ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರ2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಹಾಲಿ ಸಂಸದ ರಮೇಶ ಜಿಗಜಿಣಗಿಗೆ ಟಿಕೆಟ್ ಘೋಷಣೆ ಮಾಡಿದ ಬೆನ್ನಲ್ಲೇ ವಿಜಯಪುರದಲ್ಲೂ ಬಂಡಾಯ ಭುಗಿಲೆದ್ದಿದೆ. ವಿಜಯಪುರ ಲೋಕಸಭೆಯ ಪ್ರಬಲ ಆಕಾಂಕ್ಷಿಯಾಗಿದ್ದ ಜಿಲ್ಲಾ ಬಿಜೆಪಿ ಮುಖಂಡ ಹಾಗೂ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ಬಾಬುರಾಜೇಂದ್ರ ನಾಯ್ಕ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ.
ಹೌದು, ಈ ಬಾರಿ ವಿಜಯಪುರದಲ್ಲಿ ಬಿಜೆಪಿಯಿಂದ ಸ್ಪರ್ಧೆಗೆ ಮೂರ್ನಾಲ್ಕು ಯುವ ಮುಖಂಡರು ಪ್ರಬಲ ಆಕಾಂಕ್ಷಿಯಾಗಿದ್ದರು. ವಿಧಾನಸಭೆ ಚುನಾವಣೆಯಂತೆಯೇ ಈ ಬಾರಿ ಲೋಕಸಭೆಯಲ್ಲೂ ಹೊಸ ಮುಖಗಳಿಗೆ ಹಾಗೂ ಯುವಕರಿಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಹೊಸ ಪ್ರಯೋಗಕ್ಕೆ ಮುಂದಾಗದ ಹೈಕಮಾಂಡ್ ಹಳೆಯ ಹುರಿಯಾಳು, ಹಾಲಿ ಸಂಸದ ರಮೇಶ ಜಿಗಜಿಣಗಿಗೆ ಮತ್ತೊಮ್ಮೆ ಟಿಕೆಟ್ ನೀಡಿದೆ. ಇದರಿಂದಾಗಿ ಕೆಲ ಆಕಾಂಕ್ಷಿಗಳಿಗೆ ನಿರಾಸೆಯಾಗಿದ್ದು, ಏನು ಮಾಡಬೇಕೆಂದು ಗೊತ್ತಾಗದೆ ಸುಮ್ಮನಾಗದೆ, ಒಳಗೊಳಗೆ ಕತ್ತಿ ಮಸೆಯುತ್ತಿದ್ದರೆ, ಜಿಲ್ಲಾ ಬಿಜೆಪಿ ಮುಖಂಡ ಹಾಗೂ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ಬಾಬುರಾಜೇಂದ್ರ ನಾಯ್ಕ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. ಪಟ್ಟಿ ಘೋಷಣೆಯಾಗುವ ಕೊನೆಯ ಕ್ಷಣದವರೆಗೂ ಪಕ್ಷದ ಹಿರಿಯ ಮುಖಂಡರು ನಾನೇ ಅಭ್ಯರ್ಥಿ ಎಂಬುದನ್ನು ಖಾತ್ರಿ ಪಡಿಸಿದ್ದರು. ಆದರೆ ಕೊನೆಯ ಘಳಿಗೆಯಲ್ಲಿ ಕೆಲ ಪಟ್ಟಬದ್ಧ ಸ್ವಾರ್ಥಿಗಳ ಹಿತಾಸಕ್ತಿಯಿಂದ ನನಗೆ ಟಿಕೆಟ್ ತಪ್ಪಿದೆ. ನನಗೆ ಅನ್ಯಾಯ ಮಾಡಿ ಹಳೇ ಅಭ್ಯರ್ಥಿಗೆ ಟಿಕೆಟ್ ನೀಡಿದ್ದನ್ನು ನಾನು ವಿರೋಧಿಸುತ್ತೇನೆ ಎಂದು ಡಾ.ಬಾಬುರಾಜೇಂದ್ರ ನಾಯ್ಕ ತಮಗಾದ ಅನ್ಯಾಯದ ಬಗ್ಗೆ "ಕನ್ನಡಪ್ರಭಕ್ಕೆ " ಮಾತನಾಡಿದ್ದಾರೆ.ಬಂಜಾರಾ ಸಮಾಜಕ್ಕೆ ಅನ್ಯಾಯ ಸಲ್ಲದು:
