ಬಿಡುವು ನೀಡಿದ ಮಳೆ; ಕೃಷಿ ಚಟುವಟಿಕೆ ಬಿರುಸು

KannadaprabhaNewsNetwork | Published : Aug 4, 2024 1:15 AM

ಸಾರಾಂಶ

ಅಫಜಲ್ಪುರ ತಾಲೂಕಿನ ತೊಗರಿ ಹೊಲಗದ್ದೆಗಳಲ್ಲೀಗ ಜೀವಕಳೆ ತುಂಬಿದೆ. ಈ ಬಾರಿ ಕಾಲಕಾಲಕ್ಕೆ ರೈತರು ಬಯಸಿದಂತೆಯೇ ಮಳೆಯಿಂದಾಗಿ ಇಡೀ ತಾಲೂಕಿನಲ್ಲಿ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.

ಬಿಂದುಮಾಧವ ಮಣ್ಣೂರ

ಕನ್ನಡಪ್ರಭ ವಾರ್ತೆ ಅಫಜಲ್ಪುರ

ತಾಲೂಕಿನ ತೊಗರಿ ಹೊಲಗದ್ದೆಗಳಲ್ಲೀಗ ಜೀವಕಳೆ ತುಂಬಿದೆ. ಈ ಬಾರಿ ಕಾಲಕಾಲಕ್ಕೆ ರೈತರು ಬಯಸಿದಂತೆಯೇ ಮಳೆಯಿಂದಾಗಿ ಇಡೀ ತಾಲೂಕಿನಲ್ಲಿ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.

ತಾಲೂಕಿನಲ್ಲಿ ತೊಗರಿಯನ್ನು ಖುಷ್ಕಿ ಭೂ ಪ್ರದೇಶ 65 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು ಈ ಪೈಕಿ 50 ಸವಿರ ಹೆಕ್ಟೇರ್‌ ಬಿತ್ತೆಪೂರ್ಣಗೊಂಡಿದೆ. ಇತ್ತ ನರಾವರಿಯಲ್ಲಿಯೂ 4, 300 ಹೆಕ್ಟೇರ್‌ ಗುರಿಯಲ್ಲಿ 700 ಹೆಕ್ಟೇರ್‌ ಬಿತ್ತನೆಯಾಗಿದೆ. ಹೀಗಾಗಿ ತೊಗರಿ ಬಿತ್ತನೆ ಮಾಡಿ ರೈತ ಲಾಭದ ಲೆಕ್ಕ ಹಾಕುತ್ತಿದ್ದಾನೆ.

ರೈತರ ನಿರೀಕ್ಷೆಯಂತೆ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಮಳೆ ಬಿಡುವು ನೀಡಿದ್ದಾನೆ. ಇದು ಹೊಲದಲ್ಲ ಎಡೆ, ಕಸ ಕೀಳದು, ಔಷಧಿ ಸಿಂಪರಣೆ ಸೇರಿದಂತೆ ಕೃಷಿ ಕಾರ್ಯಕ್ಕೆ ಅನುಕೂಲವಾಗಿದೆ. ರಂಟೆ- ಕುಂಟೆ ಹೊಡೆದು ಕಳೆ ಕೀಳಲು ಅನುಕೂಲವಗಿದೆ, ಈ ವಾತಾವರಣದಲ್ಲಿ ಕೃಷಿ ಚಟುವಟಿಕೆಗಳು ಎಲ್ಲೆಡೆ ವೇಗ ಪಡೆದಿವೆ.

ಎಲ್ಲರೂ ಏಕಕಾಲಕ್ಕೆ ಕಳೆ ಕೀಳಲು ಮುಂದಾಗಿದ್ದರಿಂದ ಕೃಷಿ ಕಾರ್ಮಿಕರು ಸಿಗುತ್ತಿಲ್ಲ. ಹೀಗಾಗಿ ಟ್ರ್ಯಾಕ್ಟರ್‌ಗೆ ಮೊರೆ ಹೋಗಿದ್ದು, ತೊಗರಿ ಸಾಲುಗಳ ನಡುವೆ ಟ್ರ್ಯಾಕ್ಟರ್‌ ಚಲಿಸಿ ಎಡೆ ಹೊಡೆಸುವ ಮೂಲಕ ಕಳೆ ನಿಯಂತ್ರಿಸುತ್ತಿದ್ದೇವೆಂದು ತಾಲೂಕಿನ ಮಣ್ಣೂರ ರೈತ ಕಲ್ಲಪ್ಪ ಅಲ್ಲಾಪೂರ ಹೇಳುತ್ತಾರೆ.

ಇವರು 20 ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದಾರೆ. ಈ ಅಡೆತಡೆಗಳ ನಡುವೆಯೂ ಬೆಳೆ ಉತ್ತಮವಾಗಿರುವುದು ಅವರಿಗೆ ಖುಷಿ ತಂದಿದೆ.

