ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುರಾಜ್ಯದಲ್ಲಿ ಶಾಖೋತ್ಪನ್ನ ವಿದ್ಯುತ್ ಬೇಡಿಕೆ ಗಣನೀಯವಾಗಿ ತಗ್ಗಿದ್ದು, ಈ ಹಿನ್ನೆಲೆಯಲ್ಲಿ ಪಕ್ಕದ ಬಳ್ಳಾರಿ ಸೇರಿ ಜಿಲ್ಲೆಯ ಎರಡೂ ಸ್ಥಾವರಗಳಿಂದ ವಿದ್ಯುತ್ ಉತ್ಪಾದನೆಯು ಇಳಿಕೆಯಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಇದೇ ರೀತಿ ಪರಿಸ್ಥಿತಿ ಮುಂದುವರಿಯುತ್ತಿದ್ದು, ಇದರಿಂದಾಗಿ ಶಾಖೋತ್ಪನ್ನ ಸ್ಥಾವರಗಳ ನಿರ್ವಹಣೆಯಲ್ಲಿ ಏರುಪೇರು ಉಂಟಾಗುತ್ತಿದೆ.
ಎಲ್ಲೆಡೆ ಉತ್ತಮವಾಗಿ ಸುರಿದ ಮಳೆಯಿಂದಾಗಿ ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ. ಹಾಗಾಗಿ ಜಲ, ಪವನ ಹಾಗೂ ಸೌರ ವಿದ್ಯುತ್ ಮೂಲಗಳನ್ನು ಬಳಕೆ ಮಾಡಲಾಗುತ್ತಿದ್ದು, ಈ ಭಾಗದಲ್ಲಿರುವ ಮೂರು ಶಾಖೋತ್ಪನ್ನ ಸ್ಥಾವರಗಳಾದ ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್ಟಿಪಿಎಸ್) ಯರಮರಸ್ ಅತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ವೈಟಿಪಿಎಸ್) ಮತ್ತು ಪಕ್ಷದ ಬಿಟಿಪಿಎಸ್‌ನ ಘಟಕಗಳನ್ನು ಬೇಡಿಕೆಯಾನುಸಾರವಾಗಿಯೇ ನಡೆಸಿ ಕರೆಂಟ್ ಉತ್ಪಾದಿಸಲಾಗುತ್ತಿದೆ.ಬೇಡಿಕೆ - ಉತ್ಪಾದನೆ: ಬುಧವಾರ ಸಂಜೆ ಸಮಯಕ್ಕೆ ರಾಜ್ಯದಲ್ಲಿ 11,068 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆಯಲ್ಲಿ ಸ್ಥಳೀಯ ಜಲ, ಪವನ, ಶಾಖೋತ್ಪನ್ನ ಮೂಲಗಳಿಂದ 4380 ಮೆಗಾ ವ್ಯಾಟ್, ರಾಷ್ಟ್ರ ಉತ್ಪಾದನಾ ಕೇಂದ್ರ (ಸಿಜಿಎಸ್) 4777 ಮೆಗಾ ವ್ಯಾಟ್ ಮತ್ತು ಎನ್ಸಿಇಪಿಯಿಂದ 1890 ಮೆಗಾ ವ್ಯಾಟ್ ವಿದ್ಯುತ್ ಲಭ್ಯವಾಗುತ್ತಿದೆ. ಇದರಲ್ಲಿ ಶಾಖೋತ್ಪನ್ನ ಮೂಲಗಳಿಂದ ಕೇವಲ 1670 ಮೆಗಾ ವ್ಯಾಟ್, ಜಲಮೂಲದಿಂದ 1160, ಸ್ವತಂತ್ರ್ಯ ವಿದ್ಯುತ್ ಉತ್ಪಾದನೆ (ಐಪಿಪಿಎಸ್) ಮೂಲದಿಂದ 1093 ಮತ್ತು ಇತರೆ ಜಲವಿದ್ಯುತ್‌ನಿಂದ 290 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಮಾಡಲಾಗುತ್ತಿದೆ.