ಭಜನೆಯಿಂದ ಭಗವಂತನ ಸಾಕ್ಷಾತ್ಕಾರ: ಪ್ರೋಮೊದಿನಿ ಕುಲಕರ್ಣಿ

KannadaprabhaNewsNetwork | Published : Jan 31, 2024 2:17 AM

ಸಾರಾಂಶ

ಬೀದರ್‌ನಲ್ಲಿ ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು ಬೀದರ್ ವತಿಯಿಂದ ನಡೆದ ಮನೆ ಮನೆಗೆ ದಾಸ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಮಧ್ವ ಭಜನಾ ಮಂಡಳಿಯ ಅಧ್ಯಕ್ಷೆ ಪ್ರೋಮೊದಿನಿ ಕುಲಕರ್ಣಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಹರಿದಾಸರು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕವಾಗಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರ ಸಂದೇಶಗಳು ಸಂಗೀತದ ರೂಪದಲ್ಲಿ ನೀತಿ ಬೋಧನೆಗಳನ್ನು ಸಾಮಾನ್ಯ ಜನರ ಹೃದಯಕ್ಕೆ ತಲುಪಿಸಿ, ಜೀವನ ಬೆಳಗಿಸಿದ್ದಾರೆ ಎಂದು ಮಧ್ವ ಭಜನಾ ಮಂಡಳಿಯ ಅಧ್ಯಕ್ಷೆ ಪ್ರೋಮೊದಿನಿ ಕುಲಕರ್ಣಿ ನುಡಿದರು.

ನಗರದ ಕರೋಡಿಮಲ್ ಬಡಾವಣೆಲ್ಲಿರುವ ಪ್ರಿಯಾ ಲಂಜವಾಡಕರ್ ಅವರ ನಿವಾಸದಲ್ಲಿ ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು ಬೀದರ್ ವತಿಯಿಂದ ಮನೆ ಮನೆಗೆ ದಾಸ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪುರಂದರದಾಸರು-ಕನಕದಾಸರು ಭಜನೆಯಿಂದ ಭಗವಂತನನ್ನು ಸಾಕ್ಷಾತ್ಕಾರಗೊಳಿಸಿಕೊಂಡಿದ್ದಲ್ಲದೇ, ಭಜನೆ ಮತ್ತು ನಿರ್ಮಲ ಭಕ್ತಿ ಮೂಲಕ ಭಗವಂತನನ್ನು ಒಲಿಸಿಕೊಳ್ಳುವ ಸುಲಭ ಮಾರ್ಗ ತಿಳಿಸಿಕೊಟ್ಟಿದ್ದಾರೆ ಎಂದರು.

ನಗರದ ಎನ್.ಕೆ ಜಾಬಶೆಟ್ಟಿ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಚನ್ನಬಸವಣ್ಣ ಮಾಶಳಕರ್ ಅವರು ವಿಜ್ಞಾನ ದೃಷ್ಟಿಯಲ್ಲಿ ಸಂಕೀರ್ತನೆ ಮತ್ತು ಭಜನೆಯ ಮಹತ್ವ ಕುರಿತು ಉಪನ್ಯಾಸ ನೀಡಿ, ಮಧ್ಯಕಾಲಿನ ಭಕ್ತಿಯುಗದಲ್ಲಿ ಶೈವ ಮತ್ತು ವೈಷ್ಣವ ಪಂಥಗಳೆರಡೂ ಭಜನೆಯ ಪರಂಪರೆಯನ್ನು ಹುಟ್ಟು ಹಾಕಿದರು. ದಾಸರು ಈ ಪರಂಪರೆಯ ಭಜನೆಗಳಿಗೆ ತಾತ್ವಿಕ ರೂಪವೊಂದನ್ನು ಕೊಡುವಲ್ಲಿ ಸಮರ್ಥರಾದರು. ಭಜನೆಯಿಂದ ಆಧ್ಯಾತ್ಮಿಕ ಭಾವನೆ ಬೆಳೆಯುದಲ್ಲದೆ ಸಹಬಾಳ್ವೆ ಮತ್ತು ನೆಮ್ಮದಿ ಲಭಿಸುತ್ತದೆ ಎಂದರು.

