ಸಿದ್ದಾಪುರ: ನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಬೇಕು. ಇದರಿಂದ ಊರಿನಲ್ಲಿ ಸಂಘಟನೆಯ ಜತೆಗೆ ಅಭಿವೃದ್ಧಿಯೂ ಆಗುತ್ತದೆ. ಯಕ್ಷಗಾನವೂ ನಮ್ಮ ನಾಡಿನ ಸಂಸ್ಕೃತಿ, ಕಲೆಯನ್ನು ತಿಳಿಸುವಂತಹುದು ಎಂದು ಉದ್ಯಮಿ ಉಪೇಂದ್ರ ಪೈ ಶಿರಸಿ ತಿಳಿಸಿದರು.ತಾಲೂಕಿನ ಆಲ್ಮನೆ, ಗದ್ದೆಮನೆ ಶ್ರೀ ಗಣೇಶೋತ್ಸವ ಯುವಕ ಸಮಿತಿಯ ಸ್ನೇಹಿತರ ಸಮ್ಮಿಲನದಲ್ಲಿ ಚಪ್ಪರಮನೆ- ಆಲ್ಮನೆ ಕಿರಿಯ ಪ್ರಾಥಮಿಕ ಶಾಲಾ ಆವರಣದ ಬಾಲಗಂಗಾಧರ ತಿಲಕ್ ರಂಗವೇದಿಕೆಯಲ್ಲಿ ಆಯೋಜಿಸಿದ್ದ ೧೭ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಕಲಾವಿದರನ್ನು ಹಾಗೂ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವ ಪರಿಪಾಠ ನಮ್ಮದಾಗಬೇಕು ಎಂದರು.ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಮಾತನಾಡಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗೌರವಿಸಿರುವುದು ಶ್ಲಾಘನೀಯ. ಅದರಲ್ಲಿಯೂ ಯೋಧರರನ್ನು ಗೌರವಿಸಿರುವುದು ಸಮಯೋಚಿತವಾಗಿದೆ. ಮಕ್ಕಳಿಗೆ ಯಕ್ಷಗಾನವನ್ನು ಕಲಿಸುವ ಮೂಲಕ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಯಕ್ಷಗಾನ ಕಲಾವಿದ ಎನ್.ಜಿ. ಹೆಗಡೆ ಬೊಗರಿಮಕ್ಕಿ, ಯೋಧ ನವೀನ ರಾಮ ನಾಯ್ಕ ಶಿರಗಳ್ಳೆ, ಬಿಳಗಿಯ ಶ್ರೀರಾಮ ರೈಸ್ ಮಿಲ್ ಮಾಲೀಕ ದೇವಿದಾಸ ಎಸ್. ಪೈ ಅವರಿಗೆ ಸನ್ಮಾನ ಹಾಗೂ ಕಳೆದ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ ಸೀಮಾ ವಿನಾಯಕ ಭಟ್ಟ ಹೆಬ್ಕುಳಿ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ತಾಲೂಕು ಬಿಜೆಪಿ ಅಧ್ಯಕ್ಷ ತಿಮ್ಮಪ್ಪ ಎಂ.ಕೆ., ಬಿಳಗಿ ಗ್ರಾಪಂ ಸದಸ್ಯ ಆದರ್ಶ ಎನ್.ಪೈ, ಹರೀಶ ಎಂ. ನಾಯ್ಕ ಸರ್ನಕೈ, ಯುವಕ ಸಮಿತಿಯ ರವೀಂದ್ರ ಹೆಗಡೆ, ಗಜಾನನ ಹೆಗಡೆ, ವಿನಾಯಕ ಹೆಗಡೆ, ವಿ.ಆರ್. ಗೌಡ ಇತರರಿದ್ದರು. ನಂತರ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನದವರಿಂದ ವೀರಬರ್ಭರೀಕ ಯಕ್ಷಗಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ಸುನೀಲ ಭಂಡಾರಿ, ಸುಜನ್ ಹಾಲಾಡಿ ಸಹಕರಿಸಿದರು. ಮುಮ್ಮೇಳದಲ್ಲಿ ಉದಯ ಹೆಗಡೆ ಕಡಬಾಳ, ವಿನಯ ಬೇರೊಳ್ಳಿ, ನಿರಂಜನ ಜಾಗನಳ್ಳಿ, ಕಾರ್ತಿಕ ಕಣ್ಣಿ, ಸುಧೀರ ಉಪ್ಪೂರು, ದರ್ಶನ ಭಟ್ಟ, ಸಂತೋಷ ಕುಲಾಲ್, ಪುರಂದರ ಮೂಡ್ಕಣಿ ಅವರು ವಿವಿಧ ಪಾತ್ರ ನಿರ್ವಹಿಸಿದರು.