ಕನ್ನಡಪ್ರಭ ವಾರ್ತೆ, ಬೆಂಗಳೂರು
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 10 ರಿಂದ 18 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆ ಮಾಡುವ ‘ಶುಚಿ’ ಯೋಜನೆಗೆ ಆರೋಗ್ಯ ಇಲಾಖೆಯು ಬುಧವಾರ ಮರು ಚಾಲನೆ ನೀಡಲಾಗಿದೆ.ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾರಂಭವಾಗಿ ನಂತರ ಸ್ಥಗಿತಗೊಂಡಿದ್ದ ‘ಶುಚಿ- ಮುಟ್ಟಿನ ನೈರ್ಮಲ್ಯ’ ಯೋಜನೆಗೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮರು ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, 47 ಕೋಟಿ ರು. ವೆಚ್ಚದಲ್ಲಿ 19 ಲಕ್ಷ ಹೆಣ್ಣು ಮಕ್ಕಳಿಗೆ ವರ್ಷಕ್ಕಾಗುವಷ್ಟು ಸ್ಯಾನಿಟರಿ ನ್ಯಾಪ್‌ಕಿನ್ ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ. ಆರೋಗ್ಯ ಇಲಾಖೆಯಿಂದಲೇ ನೇರವಾಗಿ ಶಾಲೆಗಳಿಗೆ ತಲುಪಿಸಲಾಗುವುದು ಎಂದು ಹೇಳಿದರು.
ಹೆಣ್ಣುಮಕ್ಕಳ ಆರೋಗ್ಯ ದೃಷ್ಟಿಯಿಂದ ಶುಚಿ ಯೋಜನೆ ಮಹತ್ವದ್ದಾಗಿದೆ. ಹೀಗಾಗಿ ಎಲ್ಲಾ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್ ತಲುಪಿಸಲಾಗುವುದು. ಆಯಾ ಶಾಲಾ ಮುಖ್ಯಸ್ಥರು ಮಕ್ಕಳಿಗೆ ಕಿಟ್ ವಿತರಿಸಲಿದ್ದಾರೆ. ಒಂದು ಪ್ಯಾಕ್‌ನಲ್ಲಿ 10 ಸ್ಯಾನಿಟರಿ ಪ್ಯಾಡ್‌ಗಳು ಇರಲಿದ್ದು, ಒಂದು ವರ್ಷಕ್ಕೆ ಸಾಕಾಗುವಷ್ಟು ಕಿಟ್‌ಗಳನ್ನು ವಿತರಿಸುತ್ತೇವೆ ಎಂದು ಹೇಳಿದರು.ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿಯೇ ಯೋಜನೆಯನ್ನ ಪ್ರಾರಂಭಿಸಲಾಗಿತ್ತು. ಆದರೆ, ನಂತರದ ಸರ್ಕಾರದಲ್ಲಿ ಇಂಥಹ ಮಹತ್ವದ ಯೋಜನೆ ಏಕೆ ಸ್ಥಗಿತಗೊಳಿಸಲಾಯಿತು ಎಂಬುದು ಗೊತ್ತಿಲ್ಲ. ಹೆಣ್ಣು ಮಕ್ಕಳಿಗೆ ಆರೋಗ್ಯ ದೃಷ್ಠಿಯಿಂದ ಆರಂಭವಾಗಿದ್ದ ಶುಚಿ ಯೋಜನೆ ಕಡೆಗಣಿಸಲು ಸಾಧ್ಯವಿಲ್ಲ. ಎಷ್ಟೋ ಬಡ ಕುಟುಂಬದಲ್ಲಿರುವ ಹೆಣ್ಣುಮಕ್ಕಳಿಗೆ ಇದನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಶುಚಿ ಯೋಜನೆಯಿಂದ ಹೆಣ್ಣುಮಕ್ಕಳಿಗೆ ನೆರವಾಗಲಿದೆ ಎಂದರು.ಇದೇ ವೇಳೆ ಋತುಸ್ರಾವ ಒಂದು ನೈಸರ್ಗಿಕ ಕ್ರಿಯೆ. ಈ ಬಗ್ಗೆ ಹೆಣ್ಣುಮಕ್ಕಳು ಹಿಂಜರಿಕೆಯ ಮನೋಭಾವ ಹೊಂದುವ ಅಗತ್ಯವಿಲ್ಲ. ಈ ಬಗೆಗಿನ ಮೂಢ ನಂಬಿಕೆಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಕರೆ ನೀಡಿದರು.ಮೈತ್ರಿ ಕಪ್ ಬಗ್ಗೆ ಜಾಗೃತಿ:
ಸ್ಯಾನಿಟರಿ ಪ್ಯಾಡ್ ಗಳಿಗೆ ಪರ್ಯಾಯವಾಗಿ ಶುಚಿ ಯೋಜನೆಯಡಿ ಮುಟ್ಟಿನ ಮೈತ್ರಿ ಕಪ್ ವಿತರಿಸುವ ಪ್ರಾಯೋಗಿಕ ಕಾರ್ಯಕ್ರಮವನ್ನು ಎರಡು ಜಿಲ್ಲೆಗಳಲ್ಲಿ ಜಾರಿಗೊಳಿಸಿದ್ದೇವೆ. ಮೈತ್ರಿ ಮುಟ್ಟಿನ ಕಪ್ ಪರಿಸರ ಸ್ನೇಹಿಯಾಗಿದ್ದು, ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್ ಬದಲು ಮುಟ್ಟಿನ ಮೈತ್ರಿ ಕಪ್‌ಗಳ ಬಳಕೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು ಎಂದರು.ಇದೇ ವೇಳೆ ಶಾಲಾ ಬಾಲಕಿಯರಿಗಾಗಿ ‘ಋತುಚಕ್ರ ಸ್ನೇಹಿ’ ಎಂಬ ಮಾಹಿತಿ ಕೈಪಿಡಿ ಬಿಡುಗಡೆ ಮಾಡಲಾಯಿತು.
ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಆರೋಗ್ಯ ಇಲಾಖೆ ನಿರ್ದೇಶಕಿ ಡಾ.ಬಿ.ಎಸ್. ಪುಷ್ಪಲತಾ ಹಾಜರಿದ್ದರು.