಕಳೆದ ವರ್ಷ ಜನವರಿಯಲ್ಲಿ ನಿತ್ಯ 120ರಿಂದ 130 ರಷ್ಟು ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಆಸ್ತಿ ನೋಂದಣಿಯಾಗುತ್ತಿದ್ದವು. ಈ ಪೈಕಿ ಶೇ.35ರಷ್ಟು ಕುಟುಂಬ ಪಾಲುದಾರಿಕೆ, ಕರಾರುಪತ್ರ, ಅಡಮಾನಪತ್ರ, ದಾನಪತ್ರ ಮತ್ತಿತರ ನೋಂದಣಿಗೊಳ್ಳುತ್ತಿದ್ದವು. ಇನ್ನುಳಿದ ಶೇ.65ರಷ್ಟು ನಿವೇಶಗಳ ನೋಂದಣಿಯಾಗುತ್ತಿದ್ದವು. ಆದರೆ, ಇದೀಗ ಬಳ್ಳಾರಿಯಲ್ಲಿ ನಿತ್ಯ ಸರಿಸುಮಾರು 100 ಆಸ್ತಿಗಳ ನೋಂದಣಿಯಾಗುತ್ತಿದ್ದು, ಇದರಲ್ಲಿ ಶೇ.40ರಷ್ಟು ಮಾತ್ರ ನಿವೇಶನಗಳ ನೋಂದಣಿ ಆಗುತ್ತಿವೆ. ನೋಂದಣಿ ಇಲಾಖೆಯ ಮಾಹಿತಿಯ ಪ್ರಕಾರ ಬಳ್ಳಾರಿ ನಗರದಿಂದ 5 ಕಿ.ಮೀ ವ್ಯಾಪ್ತಿಯೊಳಗಿನ ಸೈಟ್‌ಗಳು ಮಾತ್ರ ನೋಂದಣಿಯಾಗುತ್ತಿದ್ದು, ದೂರ ಪ್ರದೇಶದ ಸೈಟ್‌ಗಳನ್ನು ಕೇಳುವವರಿಲ್ಲ.

ತಾಳೂರು ರಸ್ತೆ, ಕಪ್ಪಗಲ್ ರಸ್ತೆ, ಸಂಗನಕಲ್ಲು ರಸ್ತೆಯಲ್ಲಿನ ಐದಾರು ಕಿ.ಮೀ ಒಳಗಿನ ಸೈಟ್‌ಗಳಿಗೆ ಬೇಡಿಕೆಯಿದೆ. ನಗರದಿಂದ 10ರಿಂದ 12 ಕಿ.ಮೀ ದೂರದವರೆಗೆ ಲೇಔಟ್ ನಿರ್ಮಿಸಿದವರು ಖರೀದಿದಾರರಿಲ್ಲದೆ ಒದ್ದಾಡುತ್ತಿದ್ದಾರೆ.

ಬಳ್ಳಾರಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಸಂಕಷ್ಟದಲ್ಲಿದೆ. ಭಾರೀ ಪ್ರಮಾಣದ ಹಣ ಹೂಡಿಕೆ ಮಾಡಿದವರು ಬಡ್ಡಿ ಕಟ್ಟಲಾಗದ ಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಸೈಟ್‌ಗಳಿಗೆ ಬೇಡಿಕೆಯಿಲ್ಲ ಎನ್ನುತ್ತಾರೆ ರಿಯಲ್ ಎಸ್ಟೇಟ್ ಉದ್ಯಮಿ ಕಿಶನ್ ರೆಡ್ಡಿ.

Share this article