ಬೆಂಗಳೂರು : ಪೊಲೀಸ್ ಸಿಬ್ಬಂದಿ ವರ್ಗಾವಣೆ ಸಂಬಂಧ ಯಾವುದೇ ಶಿಫಾರಸು, ಪ್ರಭಾವಕ್ಕೆ ಅವಕಾಶವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಆಡುಗೋಡಿಯ ಸಿಎಆರ್ ಮೈದಾನದಲ್ಲಿ ಶುಕ್ರವಾರ ನಡೆದ ಮಾಸಿಕ ಕವಾಯತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಪದೋನ್ನತಿ, ವರ್ಗಾವಣೆ ಪ್ರಕ್ರಿಯೆ ಶುರುವಾಗಿದ್ದು, ಸಂಪೂರ್ಣ ಪಾರದರ್ಶಕವಾಗಿ ನಡೆಯಲಿದೆ. ಏಕರೂಪದಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಯಲಿದೆ. ವರ್ಗಾವಣೆಗೆ ಯಾವುದೇ ಶಿಫಾರಸು, ವಸೂಲಿ, ಮಧ್ಯವರ್ತಿಗಳು, ಪ್ರಭಾವದ ಅವಶ್ಯಕತೆ ಇಲ್ಲ ಎಂದರು.
ಈಗಾಗಲೇ ನಗರದಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ನಿಂದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪದೋನ್ನತಿ ಮುಗಿದಿದೆ. ಉಳಿದಂತೆ ಕಾನ್ಸ್‌ಟೇಬಲ್‌ನಿಂದ ಹೆಡ್ ಕಾನ್ಸ್‌ಟೇಬಲ್, ಹೆಡ್ ಕಾನ್ಸ್‌ಟೇಬಲ್‌ನಿಂದ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ ಪದೋನ್ನತಿ ನೀಡಲಾಗುತ್ತಿದೆ. ಅಂತೆಯೆ ಕೌನ್ಸೆಲಿಂಗ್ ಮೂಲಕ ಖಾಲಿ ಇರುವ ಹುದ್ದೆಗಳ ಆಧಾರದ ಮೇಲೆ ಸಿಬ್ಬಂದಿಗೆ ಠಾಣೆ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಹೀಗಾಗಿ ಸಿಬ್ಬಂದಿ ವರ್ಗಾವಣೆಗೆ ಅನ್ಯ ಮಾರ್ಗ ಅನುಸರಿಸದೆ ತಮ್ಮ ಕೆಲಸ ಸ್ಥಳ ಆಯ್ಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ವರ್ಗಾವಣೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ಸೇರಿ ಹಲವು ಇಲಾಖೆಗಳಲ್ಲಿ ಕೌನ್ಸೆಲಿಂಗ್‌ಗೆ ಒತ್ತು ನೀಡಿದೆ. ಹೀಗಾಗಿ ಸಿಬ್ಬಂದಿ ಬಾಹ್ಯ ಒತ್ತಡಕ್ಕೆ ಒಳಗಾಗಬಾರದು, ಕೌನ್ಸೆಲಿಂಗ್‌ನಲ್ಲಿ ನೇರವಾಗಿ ಭಾಗಿಯಾಗುವಂತೆ ತಿಳಿಸಿದರು.
ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ:
ನಗರ ಪೊಲೀಸರ ಕಾರ್ಯ ತತ್ವರತೆ ಹಾಗೂ ವೃತ್ತಿ ಕೌಶಲ್ಯದ ಬಗ್ಗೆ ಪ್ರಶಂಸಿದ ಅವರು, ಇತ್ತೀಚಿನ ಕೆಲ ಪ್ರಕರಣಗಳ ತನಿಖೆಯಲ್ಲಿ ಪೊಲೀಸರ ವೃತ್ತಿ ಕೌಶಲ್ಯದ ಬಗ್ಗೆ ಎಲ್ಲ ಕಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ಟೀಂ ವರ್ಕ್‌ನಿಂದ ಈ ರೀತಿಯ ಕೆಲಸಗಳು ಸಾಧ್ಯವಾಗುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಪರಾಧ ಪ್ರಕರಣಗಳ ಪತ್ತೆಗೆ ಹೆಚ್ಚಿನ ಒತ್ತು ನೀಡಬೇಕು. ಸ್ವತ್ತು ಕಳೆದುಕೊಂಡವರು ಹಾಗೂ ನೊಂದವರ ಕಷ್ಟಗಳಿಗೆ ಸ್ಪಂದಿಸಬೇಕು. ಪೊಲೀಸ್ ಠಾಣೆಗಳಿಗೆ ಬರುವ ಸಾರ್ವಜನಿಕರ ಜತೆಗೆ ಸಂಯಮದಿಂದ ವರ್ತಿಸಬೇಕು ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಿವಿಮಾತು ಹೇಳಿದರು.