ಎಲ್ಲ ಜೀವಿಗಳನ್ನು ಸಮಾನವಾಗಿ ನೋಡುವುದೇ ಧರ್ಮ

KannadaprabhaNewsNetwork |  
Published : Sep 17, 2025, 01:07 AM IST
ಸವದದ್ನಹತಗಮಜನಯರ | Kannada Prabha

ಸಾರಾಂಶ

ದೇವರ ಮುಂದೆ ಪ್ರಾರ್ಥನೆ ಮಾಡುವುದೂ ಸಮಾನತೆಯ ಸಾಧನೆ. ಪ್ರಾಮಾಣಿಕತೆ, ಆದರ್ಶದ ಜೀವನ, ಇತರರಿಗೆ ನೋವಾಗದಂತೆ ಬದುಕುವುದು ನಿಜವಾದ ಧರ್ಮದ ಅರ್ಥ.

ಹನುಮಸಾಗರ:

ಧರ್ಮ ಎಂದರೆ ಎಲ್ಲ ಜೀವಿಗಳನ್ನು ಸಮಾನವಾಗಿ ನೋಡುವುದು ಎಂದು ಸಂಸ್ಕೃತ ಜ್ಞಾನದಾಯಿನಿ ಪಾಠಶಾಲೆಯ ಪಂಡಿತ ಪ್ರಹ್ಲಾದಾರ್ಯ ಪೂಜಾರ ಹೇಳಿದರು.

ಪಟ್ಟಣದ ಶ್ರೀಕರಿಸಿದ್ದೇಶ್ವರ ಮಠದ ಸವ ಮಂಟಪದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ರಾಜ್ಯವ್ಯಾಪಿ ಸೀರತ್ ಅಭಿಯಾನದ ಸಮಾರೋಪದಲ್ಲಿ ಅವರು ಮಾತನಾಡಿದರು.

ದೇವರ ಮುಂದೆ ಪ್ರಾರ್ಥನೆ ಮಾಡುವುದೂ ಸಮಾನತೆಯ ಸಾಧನೆ. ಪ್ರಾಮಾಣಿಕತೆ, ಆದರ್ಶದ ಜೀವನ, ಇತರರಿಗೆ ನೋವಾಗದಂತೆ ಬದುಕುವುದು ನಿಜವಾದ ಧರ್ಮದ ಅರ್ಥ. ಇಂದ್ರೀಯ ನಿಗ್ರಹ ಮಾಡಬೇಕು. ದುಡಿದ ದುಡ್ಡಿನಲ್ಲಿ ಒಂದಿಷ್ಟನ್ನು ಧಾನ ಮಾಡಬೇಕು. ಮಾತನ್ನು ಮಿತವಾಗಿ ಬಳಸಬೇಕು. ಸಾತ್ವಿಕ ಆಹಾರ ಸೇವಿಸಬೇಕು. ಹಿರಿಯರಿಗೆ ಗೌರವ ಕೊಡಬೇಕು. ಮಹಾನುಭಾವರ ಆದರ್ಶಗಳನ್ನು ಪಾಲಿಸಬೇಕು. ಇಂತಹ ಗುಣಗಳಿಂದ ಸಮಾಜದಲ್ಲಿ ಧಾರ್ಮಿಕ ಮೌಲ್ಯಗಳು ಬೆಳೆಯುತ್ತವೆ ಎಂದರು.

