ದಾರ್ಶನಿಕರ ಜೀವನ ಮೌಲ್ಯ ಅರಿತುಕೊಳ್ಳಿ

KannadaprabhaNewsNetwork | Published : Jul 4, 2024 1:15 AM

ಸಾರಾಂಶ

ದಾರ್ಶನಿಕರ ಸಾಧನೆ, ಜೀವನ ಮೌಲ್ಯ, ವಿಚಾರಗಳನ್ನು ಯುವ ಪೀಳಿಗೆ ಅರಿತುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ದಾರ್ಶನಿಕರ ಸಾಧನೆ, ಜೀವನ ಮೌಲ್ಯ, ವಿಚಾರಗಳನ್ನು ಯುವ ಪೀಳಿಗೆ ಅರಿತುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನಾಚರಣೆ ಮತ್ತು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಶೇಷ ಉಪನ್ಯಾಸ ನೀಡಿದ ಡಾ.ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ.ವಿ.ಡಿ. ಐಹೊಳ್ಳಿ, ೧೨ನೇ ಶತಮಾನದ ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸಿಕೊಟ್ಟು, ಮುಂದಿನ ತಲೆಮಾರಿಗೆ ತಲುಪಿಸುವ ಮಹತ್ತರ ಕಾರ್ಯ ನಿರ್ವಹಿಸಿದ ದಾರ್ಶನಿಕ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಅವರ ಕಾರ್ಯ ಅನನ್ಯವಾಗಿದೆ ಎಂದರು.

ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವುದರಲ್ಲಿ ಹಳಕಟ್ಟಿ ಅವರ ಹೆಸರು ಅಜರಾಮರವಾಗಿದೆ. ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಬಿ.ಎಲ್.ಡಿ.ಇ ಸಂಸ್ಥೆ, ಸಿದ್ದೇಶ್ವರ ಬ್ಯಾಂಕನ್ನು ಸ್ಥಾಪಿಸಿದರು. ೧೯೨೬ರಲ್ಲಿಯೇ ಕನ್ನಡ ಶಾಲೆಗಳನ್ನು ಸ್ಥಾಪಿಸಿ, ಶಿಕ್ಷಣಕ್ಕಾಗಿ ಅಹರ್ನಿಶಿ ಶ್ರಮಿಸಿದರು.ಶಿವಾನುಭವ ತ್ರೈಮಾಸಿಕ ಪತ್ರಿಕೆ ಪ್ರಾರಂಭಿಸಿದ ಅವರು, ಅಮೂಲ್ಯ ವಚನ ಸಾಹಿತ್ಯ ದಾಖಲೆಗಳನ್ನು ಸಂಗ್ರಹಿಸಿ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಬಸವರಾಜ ಯಲಗಾರ, ವಿಜಯಪುರ ತಹಸೀಲ್ದಾರ್‌ ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಜಿ.ಪಂ ಸಹಾಯಕ ಕಾರ್ಯದರ್ಶಿ ಅನಸೂಯಾ ಚಲವಾದಿ, ಬೀಮರಾಯ ಜಿಗಜಿಣಗಿ, ವಿ.ಸಿ. ನಾಗಠಾಣ, ಬಿ.ಎಂ. ನೂಲವಿ, ಬಸವರಾಜ ಬೀಳಗಿ, ಅಡಿವೆಪ್ಪಾ ಸಾಲಗಲ್, ಎ.ಬಿ. ಅಂಕದ, ಎಸ್.ಜಿ. ಸುರಪೂರ, ದೇವೆಂದ್ರ ಮೇರೆಕರ್ ಮುಂತಾದವರು ಇದ್ದರು.

ಬಹುಮಾನ ವಿತರಣೆ: ಪ್ರಬಂಧ ಸ್ಪರ್ಧೆಯಲ್ಲಿ ಸಂತ ಜೋಸೆಫ್ ಶಾಲೆಯ ಅಪೂರ್ವ ಬಳಗಾರ ಪ್ರಥಮ ಸ್ಥಾನ, ಜಲನಗರದ ಗರ್ಲ್ಸ್ ಹೈಸ್ಕೂಲಿನ ಅನ್ನಪೂರ್ಣ ಪೂಜಾರಿ ದ್ವಿತೀಯ ಸ್ಥಾನ, ಕರ್ನಾಟಕ ಪಬ್ಲಿಕ್ ಶಾಲೆಯ ಕುಮಾರಿ ಸ್ನೇಹ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಸಾಕ್ಷಿ ಹಿರೇಮಠ ತಂಡದಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು. ಎಚ್.ಎ. ಮಮದಾಪೂರ ಕಾರ್ಯಕ್ರಮ ನಿರೂಪಿಸಿದರು.

Share this article