ಲೆಕ್ಕಾಚಾರ: ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಪ್ರಮಾಣವು ದಿನೇ ದಿನೆ ಕಡಿಮೆಯಾಗುತ್ತಿದೆ. ಉತ್ತಮ ಮಳೆ, ಕಡಿಮೆ ಖರ್ಚು ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿದ್ಯುತ್ ಹಂಚಿಕೆಯ ನಿಯಮಗಳ ರೀತ್ಯ ಅನಿವಾರ್ಯವಾಗಿ ಶಾಖೋತ್ಪನ್ನ ಸ್ಥಾವರಗಳ ಬೇಡಿಕೆ ತಗ್ಗುತ್ತಿದೆ. ಜಲ, ಪವನ ಹಾಗೂ ಸೋಲಾರ್ ಜೊತೆಗೆ ಕೇಂದ್ರ ಹಾಗೂ ಖಾಸಗಿಯಿಂದ ವಿದ್ಯುತ್ ಖರೀದಿಯೇ ಆರ್ಥಿಕ ಭಾರವನ್ನು ಇಳಿಸುತ್ತಿರುವುದರಿಂದ ಬೇಡಿಕೆಯಂತೆ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಯ ಲೆಕ್ಕಾಚಾರವೂ ಸಾಗಿದೆ.ಯಾವ ಯಾವ ಘಟಕಗಳು ಸ್ಥಗಿತ ?:1700 ಮೆಗಾ ವ್ಯಾಟ್ ಸಾಮರ್ಥ್ಯದ ಆರ್ಟಿಪಿಎಸ್‌ನ ಎಂಟು ಘಟಕಗಳ ಪೈಕಿ ಮೂರು ಘಟಕಗಳು ಸ್ಥಗಿತಗೊಂಡಿದ್ದು, ಇದರಲ್ಲಿ 210 ಮೆಗಾ ವ್ಯಾಟ್ ಸಾಮರ್ಥ್ಯದ 1ನೇ ಘಟಕ ಸುಮಾರು ಒಂದೂವರೆ ವರ್ಷದಿಂದ ಸಂಪೂರ್ಣವಾಗಿ ಬಂದಾಗಿದೆ. ಬೇಡಿಕೆಯಿಲ್ಲದ್ದಕ್ಕೆ ಕೇಂದ್ರದ 4 ಮತ್ತು 5ನೇ ಘಟಗಳನ್ನು ನಿಲ್ಲಿಸಲಾಗಿದೆ. ಉಳಿದಂತೆ 2 ನೇ ಘಟಕದಿಂದ 188 ಮೆಗಾ ವ್ಯಾಟ್, 3ನೇ ಘಟಕದಿಂದ 190 ಮೆಗಾ ವ್ಯಾಟ್, ಅದೇ ರೀತಿ 6 ರಿಂದ 8ನೇ ಘಟಕಗಳಿಂದ ಕ್ರಮವಾಗಿ 190, 191 ಮತ್ತು 195 ಮೆಗಾ ವ್ಯಾಟ್ ಸೇರಿ ಒಟ್ಟಾರೆ ಐದು ಘಟಕಗಳಿಂದ 932 ಮೆಗಾ ವ್ಯಾಟ್ ಕರೆಂಟ್ ಉತ್ಪಾದಿಸಲಾಗುತ್ತಿದೆ.
ಇನ್ನು, 1600 ಸಾಮರ್ಥ್ಯದ ವೈಟಿಪಿಎಸ್‌ನ ಎರಡೂ ಘಟಕಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ತಲಾ 800 ಮೆಗಾ ವ್ಯಾಟ್ ಸಾಮರ್ಥ್ಯದ 1ನೇ ಘಟಕವು ಎನ್ಎಲ್ಡಿ ಯಡಿ (ಬೇಡಿಕೆಯಿಲ್ಲದೇ) ಕಳೆದ ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದರೆ ವಾರ್ಷಿಕ ನಿರ್ವಹಣೆಯಿಂದಾಗಿ 2ನೇ ಘಟಕವನ್ನು ಬಂದ್ ಮಾಡಲಾಗಿದೆ. ಕಳೆದ ಎರಡು ವಾರಗಳಿಗೂ ಹೆಚ್ಚುದಿನ ವೈಟಿಪಿಎಸ್ ಘಟಕಗಳಿಂದ ಕರೆಂಟ್ ಉತ್ಪಾದನೆ ಯಾಗುತ್ತಿಲ್ಲ. ಇನ್ನು ಪಕ್ಕದ ಬಿಟಿಪಿಎಸ್‌ನ ಮೂರು ಘಟಕಗಳ ಪೈಕಿ 1ನೇ ಘಟಕವನ್ನು ನಿಲ್ಲಿಸಲಾಗಿದ್ದು, ಉಳಿದ 2 ಮತ್ತು 3ನೇ ಘಟಕದಿಂದ ಕ್ರಮವಾಗಿ 315 ಹಾಗೂ 432 ಮೆಗಾ ವ್ಯಾಟ್ ಕರೆಂಟ್ ಉತ್ಪಾದಿಸಲಾಗುತ್ತಿದೆ.