ಪ್ರವಚನಕಾರ ಲಾಲಹುಸೇನ ಕಂದಗಲ್ಲ ಮಾತನಾಡಿ, ಪೈಗಂಬರರ ಜನ್ಮದಿನದ ಮೆರವಣಿಗೆಗಳಿಗೆ ಇಸ್ಲಾಮಿನಲ್ಲಿ ಸ್ಥಾನವಿಲ್ಲ. ಅವರ ಕಾಲದಲ್ಲಿ ಯಾವುದೇ ಭಾವಚಿತ್ರ ಬಿಡಿಸಲಾಗಲಿಲ್ಲ. ಯೇಸುಕ್ರಿಸ್ತ, ಬುದ್ಧ, ಮಹಾವೀರರ ಕಾಲದಿಂದಲೇ ಭಾವಚಿತ್ರಗಳು ಲಭ್ಯವಿವೆ. ಆದರೆ ಪೈಗಂಬರರ ಭಾವಚಿತ್ರವಿಲ್ಲ. ಇದಕ್ಕೆ ಕಾರಣ ಜನರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಬಹುದು ಎಂಬ ಭಯ ಎಂದರು.

ಜಿಲ್ಲಾ ಸಂಚಾಲಕ ಜನಾಬ ದಿಲಾವರ ಅಂಬರಖಾನ್ ಮಾತನಾಡಿ, ಪೈಗಂಬರರ ಬದುಕು ನ್ಯಾಯ ಮತ್ತು ಸಮಾನತೆಯ ಸಂದೇಶ ಸಾರುತ್ತಿದೆ. ಸಮಾಜದಲ್ಲಿ ಶಾಂತಿ ಹಾಳಾಗಲು ಅನೈತಿಕತೆ ಮತ್ತು ಅನ್ಯಾಯವೇ ಮೂಲ ಕಾರಣ. ನ್ಯಾಯದ ಮಾರ್ಗವನ್ನು ಬಿಟ್ಟು ಅನ್ಯಾಯದ ಮಾರ್ಗ ಅನುಸರಿಸುವುದರಿಂದ ಭ್ರಷ್ಟಾಚಾರ, ಅಶಾಂತಿ ಹೆಚ್ಚುತ್ತಿದೆ. ಇದನ್ನು ತಡೆಯಲು ಧಾರ್ಮಿಕ ಮೌಲ್ಯಗಳು ಅಗತ್ಯ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ವಿಜಯಮಹಾಂತ ಸ್ವಾಮೀಜಿ, ಎಲ್ಲ ಧರ್ಮಗಳು ಶಾಂತಿ ಮತ್ತು ಪ್ರಾಮಾಣಿಕತೆಯ ಸಂದೇಶ ನೀಡುತ್ತವೆ. ಸಮಾಜದಲ್ಲಿ ಧಾರ್ಮಿಕ ಮೌಲ್ಯಗಳು ನೆಲೆಸಿದಾಗ ಮಾತ್ರ ಶಾಂತಿ ಹಾಗೂ ಸಹಬಾಳ್ವೆ ಸಾಧ್ಯ ಎಂದರು.

ಪ್ರಮುಖರಾದ ಶಿವಕುಮಾರ ಹೀರೆಮಠ, ಮೈನುದ್ದೀನ್ ಖಾಜಿ, ನಜೀರ್ ಸಾಬ್ ಮೇನೆದಾಳ, ಆಸಿಫ್ ಡಾಲಾಯತ, ಮೆಹಬೂಬಸಾಬ ಮೂಲಿಮನಿ, ಮಲ್ಲಯ್ಯ ಕೋಮಾರಿ, ಗೇಸುದಾರಾಜ ಮೂಲಿಮನಿ, ಬಸವಂತಪ್ಪ ಕಂಪ್ಲಿ, ಖಾದರಸಾಬ್ ತಹಸೀಲ್ದಾರ್‌, ಪ್ರಶಾಂತ ಗಡಾದ, ಅಂದನಯ್ಯ ಸೊಪ್ಪಿಮಠ, ಸುರೇಶಬಾಬು ಜಮಖಂಡಿಕರ, ನಾರಾಯಣಪ್ಪ ನಾಗೂರ, ವಿಷ್ಣು ರಜಪೂತ, ಬಸವಂತಪ್ಪ ಕಂಪ್ಲಿ, ರಜಾಕ ಟೇಲರ್, ಖಲೀಲಅಹಮದ್ ಚೌಧರಿ ಇತರರು ಇದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