ಬಿಬಿಎಂಪಿಗೆ ₹675 ಕೋಟಿ ಬಿಡುಗಡೆ: ಬಜೆಟ್‌ನಲ್ಲಿ ಘೋಷಿಸಿದಂತೆ 3ನೇ ಕಂತು ನೀಡಿದ ಸರ್ಕಾರ

KannadaprabhaNewsNetwork | Published : Jan 26, 2024 1:50 AM

ಸಾರಾಂಶ

ಬಿಬಿಎಂಪಿಗೆ ₹675 ಕೋಟಿ ಬಿಡುಗಡೆ: ಬಜೆಟ್‌ನಲ್ಲಿ ಘೋಷಿಸಿದಂತೆ 3ನೇ ಕಂತು ನೀಡಿದ ಸರ್ಕಾರ

ಕನ್ನಡಪ್ರಭ ವಾರ್ತೆ ಬೆಂಗಳೂರು

ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲಾಗದೆ ಪರದಾಡುತ್ತಿರುವ ಬಿಬಿಎಂಪಿಗೆ ರಾಜ್ಯ ಸರ್ಕಾರ ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆ ಅನುದಾನದ ಮೂರನೇ ಕಂತು ₹675 ಕೋಟಿಯನ್ನು ಬಿಡುಗಡೆ ಮಾಡಿ ಬಿಲ್‌ ಕಾಮಗಾರಿಗೆ ಬಳಸುವಂತೆ ಸೂಚಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ಮೂಲಸೌಕರ್ಯ ಕಾಮಗಾರಿಗಳಿಗಾಗಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ₹3 ಸಾವಿರ ಕೋಟಿ ಅನುದಾನ ಘೋಷಿಸಿತ್ತು. ಈ ಪೈಕಿ ಈ ಹಿಂದೆಯೇ ಎರಡು ಕಂತಿನಲ್ಲಿ ₹1,350 ಕೋಟಿ ಬಿಡುಗಡೆ ಮಾಡಿದೆ. ಆದರೂ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್‌ ರಸ್ತೆಗಳು, ಮೇಲ್ಸೇತುವೆ, ಕಾರಿಡಾರ್‌ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

ಹೀಗಾಗಿ ಬಿಬಿಎಂಪಿಗೆ ನೀಡಲಾಗಿರುವ ಅನುದಾನದಲ್ಲಿ ಕಾಮಗಾರಿಗಳ ಬಿಲ್‌ ಪಾವತಿ ಸಾಧ್ಯ ಆಗುತ್ತಿಲ್ಲ. ಸದ್ಯ ಬೃಹತ್‌ ಕಾಮಗಾರಿಗಳಿಗೆ ಸಂಬಂಧಿಸಿದಂತೆ ₹2,150 ಕೋಟಿ ಮೊತ್ತದ ಬಿಲ್‌ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆ ಅನುದಾನದ ಮೂರನೇ ಕಂತನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ಇದೀಗ ರಾಜ್ಯ ಸರ್ಕಾರ ಮೂರನೇ ತ್ರೈಮಾಸಿಕ ಕಂತಿನ ರೂಪದಲ್ಲಿ ₹675 ಕೋಟಿ ಬಿಡುಗಡೆ ಮಾಡಿದೆ.

ಪಾಲಿಕೆಗೆ ಸರ್ಕಾರದ ಷರತ್ತು:

ಬಿಡುಗಡೆ ಮಾಡಲಾಗಿರುವ ಅನುದಾನವನ್ನು ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆ ಅನುದಾನದ ಕಾಮಗಾರಿಗಳ ಬಿಲ್‌ ಪಾವತಿ ಪಾವತಿಗೆ ಮಾತ್ರ ಬಳಸಬೇಕು. ಸರ್ಕಾರ ಅನುಮೋದನೆ ನೀಡಿದ ಕ್ರಿಯಾ ಯೋಜನೆಯ ಕಾಮಗಾರಿಗಳನ್ನು ಹೊರತುಪಡಿಸಿ ಬೇರೆ ಕಾಮಗಾರಿಗಳಿಗೆ ಬಳಸಬಾರದು. ಒಂದು ವೇಳೆ ಬಳಸಿದರೆ ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿಗಳನ್ನು ಅದಕ್ಕೆ ಹೊಣೆಯಾಗಿಸಲಾಗುವುದು. ಮುಂದಿನ ಕಂತಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವ ಸಂದರ್ಭದಲ್ಲಿ ಅನುದಾನ ಬಳಕೆ ಕುರಿತು ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

Share this article