ಕೆಎಚ್‌ಡಿಸಿ ಅವ್ಯವಹಾರ ಮರು ತನಿಖೆ ನಡೆಸಿ

KannadaprabhaNewsNetwork | Published : Jul 16, 2024 12:36 AM

ಸಾರಾಂಶ

ಹಿಂದಿನ ಸರ್ಕಾರದ ಅವಧಿಯಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದೆ. ಆದರೆ, ಕಾಟಾಚಾರದ ತನಿಖೆ ನಡೆಸಿ ಅಧಿಕಾರಿಗಳ ಮೇಲೆ ಮಾತ್ರ ಕ್ರಮ ಜರುಗಿಸಲಾಗಿದೆ. ಇದೀಗ ಇದರ ಮರು ತನಿಖೆಯಾಗಬೇಕಿದ್ದು ಈ ಕುರಿತು ಮಾಜಿ ಅಧ್ಯಕ್ಷರ ವಿರುದ್ಧ ದೂರು ನೀಡಲಾಗಿದೆ.

ಹುಬ್ಬಳ್ಳಿ:

ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮ (ಕೆಎಚ್‌ಡಿಸಿ)ದಲ್ಲಿ ನಡೆದಿರುವ ಅವ್ಯವಹಾರದ ಮರು ತನಿಖೆ, ನೇಕಾರರಿಗೆ ನಿವೇಶನ ಹಂಚಿಕೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಇಲ್ಲಿನ ಕೆಎಚ್‌ಡಿಸಿ ಕಚೇರಿಯ ಎದುರು ರಾಜ್ಯ ನೇಕಾರ ಸೇವಾ ಸಂಘದಿಂದ ಸೋಮವಾರ ಧರಣಿ ನಡೆಸಲಾಯಿತು.

ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ರಾಜ್ಯದಲ್ಲಿ 40 ವರ್ಷಗಳಿಂದ ಕೆಎಚ್‌ಡಿಸಿ ಕಾರ್ಯನಿರ್ವಹಿಸುತ್ತಿದ್ದು, ಪ್ರಾರಂಭದಲ್ಲಿ 48 ಸಾವಿರ ಜನ ನೇಕಾರಿಕೆ ಮಾಡುತ್ತಿದ್ದರು. ಆದರೆ, ಇತ್ತೀಚಿನ 10 ವರ್ಷಗಳಲ್ಲಿ ಸಂಪೂರ್ಣವಾಗಿ ಕೈಮಗ್ಗ ನೇಕಾರಿಕೆಯನ್ನು ತ್ಯಜಿಸಿ ಬೇರೆ ಉದ್ಯೋಗಗಳಿಗೆ ತೊಡಗಿಕೊಂಡ ಕಾರಣ ಈಗ ನಿಗಮದಲ್ಲಿ ಕೇವಲ 4100 ಜನ ನೇಕಾರಿಕೆ ಮಾಡುತ್ತಿದ್ದಾರೆ. ಪ್ರತಿ ವರ್ಷ ಸಾಲದಲ್ಲಿ ನಡೆಸುತ್ತಿರುವ ನಿಗಮವು ಇಂದು ಮುಚ್ಚುವ ಹಂತಕ್ಕೆ ಬಂದು ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದೆ. ಆದರೆ, ಕಾಟಾಚಾರದ ತನಿಖೆ ನಡೆಸಿ ಅಧಿಕಾರಿಗಳ ಮೇಲೆ ಮಾತ್ರ ಕ್ರಮ ಜರುಗಿಸಲಾಗಿದೆ. ಇದೀಗ ಇದರ ಮರು ತನಿಖೆಯಾಗಬೇಕಿದ್ದು ಈ ಕುರಿತು ಮಾಜಿ ಅಧ್ಯಕ್ಷರ ವಿರುದ್ಧ ದೂರು ನೀಡಲಾಗಿದೆ. ತಕ್ಷಣ ಸರ್ಕಾರ ಹಾಗೂ ಸಂಬಂಧಿಸಿದ ಸಚಿವರು ಸ್ಪಂದಿಸಿ ತನಿಖೆ ನಡೆಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬೇಡಿಕೆಗಳು:

ತೆಲಂಗಾಣ, ಕೇರಳ, ತಮಿಳುನಾಡಿನಲ್ಲಿ ಜಾರಿಯಲ್ಲಿರುವ ನೇಕಾರ ಸಮ್ಮಾನ ಯೋಜನೆಯಂತೆ ರಾಜ್ಯದಲ್ಲಿ (ವರ್ಷಕ್ಕೆ ₹ 24 ಸಾವಿರ) ಜಾರಿಗೊಳಿಸುವುದು, ಹಿಂದಿನ ಸರ್ಕಾರದ ಅವಧಿಯಲ್ಲಾದ ಅವ್ಯವಹಾರ ಮರು ತನಿಖೆ, ನಿಗಮದ ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿ ಮಾರಾಟಕ್ಕೆ ಹುನ್ನಾರ ನಡೆದಿದ್ದು ಇದನ್ನು ಸರ್ಕಾರ ತಡೆಯಬೇಕು. ನಿರಂತರ ಉದ್ಯೋಗ ನೀಡಿ ವೈಜ್ಞಾನಿಕವಾಗಿ ಕೂಲಿ ಹೆಚ್ಚಿಸುವುದು, 55 ವರ್ಷ ಪೂರ್ಣಗೊಳಿಸಿದ ನೇಕಾರರಿಗೆ ಮಾಸಿಕ ₹ 5 ಸಾವಿರ ಮಾಸಾಶನ, ಕಟ್ಟಡ ಕಾರ್ಮಿಕ ಮಾದರಿಯಲ್ಲಿ ಕಾರ್ಮಿಕ ಸೌಲಭ್ಯಗಳನ್ನು ಮಗ್ಗ ಮತ್ತು ಮಗ್ಗ ಪೂರ್ವ ಚಟುವಟಿಕೆಯಲ್ಲಿರುವ ನೇಕಾರರಿಗೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಧರಣಿ ನಿರತರನ್ನು ಭೇಟಿಯಾದ ಕೆಎಚ್‌ಡಿಸಿ ವ್ಯವಸ್ಥಾಪಕ ನಿರ್ದೇಶಕರಾದ ಪರ್ಣಿತ ನೇಗಿ, ನಿಮ್ಮ ಬೇಡಿಕೆಗಳ ಕುರಿತು ಮೇಲಾಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು. ಇದಕ್ಕೆ ಒಪ್ಪದ ಧರಣಿ ನಿರತರು, ಲಿಖಿತ ಭರವಸೆ ನೀಡುವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಸಂಜೆಯ ವರೆಗೂ ನಡೆದ ಧರಣಿ ನಿರತರೊಂದಿಗೆ ಕೆಎಚ್‌ಡಿಸಿ ವ್ಯವಸ್ಥಾಪಕ ನಿರ್ದೇಶಕರು ಚರ್ಚಿಸಿ ಕೊನೆಗೆ ಜವಳಿ ಖಾತೆ ಸಚಿವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಸಚಿವರು ಒಂದು ವಾರದೊಳಗೆ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಆ. 1ರ ವರೆಗೆ ಕಾಲಾವಕಾಶ ನೀಡುತ್ತಿದ್ದು, ನಮ್ಮೆಲ್ಲ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ಮತ್ತೇ ನಿರಂತರ ಧರಣಿ ಆರಂಭಿಸುವ ಎಚ್ಚರಿಕೆ ನೀಡಿ ಧರಣಿ ಕೈಬಿಟ್ಟರು.

ಈ ವೇಳೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ನೇಕಾರರಾದ ಸದಾಶಿವ ಗೋಂದಕರ, ಉಮಾಬಾಯಿ ಎಳಸಂಗ, ಮಲ್ಲಿಕ ಜಮಾದಾರ, ಶ್ರೀಶೈಲ ಮುಗಳಳ್ಳಿ, ನಾಗಪ್ಪ ಬನ್ನಿಗಿಡದ, ಮಾರುತಿ ಮಾಳೋದೆ, ರಾಜು ಕೊಪ್ಪಳದ, ಶಿವಾನಂದ ಬಸನಳ್ಳಿ, ಮೆಹಬೂಬ ಚೆಳ್ಳಮರದ, ಪ್ರೇಮನಾಥ ಕೋಪರ್ಡೆ, ಫಕೀರಪ್ಪ ಕುರಹಟ್ಟಿ ಸೇರಿದಂತೆ ನೂರಾರು ನೇಕಾರರು ಪಾಲ್ಗೊಂಡಿದ್ದರು.

Share this article