ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜನನ ಹಾಗೂ ಮರಣ ದಿನದಿಂದ 21 ದಿನದ ಒಳಗಾಗಿ ನೋಂದಣಿ ಮಾಡುವುದು ಸಂಬಂಧಪಟ್ಟ ಅಧಿಕಾರಿ ಕರ್ತವ್ಯವಾಗಿದ್ದು ನಿಗದಿತ ಅವಧಿಯೊಳಗೆ ನೋಂದಣಿ ಮಾಡದೆ, ನಿರ್ಲಕ್ಷ್ಯ ತೋರಿ ವಿಳಂಬ ಮಾಡುವ ಅಧಿಕಾರಿಗಳನ್ನು ಅಮಾನುತುಗೊಳಿಸಿ, ಅವರ ವಿರುದ್ಧ ಇಲಾಖೆ ವಿಚಾರಣೆಗೆ ಶಿಫಾರಸ್ಸು ಮಾಡುವುದಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಾಗರಿಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜನನ-ಮರಣ ನೋಂದಣಿಗೆ ಕ್ರಮ ವಹಿಸಬೇಕು. ಯಾರೂ ಸಹ ನೋಂದಣಿಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಗೆ ಜನನ-ಮರಣ ಪ್ರಮಾಣ ಪತ್ರಗಳು ಬಹಳ ಅವಶ್ಯಕವಾಗಿವೆ. ಬಹಳಷ್ಟು ಜನರು ಪ್ರಮಾಣ ಪತ್ರಗಳನ್ನು ದೊರಕಿಸಿಕೊಡುವಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಮನವಿ ಸಲ್ಲಿಸುತ್ತಾರೆ. ಅಧಿಕಾರಿಗಳು ಸಕಾಲದಲ್ಲಿ ನೋಂದಣಿ ಮಾಡದಿದ್ದರೆ, ಸಾರ್ವಜನಿಕರು ತಹಸೀಲ್ದಾರ್ ಕಚೇರಿ ಅಥವಾ ನ್ಯಾಯಾಲಯಗಳಿಗೆ ಅಲೆದಾಡುವಂತಾಗುತ್ತದೆ. ಇದರಿಂದ ಸಮಯ ಹಾಗೂ ಹಣ ವ್ಯಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.21 ದಿನಗಳ ಬಳಿಕ ವಿಳಂಬವಾಗಿ ಜನನ ಹಾಗೂ ಮರಣ ನೋಂದಣಿಯನ್ನು ಮಾಡಿದ ಎಲ್ಲಾ ಅಧಿಕಾರಿಗಳಿಗೂ ಕಾರಣ ಕೇಳಿ ನೋಟಿಸ್ ನೀಡಬೇಕು. ಅಧಿಕಾರಿಗಳ ತಪ್ಪಿನಿಂದ ನ್ಯಾಯಾಲಯಗಳಿಗೆ ಹೋಗಿ ಪ್ರಮಾಣ ಪತ್ರ ಪಡೆದ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಯಿಂದಲೇ ವೆಚ್ಚವನ್ನು ಭರಿಸುವಂತಾಗಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿರುವುದು ಸಾಬೀತು ಆದರೆ ಅಮಾನತುಗೊಳಿಸಲು ಶಿಫಾರಸ್ಸು ಮಾಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.
ತಾಲೂಕು ಮಟ್ಟದ ನಾಗರಿಕ ನೋಂದಣಿ ಪದ್ದತಿಯ ಸಮನ್ವಯ ಸಮಿತಿ ಸಭೆಯನ್ನು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ನಡೆಸಬೇಕು. ಆದರೆ ಪ್ರಸಕ್ತ ವರ್ಷದಲ್ಲಿ ಜುಲೈ ಅಂತ್ಯದ ವೇಳೆಗೆ 6 ತಾಲೂಕಿನಿಂದ ಕೇವಲ 10 ಸಮನ್ವಯ ಸಭೆ ನಡೆಸಲಾಗಿದೆ. ಈ ಪೈಕಿ ಹೊಸದುರ್ಗ ಹಾಗೂ ಮೊಳಕಾಲ್ಮೂರು ತಾಲೂಲೂಕಿನಲ್ಲಿ ಯಾವುದೇ ಸಭೆಯನ್ನು ನಡೆಸಿಲ್ಲ. ಈ ಹಿನ್ನಲೆಯಲ್ಲಿ ಸಮನ್ವಯ ಸಮಿತಿ ಸಭೆಗಳನ್ನು ಸಮರ್ಪಕವಾಗಿ ನಡೆಸದ ಸಂಬಂಧಪಟ್ಟ ತಾಲೂಕು ಮಟ್ಟದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಶಿಸ್ತು ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗೆ ನಿರ್ದೇಶಿಸಿದರು.ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 2025ನೇ ಸಾಲಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ 1,347 ಹಾಗೂ ನಗರ ಪ್ರದೇಶದಲ್ಲಿ 14 ನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ವರೆಗೆ 11,096 ಜನನ ಹಾಗೂ 9,770 ಮರಣ ನೋಂದಣಿಯಾಗಿವೆ. 1,599 ಜನನ ಹಾಗೂ 3,186 ಮರಣ ಸೇರಿ 4,785 ನೋಂದಣಿ ಪ್ರಕರಣಗಳು 22 ದಿನದಿಂದ 365 ದಿನಕ್ಕೂ ಮೇಲ್ಪಟ್ಟು ನೋಂದಣಿಯಾಗಿವೆ ಎಂದು ಸಭೆಯಲ್ಲಿ ತಿಳಿಸಿದರು.
ಈ ವೇಳೆ ಜಿಪಂ ಉಪಕಾಯದರ್ಶಿ ಡಾ.ರಂಗಸ್ವಾಮಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಜಿಲ್ಲಾಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ.ಆನಂದ ಪ್ರಕಾಶ್, ಸಹಾಯಕ ಅಂಕಿ-ಸಂಖ್ಯೆ ಸಂಗ್ರಹಣಾಧಿಕಾರಿ ಅಶ್ವತ್ಥಾಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.