ಕಳೆದ ವರ್ಷ ಬರ ಕಾಡಿದ್ದರಿಂದ ಕೈಯಲ್ಲಿ ದುಡ್ಡಿರಲಿಲ್ಲ. ಬಿತ್ತನೆಗೂ ಸಾಲ ಮಾಡಿದ್ದೆ. ಹಿಂದಿನ ವರ್ಷಗಳಂತೆಯೇ ಆಗಿದ್ದರೆ ಯಾವ ಕಾರಣಕ್ಕೂ ಹೊಲಕ್ಕೆ ಕಾಲಿಡುತ್ತಿರಲಿಲ್ಲ. ಈಗ ಬೆಳೆ ಉತ್ತಮವಾಗಿದೆ. ಮಳೆ ಸಾಥ್‌ ನೀಡಿದೆ. ಸಾಲ ಮಾಡಿ, ಆಳುಗಳ ಮೂಲಕ ಹೊಲದಲ್ಲಿನ ಕಸ ತೆಗೆಸುತ್ತಿದ್ದೇನೆ. ಈ ವರ್ಷ ತೊಗರಿ ನನ್ನ ಕೈಹಿಡಿಯುತ್ತದೆ’ ಎಂದು ಮಣ್ಣೂರ ಗ್ರಾಮದ ರೈತರಾದ ಮಹ್ಮದ ಕರೀಮ ಮಂಗಲಗಿರಿ, ಮಲಕಪ್ಪ ಕರಜಗಿ ಸಂತಸದಲ್ಲಿದ್ದಾರೆ.

ಈಗಾಗಲೇ ಸಾಕಷ್ಟು ಸಾಲ ಮಾಡಿಕೊಂಡಿರುವ ನನಗೆ ಇನ್ನಷ್ಟು ಸಾಲ ಮಾಡುವ ಶಕ್ತಿ ಇಲ್ಲ. ಹೀಗಾಗಿ ನಮ್ಮ ಕುಟುಂಬದ ಏಳೆಂಟು ಸದಸ್ಯರೇ ಮೂರ್ನಾಲ್ಕು ದಿನದಿಂದ ಹೊಲದಲ್ಲಿನ ಕಳೆ ಕೀಳುತ್ತಿದ್ದಾರೆಂದು ಮನೆ ಮಂದಿ ಕೃಷಿಯಲ್ಲಿರುವ ರಾಮ ನಗರದ ದಯಾನಂದ, ಅಣ್ಣಪ್ಪ ಬಿಜಾಪುರ, ಸಾಯಬಣ್ಣ ಕರೂಟಿ ಭೀಮಣ್ಣ ಹಡಲಗಿ ಹೇಳಿದ್ದಾರೆ.

----

ನೀರಿನ ಅಭಾವದಿಂದ ಈ ಬಾರಿ ಕಬ್ಬು ಬೆಳೆಯುವುದನ್ನು ಕಡಿಮೆ ಮಾಡಿ, ತೊಗರಿ ಮೊರೆ ಹೋಗಿದ್ದೇವೆ. ಕಳೆ ನಿಯಂತ್ರಣವೇ ಕಷ್ಟವಾಗಿದೆ, ಪಕ್ಕದ ರಾಮನಗರ, ಗ್ರಾಮದಿಂದ ಕೃಷಿ ಕಾರ್ಮಿಕರನ್ನು ಕರೆತಂದು ಕಸ ತೆಗೆಸುತ್ತಿದ್ದೇವೆ. ಇಷ್ಟಾದರೂ ತೊಗರಿ ಫಸಲು ವೈನಾಗಿದೆ. ಭೂಮಾತೆ ಕೈ ಹಿಡಿಯುವ ಭರವಸೆ ಮೂಡಿದೆ.

- ಸೇತುಮಾಧವ ಅವಧಾನಿ, ರೈತರು, ಮಣ್ಣೂರ

--------

ಬ್ಯಾರೇದವ್ರ ಹೊಲಾ ಮಾಡೇನ್ರಿ. ನಾಕೈದ್‌ ವರ್ಸದ್‌ ಮ್ಯಾಲ ಬೆಳಿ ಛಲೋ ಐತ್ರಿ. ಈ ಸಲ ಲಾಭ ಆಗತೈತಿ ಅಂತ ಅನಸತೈತ್ರಿ. ಭೂಮಿ ತಾಯಿ ಕೈ ಹಿಡಿತಾಳಂತ ನಂಬಿಕಿ ಐತಿ.

- ಸಂತೋಷ ಅಲ್ಲಾಪೂರ , ರೈತ, ಮಣ್ಣೂರ

Share this article