ಬಂಜಾರಾ ಸಮಾಜವನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ಸತತ ಮೂರು ದಶಕಗಳಿಂದ ವಿಜಯಪುರದಲ್ಲಿ ಆಗುತ್ತಿದೆ. ಬಂಜಾರಾ ಸಮಾಜದ ಯಾವುದೇ ಅಭ್ಯರ್ಥಿ ಯಾವುದೇ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸಲು ಸಿದ್ಧವಾದಾಗ ಹಲವು ರೀತಿಯಲ್ಲಿ ಆತನ ರಾಜಕೀಯ ಭವಿಷ್ಯ ಮುಗಿಸುವ ಷಡ್ಯಂತ್ರ ನಡೆಯುತ್ತಿದೆ. ಹಾಗಾಗಿ ಈ ಬಾರಿ ಅದಕ್ಕೆ ಅವಕಾಶ ಕೊಡಬಾರದು ಎಂದು ಸಮಾಜ ನಿರ್ಧರಿಸಿದೆ. ಸಮಾಜದ ಯುವಕರು, ಹಿರಿಯರು, ಪ್ರಮುಖರು, ಸಂತರು, ಬೇರೆ ಸಮಾಜದ ಪ್ರಮುಖ ಮಠಾಧೀಶರು ಸಹ ನನಗೆ ಫೋನ್ ಮಾಡಿ ಸಾಂತ್ವನ ಹೇಳಿದ್ದಾರೆ. ನಿಮ್ಮ ಬೆಂಬಲಕ್ಕೆ ನಾವಿದ್ದೀವಿ, ನಮ್ಮ ಪ್ರತಿನಿಧಿ ನೀವೇ ಆಗಬೇಕು ಎಂದು ಅವರೆಲ್ಲರೂ ಒತ್ತಾಯಿಸಿದ್ದಾರೆ. ಸಮಾಜದ ಪ್ರತಿನಿಧಿಯಾಗಿ ಅವರ ಆಸೆ ಆಕಾಂಕ್ಷೆಗಳಿಗೆ ಬೆನ್ನೆಲುಬಾಗಿ ನಿಲ್ಲಲಿದ್ದೇನೆ ಎಂದಿದ್ದಾರೆ.ಬಂಡಾಯ ಫಿಕ್ಸ್?:
ಸಮಾಜದ ಹಿರಿಯರು ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವಂತೆ ಸೂಚಿಸಿದರೆ ನಾನು ಬಿಜೆಪಿಯ ಅಭ್ಯರ್ಥಿ ವಿರುದ್ದ ಬಂಡಾಯ ಸಾರಲು ತಯಾರಿದ್ದೇನೆ. ನಿಮ್ಮ ಸೇವೆ ಮಾಡಲು, ನಿಮ್ಮ ಮಗನಾಗಿ, ನಿಮ್ಮ ಮನೆ ಬಾಗಿಲಿಗೆ ಬರಲಿದ್ದೇನೆ, ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ ಎನ್ನುವ ಮೂಲಕ ತಮ್ಮ ಸ್ಪರ್ಧೆ ಖಚಿತಪಡಿಸಿದ್ದಾರೆ.ಕ್ಷೇತ್ರ ಸುತ್ತಿದ್ದ ವೈದ್ಯ:
