ಮಾಧ್ಯಮ ಸ್ವತಂತ್ರವಾಗಿದ್ದರೆ ಮಾತ್ರ ನೈಜ ಸುದ್ದಿ ಲಭ್ಯ: ರೆಡ್ಡಿ

KannadaprabhaNewsNetwork | Published : Aug 4, 2024 1:23 AM

ಸಾರಾಂಶ

ಯಾವುದೇ ಸಚಿವರು ಅಥವಾ ಗಣ್ಯ ವ್ಯಕ್ತಿಗಳನ್ನು ಸಮಾಜವು ಗುರುತಿಸಬೇಕೆಂದರೆ ಅವರ ಪಿಆರ್‌ ಬಹಳ ಮುಖ್ಯ ಎಂದು ಸಚಿವ ರಾಮಲಿಂಗಾರಡ್ಡಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸದ್ಯದ ದಿನಮಾನದಲ್ಲಿ ಯಾವುದೇ ಸಚಿವರು ಅಥವಾ ಗಣ್ಯ ವ್ಯಕ್ತಿಗಳ ಕೆಲಸವನ್ನು ಜನರು ಗುರುತಿಸಬೇಕೆಂದರೆ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ನೀಡುವ ಪ್ರಚಾರ ಪ್ರಮುಖ ಪಾತ್ರವಹಿಸುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ವತಿಯಿಂದ ಸಚಿವಾಲಯ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಸಂವಹನ ಪ್ರಶಸ್ತಿ‌ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸದ್ಯದ ದಿನಮಾನದಲ್ಲಿ ಸಾರ್ವಜನಿಕ ಸಂಪರ್ಕ ಕ್ಷೇತ್ರವು ಎಲ್ಲ ವಲಯಗಳಲ್ಲೂ ಅತಿ ಪ್ರಮುಖ ಅಂಗವಾಗಿ ಗುರುತಿಸಿಕೊಂಡಿದೆ. ಯಾವುದೇ ಸಚಿವರು ಅಥವಾ ಗಣ್ಯ ವ್ಯಕ್ತಿಗಳನ್ನು ಸಮಾಜವು ಗುರುತಿಸಬೇಕೆಂದರೆ ಅವರ ಪಿಆರ್‌ ಬಹಳ ಮುಖ್ಯ. ಅದರ ಜತೆಗೆ ಮಾಧ್ಯಮಗಳಲ್ಲಿ ಅವರ ಬಗ್ಗೆ ಪ್ರಕಟವಾಗುವ ಮತ್ತು ಬಿತ್ತರಗೊಳ್ಳುವ ಸುದ್ದಿಗಳೂ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ನಿರ್ಭೀತಿಯಿಂದ ಕೆಲಸ ಮಾಡುತ್ತಿಲ್ಲ ಎಂಬ ಅಭಿಪ್ರಾಯವಿದೆ. ಮಾಧ್ಯಮಗಳು ಸ್ವತಂತ್ರವಾಗಿ ಕೆಲಸ ಮಾಡಿದರೆ ಮಾತ್ರ ನೈಜ ಸುದ್ದಿಗಳು, ಪಕ್ಷಪಾತ ರಹಿತ ಸುದ್ದಿಗಳು ಸಮಾಜಕ್ಕೆ ದೊರೆಯುತ್ತದೆ ಎಂದರು.

ಈ ಸಂದರ್ಭದಲ್ಲಿ ವಿಜಯ ಕರ್ನಾಟಕದ ಸಂಪಾದಕರಾದ ಸುದರ್ಶನ ಚನ್ನಂಗಿಹಳ್ಳಿ, ಸುವರ್ಣ ನ್ಯೂಸ್‌ನ ಹಿರಿಯ ಪತ್ರಕರ್ತೆ ಎಂ.ಜಿ.ರಜಿನಿ, ಸಾರ್ವಜನಿಕ ಸಂಪರ್ಕ ಇಲಾಖೆ ನಿವೃತ್ತ ನಿರ್ದೇಶಕ ಡಿ.ಪಿ.ಮುರುಳಿಧರ್‌, ಬಿ.ಎಸ್‌.ಸತೀಶ್‌ಕುಮಾರ್‌, ಎಸ್‌. ಶ್ಯಾಮ್‌, ಬೆಂಗಳೂರು ವಿವಿ ಸಹಾಯಕ ಉಪನ್ಯಾಸಕಿ ಡಾ. ರಾಜೇಶ್ವರಿ ತಾರೇಶ್‌, ಕರ್ನಾಟಕ ಮಾಧ್ಯಮ ಸಮಿತಿ ಅಧ್ಯಕ್ಷ ಅಲ್ವಿನ್‌ ಮೆಂಡೋಂಕ, ಪಿಆರ್‌ಒ ರಾವಣನ್‌ ರಾಘವೇಂದ್ರ, ಕಲಾವಿದ ಡಾ. ಸಂದೇಶ್‌ ನಾಗರಾಜ್‌, ನಿರ್ಮಾಪಕಿ ರಮ್ಯಾ ಜೋಶಿ, ಬಿಬಿಎಂಪಿ ಕಲೆ ಮತ್ತು ಕರಕುಶಲ ಕಾರ್ಮಿಕ ಸಂಘದ ಅಧ್ಯಕ್ಷ ಎಸ್‌. ಕವಿತಾ, ಯುವಬಲ ಜಾಗೃತಿ ಪರಿಷತ್‌ನ ಅಧ್ಯಕ್ಷೆ ಪ್ರಾಚಿ ಗೌಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನ್ಯಾ. ಡಾ। ಎಚ್.ಎಸ್‌.ಪ್ರಭಾಕರ ಶಾಸ್ತ್ರಿ, ಕೊಪ್ಪಳ ವಿವಿ ಕುಲಪತಿ ಡಾ। ಬಿ.ಕೆ.ರವಿ, ಪಿಆರ್‌ಸಿಐ ಸಂಸ್ಥಾಪಕ ಜಯರಾಮ್‌, ಬೆಂಗಳೂರು ವಿವಿ ಕುಲಪತಿ ವೇಣುಗೋಪಾಲ್‌, ರಾಜ್ಯ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ಉಪಾಧ್ಯಕ್ಷೆ ಡಾ। ಟಿ.ಎಸ್‌.ಲತಾ ಇದ್ದರು.

Share this article