ಗದಗ: ಬಯಲಾಟ ಕಲೆಗಳು ಯಕ್ಷಗಾನದಂತೆ ವಿಶ್ವವಿಖ್ಯಾತಗೊಳ್ಳಲು ಪಠ್ಯ,ನೃತ್ಯ, ಹಾಡುಗಾರಿಕೆಯಲ್ಲಿ ಹಲವು ಬದಲಾವಣೆ ತಂದು ಶಿಸ್ತುಬದ್ಧವಾಗಿ ಪ್ರದರ್ಶನಗೊಂಡರೆ ತನ್ನ ಗತವೈಭವ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂತಹ ಬದಲಾವಣೆಗಳು ಕಾಲದ ಅಗತ್ಯವೆಂದು ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ಡಾ. ಕೆ.ಆರ್. ದುರ್ಗಾದಾಸ್ ಹೇಳಿದರು. ಅವರು ಗದಗ ನಗರದ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗವು ಕರ್ನಾಟಕ ಬಯಲಾಟ ಅಕಾಡೆಮಿಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬಯಲಾಟ ಪರಂಪರೆ ಮತ್ತು ಪ್ರಯೋಗ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ದೊಡ್ಡಾಟದ ಪಾರಂಪರಿಕ ಕಲಾವಿದರು ಇದ್ದಾರೆ. ವಿಭಿನ್ನ ಹೆಸರು ಮತ್ತು ಶೈಲಿಗಳೂ ಇವೆ. ಹಳ್ಳಿ ಜನರು ಆಡುವ ಆಟ ಎಂದು ಈ ಕಲೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಭರತ ನಾಟ್ಯಶಾಸ್ತ್ರಕ್ಕೂ ಬಯಲಾಟದ ಕುಣಿತಗಳೇ ಮೂಲ. ಹಳ್ಳಿಗಳಲ್ಲಿ ರಾತ್ರಿಯಿಂದ ಬೆಳಗ್ಗೆವರೆಗೂ ದೊಡ್ಡಾಟ ಆಡುತ್ತಿದ್ದೇವು.ದೇವಿಸ್ತುತಿಯೊಂದಿಗೆ ಆರಂಭವಾಗಿ ಸೂರ್ಯೋದಯದವರೆಗೂ ನಡೆಯುತ್ತಿತ್ತು.
ಈಗ ಆ ವಾತಾವರಣ ಇಲ್ಲ.ಬೆಳಗ್ಗೆವರೆಗೂ ಕುಳಿತು ನೋಡುವ ಜನ ಇಲ್ಲ. ಒಂದು, ಎರಡು ಹಾಗೂ ಮೂರು ಗಂಟೆಗಳ ಪ್ರಸಂಗಗಳಿಗೆ ಸೀಮಿತವಾಗಿವೆ. ಕರ್ನಾಟಕ ಬಯಲಾಟ ಅಕಾಡೆಮಿಯ ಕಲಾವಿದರ ಮಾಹಿತಿ ಸಂಗ್ರಹ ಮತ್ತು ಹಸ್ತಪ್ರತಿ ಸಂಗ್ರಹ ಯೋಜನೆ, ವಿದ್ಯಾರ್ಥಿಗಳಿಗೆ ತರಬೇತಿ, ಕಲಾತಂಡಗಳಿಗೆ ಪ್ರೋತ್ಸಾಹಧನ ಮುಂತಾದ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಸಿದ್ದಣ್ಣ ಜಕಬಾಳ ಮಾತನಾಡಿ, ಸೊಂಟ, ಕಂಠ ಗಟ್ಟಿಯಿದ್ದರೆ ಮಾತ್ರ ಬಯಲಾಟ. ದೊಡ್ಡಾಟವನ್ನು ಬಯಲಾಟ ಎಂದೂ ಕರೆಯುತ್ತಾರೆ. ಹಾಡು, ನೃತ್ಯ, ಭಂಗಿ ಮತ್ತು ಮುದ್ರೆಗಳ ಬಳಕೆ ಇರುವ ವಿಶಿಷ್ಟ ದೃಶ್ಯಕಲೆಯಾಗಿದೆ. ರಾತ್ರಿಯಿಡೀ ಬಯಲಿನಲ್ಲಿ ಆಟ ಆಡುವುದು ವಾಡಿಕೆ. ಭಾಗವತರು, ಹಾರ್ಮೋನಿಯಂ, ಶಹನಾಯಿ ಕಲಾವಿದರು ಆಟ ಮುನ್ನಡೆಸಲು ಅಗತ್ಯ ಪಾತ್ರಧಾರಿಗಳು ಭುಜಕೀರ್ತಿ, ತಲೆಗೆ ದೊಡ್ಡ ಕಿರೀಟ, ಎದ್ದು ಕಾಣುವ ಬಣ್ಣಗಳನ್ನು ಬಳಸಲಾಗುತ್ತದೆ. ಪಾತ್ರಧಾರಿಗಳ ದನಿ ಗಟ್ಟಿಯಾಗಿರಬೇಕು. ಕಲಿಯುವ ಆಸಕ್ತಿ ಇದ್ದರವರು ಯಾರೇ ಬಂದರೂ ಬಯಲಾಟ ಅಕಾಡೆಮಿಯು ಅವರ ಜೊತೆಗಿರುತ್ತದೆ ಎಂದರು.
ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಶಂಕ್ರಣ್ಣ ಸಂಕಣ್ಣವರ, ಬಯಲಾಟ ಅಕಾಡೆಮಿಯ ಸಂಶೋಧನಾ ಸಹಾಯಕ ಡಾ. ಅಂದಯ್ಯ ಅರವಟಗಿಮಠ, ಡಾ. ಎ.ಕೆ.ಮಠ ಮುಂತಾದವರು ಮಾತನಾಡಿದರು.ಅಶೋಕ ಸುತಾರ ಪ್ರಾರ್ಥಿಸಿದರು. ಶಿವರೆಡ್ಡಿ ಅಮರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಬಯಲಾಟ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು. ಡಾ. ರಾಮಚಂದ್ರ ಪಡೇಸೂರು ನಿರೂಪಿಸಿದರು. ಚಂದ್ರಶೇಖರ ವಸ್ತ್ರದ, ಡಾ. ಜಿ.ಬಿ. ಪಾಟೀಲ, ವಿವೇಕಾನಂದಗೌಡ ಪಾಟೀಲ, ಅಶೋಕ ಬಣ್ಣದ ಮುಂತಾದವರು ಹಾಜರಿದ್ದರು.