ಸಾಹಿತಿಗಳಾದ ಪ್ರಿಯಾ ಲಂಜವಾಡಕರ್ ಅಧ್ಯಕ್ಷತೆ ವಹಿಸಿ, ಆಡು ಮುಟ್ಟದ ಸೊಪ್ಪಿಲ್ಲ, ದಾಸರು ಹೇಳದ ವಿಷಯವಿಲ್ಲ. ದಾಸರು ಹರಿ ಸಂಕೀರ್ತನೆ ಮತ್ತು ಭಜನೆ ಮೂಲಕ ಜನರಲ್ಲಿ ಲೌಕಿಕ ಮತ್ತು ಅಲೌಕಿಕ ಅರಿವು ಮೂಡಿಸಿದರಲ್ಲದೆ ಇದರಿಂದ ಅವರ ಬದುಕನಲ್ಲಿ ಸಮೃದಿ ಮೂಡಿಸಿದರು. ಮನೆ ಮನೆಗೆ ದಾಸ ಜ್ಯೋತಿ ಕಾರ್ಯಕ್ರಮ ಬಹು ಪ್ರಯೋಜನಕಾರಿಯಾಗಿದೆ. ಹರಿದಾಸರ ಆಶಯಗಳು ಜನರ ಮನೆಗೆ ಮತ್ತು ಮನಕ್ಕೆ ಮುಟ್ಟಿಸುವ ಪರಿಷತ್ತಿನ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಕನಕ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷರಾದ ಪ್ರೇಮಿಳಾ ಕೋಟಿಕರ್ ಭಾಗವಹಿಸಿದರು. ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಅಧ್ಯಕ್ಷರಾದ ಡಾ. ರವೀಂದ್ರ ಲಂಜವಾಡಕರ ಪ್ರಾಸ್ತಾವಿಕ ಮಾತನಾಡಿ, ಪರಿಷತ್ತಿನಿಂದ ಜ್ಞಾನ ಸತ್ರ, ಕಾರ್ಯಗಾರ, ಉಪನ್ಯಾಸ ಕಾರ್ಯಕ್ರಮಗಳ ಮೂಲಕ ದಾಸ ಸಾಹಿತ್ಯ ಪ್ರಚಾರ ಮಾಡಲಾಗುತ್ತಿದೆ. ಇಂದಿನಿಂದ ಮನೆ ಮನೆಗೆ ದಾಸ ಜ್ಯೋತಿ ವಿನೂತನ ಕಾರ್ಯಕ್ರಮದೊಂದಿಗೆ ಸಾಹಿತ್ಯಾಭಿಮಾನಿಗಳಿಗೆ ಈ ಸಾಹಿತ್ಯದ ಅನುಭಾವವನ್ನು ಉಣಬಡಿಸಲಾಗುವುದು ಎಂದರು.

ಮಹೇಶ ಮೈಲೂರಕರ್, ಅನಿತಾ ನಿರ್ಣಾಕರ, ಚೈತನ್ಯ ನಿರ್ಣಾಕರ, ಮಂಜುಳಾ ಕುಲಕರ್ಣಿ ಕೀರ್ತನೆ ಗಾಯನ ಮಾಡಿದರು ಹಾಗೂ ಸಾಹಿತ್ಯಾಭಿಮಾನಿಗಳಿಂದ ಸಾಮೂಹಿಕ ಭಜನೆ ಜರುಗಿತು.

ಶಿವಶರಣ ಜಾಪಾಟೆ ಸ್ವಾಗತಿಸಿದರೆ ರಾಮಶೆಟ್ಟಿ ಐನೊಳ್ಳಿ ನಿರೂಪಿಸಿದರು. ಗಣೇಶ ಬಿರಾದಾರ ವಂದಿಸಿದರು.

Share this article