ತಮಗೆ ಟಿಕೆಟ್ ಸಿಗುತ್ತದೆ ಎಂದು ಭರವಸೆ ಹೊಂದಿದ್ದ ಡಾ.ಬಾಬುರಾಜೇಂದ್ರ ನಾಯ್ಕ ಕಳೆದೊಂದು ವರ್ಷದಿಂದಲೂ ಜಿಲ್ಲೆಯ ತಾಲೂಕು ಹಾಗೂ ನೂರಾರು ಹಳ್ಳಿಗಳಿಗೆ ಭೇಟಿ ನೀಡಿ, ಅಲ್ಲಿನ ಹಿರಿಯರ ಆಶೀರ್ವಾದ ಹಾಗೂ ಬೆಂಬಲ ಪಡೆದಿದ್ದರು. ಎಲ್ಲ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದ ಅವರು, ಲೋಕಸಭೆಯ ಟಿಕೆಟ್ ಸಿಕ್ಕರೆ ಗೆಲ್ಲುವ ನಿರೀಕ್ಷೆ ಹೊಂದಿದ್ದರು.ಬಿಜೆಪಿ ಬಂಡಾಯ, ಕಾಂಗ್ರೆಸ್‌ಗೆ ವರದಾನ:
ಟಿಕೆಟ್ ವಿಚಾರವಾಗಿ ಜಿಲ್ಲಾ ಬಿಜೆಪಿಯಲ್ಲಿ ಎದ್ದಿರುವ ಬಂಡಾಯದ ಅಲೆ ಈ ಬಾರಿ ಕಾಂಗ್ರೆಸ್‌ಗೆ ವರದಾನವಾಗಲಿದೆಯಾ ಎಂಬ ಚರ್ಚೆಗಳು ಶುರುವಾಗಿವೆ. ಯಾಕೆಂದರೆ ಈಗಾಗಲೇ ಆರು ಶಾಸಕರನ್ನು ಹೊಂದಿದ್ದು, ಜಿಲ್ಲೆಯ ಇಬ್ಬರು ಪ್ರಭಾವಿಗಳು ಸಚಿವ ಸ್ಥಾನ ಪಡೆಯುವ ಮೂಲಕ ಕಾಂಗ್ರೆಸ್ ಬಲಿಷ್ಠವಾಗಿದೆ. ಕಳೆದ ಐದು ಚುನಾವಣೆಯಲ್ಲಿ ಸತತವಾಗಿ ಸೋತಿರುವ ಕಾಂಗ್ರೆಸ್ ಈ ಬಾರಿ ತನ್ನ ಅಭ್ಯರ್ಥಿ ಪ್ರೊ.ರಾಜು ಆಲಗೂರ ಜಯದ ಮೂಲಕ ಖಾತೆ ತೆರೆಯಲಿದೆ ಎಂಬ ಭರವಸೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಾಗೂ ನಾಯಕರಲ್ಲಿ ಮೂಡಿದೆ.ವಿಕಸಿತ ವಿಜಯಪುರ ಆಗಬೇಕು, ಸಮಗ್ರ ವಿಜಯಪುರದ ಅಭಿವೃದ್ಧಿ ಆಗಬೇಕು ಎಂಬ ಉದ್ದೇಶದಿಂದ ಟಿಕೆಟ್ ಆಕಾಂಕ್ಷಿಯಾಗಿದೆ. ಪಕ್ಷದ ಅಭ್ಯರ್ಥಿಯ ಆಯ್ಕೆಗೆ ನನ್ನ ವಿರೋಧವಿದೆ. ಸಮಾಜ ಹಾಗೂ ಹಿರಿಯರು ಸೂಚಿಸಿದರೆ ಬಂಡಾಯವಾಗಿ ಸ್ಪರ್ಧಿಸಲು ಸಿದ್ಧವಾಗಿದ್ದೇನೆ.
-ಡಾ. ಬಾಬುರಾಜೇಂದ್ರ ನಾಯ್ಕ, ಬಿಜೆಪಿ ಟಿಕೆಟ್ ಆಕಾಂಕ್ಷಿಜಿಲ್ಲಾ ಕಾಂಗ್ರೆಸ್‌ನಲ್ಲಿರುವ ಒಗ್ಗಟ್ಟಿನ ಮಂತ್ರ ಹಾಗೂ ಪಕ್ಷ ನೀಡಿರುವ ಗ್ಯಾರಂಟಿ ಯೋಜನೆಗಳಿಂದಾಗಿ ನನ್ನ ಗೆಲುವು ಸಲೀಸಾಗಲಿದೆ. ಜೊತೆಗೆ ಈ ಬಾರಿ ಬಿಜೆಪಿಗೆ ಬಂಡಾಯದ ಬಿಸಿ ಜಿಲ್ಲೆಯಲ್ಲಷ್ಟೇ ಅಲ್ಲ, ಇಡಿ ರಾಜ್ಯಾದ್ಯಂತ ಇರುವುದರಿಂದ ಬಿಜೆಪಿಯವರ ಬಂಡವಾಳ ಜನರಿಗೆ ಗೊತ್ತಾಗಿದ್ದು, ಮತದಾರರು ಈ ಬಾರಿ ಕಾಂಗ್ರೆಸ್ ಗೆ ಬೆಂಬಲ ನೀಡಲಿದ್ದಾರೆ.-ಪ್ರೊ. ರಾಜು ಆಲಗೂರ, ಕಾಂಗ್ರೆಸ್ ಅಭ್ಯರ್ಥಿ